ADVERTISEMENT

ಬಿಬಿಎಂಪಿ ಕಸದ ಲಾರಿ ಡಿಕ್ಕಿ: ಇಬ್ಬರು ಸಾವು

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2022, 5:54 IST
Last Updated 29 ನವೆಂಬರ್ 2022, 5:54 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಹುಲಿಕುಂಟೆ ಸಮೀಪ ಸೋಮವಾರ ಸಂಜೆ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದ ಸ್ಥಳದಲ್ಲಿ ಗುಂಪು ಸೇರಿರುವ ನಾಗರಿಕರು
ದೊಡ್ಡಬಳ್ಳಾಪುರ ತಾಲ್ಲೂಕಿನ ಹುಲಿಕುಂಟೆ ಸಮೀಪ ಸೋಮವಾರ ಸಂಜೆ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದ ಸ್ಥಳದಲ್ಲಿ ಗುಂಪು ಸೇರಿರುವ ನಾಗರಿಕರು   

ದೊಡ್ಡಬಳ್ಳಾಪುರ:ತಾಲ್ಲೂಕಿನ ಹುಲಿಕುಂಟೆ ಸಮೀಪ ಸೋಮವಾರ ಸಂಜೆ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್‌ ಸವಾರರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ನೆಲಮಂಗಲ ತಾಲ್ಲೂಕಿನ ಮರಳುಕುಂಟೆ ಗ್ರಾಮದ ಮಹೇಶ್‌ (27) ಮತ್ತು ಮಾರುತಿ (24) ಮೃತಪಟ್ಟವರು. ದ್ವಿಚಕ್ರವಾಹನ ಸವಾರರಿಗೆ ಡಿಕ್ಕಿ ಹೊಡೆದ ತಕ್ಷಣ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದನ್ನು ಗಮನಿಸಿದ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಬೆಂಗಳೂರು ವ್ಯಾಪ್ತಿಯಿಂದ ಕಸ ತುಂಬಿದ ಸುಮಾರು 150 ಲಾರಿಗಳು ಹುಲಿಕುಂಟೆ ಸಮೀಪದ ಚಿಗರೇನಹಳ್ಳಿಯ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕಕ್ಕೆ ಪ್ರತಿದಿನವೂ ಬರುತ್ತವೆ. ಸೆ. 4ರಂದು ಸಹ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದು ಮಾವಿನಕುಂಟೆ ನಿವಾಸಿ ರಾಜು (28) ಎಂಬುವರು ಮೃತಪಟ್ಟಿದ್ದರು. ಈ ಘಟನೆ ಮಾಸುವ ಮುನ್ನವೇ ಇಬ್ಬರು ಬಲಿಯಾಗಿದ್ದಾರೆ.

ADVERTISEMENT

ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವವರೆಗೂ ಮೃತದೇಹಗಳನ್ನು ತೆರವು ಮಾಡುವುದಿಲ್ಲ. ಬಿಬಿಎಂಪಿ ಕಸದ ಲಾರಿಗಳು ಈ ಮಾರ್ಗದಲ್ಲಿ ಬರಲು ಬಿಡುವುದಿಲ್ಲ ಎಂದು ಸ್ಥಳೀಯರು ಶಾಸಕ ವೆಂಕಟರಮಣಯ್ಯ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಅಪಘಾತ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ತಹಶೀಲ್ದಾರ್‌ ಮೋಹನಕುಮಾರಿ ಭೇಟಿ ನೀಡಿದ್ದು ಉದ್ವಿಗ್ನ ಜನರನ್ನು ಸಮಾಧಾನಪಡಿಸಿದರು.

ಮುಂಜಾಗ್ರತಾ ಕ್ರಮವಾಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ. ದಾಬಸ್‌ಪೇಟೆ ಕಡೆಯಿಂದ ದೊಡ್ಡಬಳ್ಳಾಪುರದ ಕಡೆಗೆ ಬರುವ ವಾಹನಗಳಿಗೆ ಬದಲಿ ಮಾರ್ಗದಲ್ಲಿ ಸಂಚರಿಸಲು ಪೊಲೀಸರು ವ್ಯವಸ್ಥೆ
ಕಲ್ಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.