ADVERTISEMENT

ರಂಗೇರಿದ ಬಾಶೆಟ್ಟಿಹಳ್ಳಿ ಪ.ಪಂಚಾಯಿತಿ ಚುನಾವಣೆ: ಕೊನೆಯ ದಿನ 82 ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 2:12 IST
Last Updated 10 ಡಿಸೆಂಬರ್ 2025, 2:12 IST
ದೊಡ್ಡಬಳ್ಳಾಪುರ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಗೆ ಕಾಂಗ್ರೆಸ್‌ ಕಾರ್ಯಕರ್ತರು ಮಂಗಳವಾರ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು
ದೊಡ್ಡಬಳ್ಳಾಪುರ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಗೆ ಕಾಂಗ್ರೆಸ್‌ ಕಾರ್ಯಕರ್ತರು ಮಂಗಳವಾರ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು   

ದೊಡ್ಡಬಳ್ಳಾಪುರ: ಡಿ. 21ರಂದು ನಡೆಯಲಿರುವ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಮಂಗಳವಾರ ಒಂದೇ ದಿನ 47 ನಾಮಪತ್ರ ಸಲ್ಲಿಕೆಯಾಗಿದೆ. ಇಲ್ಲಿಯವರೆಗೆ ಒಟ್ಟು 82 ನಾಮಪತ್ರಗಳು ಸಲ್ಲಿಕೆಯಾಗಿವೆ.

19 ವಾರ್ಡ್‌ಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಅಂತಿಮವಾಗಿ ಬಿಜೆಪಿಯಿಂದ 24, ಕಾಂಗ್ರೆಸ್‌ನಿಂದ 19, ಜೆಡಿಎಸ್‌ನಿಂದ 14 ಹಾಗೂ ಪಕ್ಷೇತರರಾಗಿ 25 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಕಾಂಗ್ರೆಸ್‌ ಪಕ್ಷದಿಂದ ಒಂದೇ ದಿನ 19 ವಾರ್ಡ್‌ಗಳಿಗೂ ನಾಮಪತ್ರಗಳನ್ನು ಸಲ್ಲಿಸಿದ್ದು ವಿಶೇಷವಾಗಿತ್ತು. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ್ದರಿಂದ ಚುನಾವಣಾಧಿಕಾರಿಗಳ ಕಚೇರಿ ಮುಂದೆ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳ ಕಾರ್ಯಕರ್ತರು ಹಾಗೂ ಬೆಂಬಲಿಗರ ದಂಡೇ ನೆರೆದಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಡಿ. 10 ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಡಿ. 12ರಂದು ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ.

ADVERTISEMENT

ಕಾಂಗ್ರೆಸ್‌ನಿಂದ ಮೆರವಣಿಗೆ: ಬಾಶೆಟ್ಟಿಹಳ್ಳಿ ಬ್ಯಾಂಕ್ ವೃತ್ತದ ಬಳಿಯಿಂದ ಚುನಾವಣಾಧಿಕಾರಿಗಳ ಕಚೇರಿಯವರೆಗೆ ಕಾಂಗ್ರೆಸ್ ಬೆಂಬಲಿತ 19 ಅಭ್ಯರ್ಥಿಗಳು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಡನೆ ಮೆರವಣಿಗೆಯಲ್ಲಿ ಚುನಾವಣಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಪಕ್ಷದ ಬಾವುಟಗಳನ್ನು ಹಿಡಿದ ಕಾರ್ಯಕರ್ತರು ಪಕ್ಷದ ಪರವಾಗಿ ಘೋಷಣೆ ಕೂಗಿದರು.

ಮಾಜಿ ಶಾಸಕ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಟಿ.ವೆಂಕಟರಮಣಯ್ಯ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉತ್ತಮವಾಗಿ ಆಡಳಿತ ನೀಡುತ್ತಿದೆ. ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಮತದಾರರು ಬೆಂಬಲಿಸಬೇಕೆಂದು ಮನವಿ ಮಾಡಿದರು.

ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮಿಪತಿ, ಬಿ.ಜಿ.ಹೇಮಂತರಾಜು, ಕಾಂಗ್ರೆಸ್ ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಎಂ.ಬೈರೇಗೌಡ, ನಗರ ಘಟಕದ ಅಧ್ಯಕ್ಷ ಕೆ.ಪಿ.ಜಗನ್ನಾಥ್, ಕಸಬಾ ಬ್ಲಾಕ್ ಅಧ್ಯಕ್ಷ ಅಪ್ಪಿ ವೆಂಕಟೇಶ್, ತೂಬಗೆರೆ ಬ್ಲಾಕ್ ಅಧ್ಯಕ್ಷ ರವಿಸಿದ್ದಪ್ಪ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಿ.ಚುಂಚೇಗೌಡ, ಟಿಎಪಿಎಂಸಿಎಸ್ ಸದಸ್ಯ ವಿಶ್ವಾಸ್ ಹನುಮಂತೇಗೌಡ, ಕೆ.ಎಂ.ಕೃಷ್ಣಮೂರ್ತಿ, ಆದಿತ್ಯ ನಾಗೇಶ್, ವಿಶ್ವನಾಥ್, ಎಳ್ಳುಪುರ ರಾಮಾಂಜಿನಪ್ಪ, ಆಂಜಿನಮೂರ್ತಿ, ಜವಾಜಿ ರಾಜೇಶ್ ಇದ್ದರು.

ನಗರಸಭೆ ಉಪಚುನಾವಣೆ ನಾಲ್ವರು ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ: ದೊಡ್ಡಬಳ್ಳಾಪುರ ನಗರಸಭೆಯ 21ನೇ ವಾರ್ಡ್‌ನ ಹೇಮಾವತಿಪೇಟೆ ವಾರ್ಡ್‌ ಚುನಾವಣೆಗೆ ಈವರೆಗೆ ನಾಲ್ವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಮಂಗಳವಾರ ಪಕ್ಷೇತರರಾಗಿ ರಘುನಂದನ್ ನಾಮಪತ್ರ ಸಲ್ಲಿಸಿದರು. ಈ ಮೊದಲು ಬಿಜೆಪಿಯಿಂದ ಜಿ.ಜೆ.ನವೀನ್, ಕಾಂಗ್ರೆಸ್‌ನಿಂದ ಕೆ.ಜಿ.ದಿನೇಶ ಹಾಗೂ ಪಕ್ಷೇತರರಾಗಿ ಹೇಮಂತ್ ಕುಮಾರ್.ಜಿ.ಆರ್ ನಾಮಪತ್ರ ಸಲ್ಲಿಸಿದ್ದರು. ಒಟ್ಟು ನಾಲ್ವರು ಅಭ್ಯರ್ಥಿಗಳಿಂದ 6 ನಾಮಪತ್ರ ಸಲ್ಲಿಕೆಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.