ADVERTISEMENT

ಮಣ್ಣಿನ ಬಗ್ಗೆ ಅರಿವು ಮೂಡಿಸಿ

ಶಿಕ್ಷಣ ಫೌಂಡೇಶನ್ ಸಹಯೋಗದಲ್ಲಿ ಆರೋಗ್, ಪರಿಸರ ಜಾಗೃತಿ

​ಪ್ರಜಾವಾಣಿ ವಾರ್ತೆ
Published 16 ಜುಲೈ 2019, 12:34 IST
Last Updated 16 ಜುಲೈ 2019, 12:34 IST
‘ಹೆಜ್ಜೆ’ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ರಾಜೇಶ್.ಎಸ್.ಜಿ ಮುಕ್ಕೇನಹಳ್ಳಿ ಮಾತನಾಡಿದರು
‘ಹೆಜ್ಜೆ’ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ರಾಜೇಶ್.ಎಸ್.ಜಿ ಮುಕ್ಕೇನಹಳ್ಳಿ ಮಾತನಾಡಿದರು   

ದೊಡ್ಡಬಳ್ಳಾಪುರ: ಮಣ್ಣಿನ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಅಗತ್ಯ ಇದೆ ಎಂದು ಹೆಜ್ಜೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಸ್‌.ಜಿ.ರಾಜೇಶ್ ಮುಕ್ಕೇನಹಳ್ಳಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ತಿಪ್ಪೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಫೌಂಡೇಶನ್ ಸಹಯೋಗದಲ್ಲಿ ನಡೆದ ಆರೋಗ್ಯ ಮತ್ತು ಪರಿಸರ ಜಾಗೃತಿ ಮತ್ತು ಪ್ರೇರಣಾ 2.0ಯೋಜನೆಯಡಿ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆರೋಗ್ಯವಂತ ಮಣ್ಣಿನಿಂದ ಮಾತ್ರ ಶುದ್ಧವಾದ ಪರಿಸರ ನಿರ್ಮಾಣ ಸಾಧ್ಯ. ಈ ಮೂಲಕ ಮನುಷ್ಯನ ಬದುಕು ನಿಂತಿದೆ ಎಂಬ ಸೂಕ್ಷ್ಮ ಪ್ರಜ್ಞೆ ಮಕ್ಕಳಿಗೆ ನೀಡುವ ಅನಿವಾರ್ಯತೆ ಇದೆ. ಇದರೊಂದಿಗೆ ಮಕ್ಕಳಿಗೆ ಪರಿಸರ ಪ್ರೀತಿ ಹುಟ್ಟುಹಾಕುವ ಜವಾಬ್ದಾರಿ ಶಿಕ್ಷಕರು ಮತ್ತು ಪೋಷಕರ ಮೇಲಿದೆ. ಪರಿಸರ ಜಾಗೃತಿಯಿಂದ ಮಾತ್ರ ನಮ್ಮ ಮುಂದಿನ ಪೀಳಿಗೆ ಪರಿಸರ ಉಳಿಸಲು ಸಾಧ್ಯವಾಗುತ್ತದೆ. ಈ ಮೂಲಕ ಇಂದಿನ ಮಕ್ಕಳನ್ನು ಪರಿಸರ ಉಳಿಸುವ ಯೋಧರನ್ನಾಗಿ ಮಾಡುವ ಜವಾಬ್ದಾರಿ ಪ್ರತಿಯೊಬ್ಬರದ್ದು ಎಂದರು.

ADVERTISEMENT

ಶಿಕ್ಷಣ ಫೌಂಡೇಶನ್ ಸಹ ಸಂಯೋಜಕ ನಾರಾಯಣಸ್ವಾಮಿ ಮಾತನಾಡಿ, ಮಕ್ಕಳು ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು. ಶಿಸ್ತಿನ ಜೀವನ ನಮ್ಮದಾದಲ್ಲಿ ಉತ್ತಮ ಆರೋಗ್ಯ ಶಾಶ್ವತವಾದ ಆಸ್ತಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಶಿಕ್ಷಣ ಫೌಂಡೇಶನ್ ಸಹ ಸಂಚಾಲಕ ಕುಮಾರನಾಯ್ಕ ಮಾತನಾಡಿ, ಪರಿಸರ ನಾಶದಿಂದ ಅಪರೂಪದ ಪ್ರಾಣಿ, ಪಕ್ಷಿ ಪ್ರಬೇಧಗಳು ನಾಶವಾಗುತ್ತಿವೆ. ಪರಿಣಾಮ ಪ್ರಕೃತಿ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಪ್ರಾಣಿ, ಪಕ್ಷಿಗಳು ಬದುಕಲು ಅಗತ್ಯ ಇರುವ ಪರಿಸರ ನಿರ್ಮಾಣ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಮತ್ತು ಪರಿಸರ ಶಿಕ್ಷಣ ಫೌಂಡೇಶನ್ ಕಾರ್ಯನಿರ್ವಹಿಸುತ್ತಿದೆ ಎಂದರು.

ಪ್ರೇರಣಾ ಯೋಜನೆಯಡಿ ಪುಸ್ತಕ ವಿತರಣೆ: ಪ್ರೇರಣಾ ಶಿಕ್ಷಣ ಫೌಂಡೇಶನ್ ವತಿಯಿಂದ ವಿವಿಧ ಭಾಷಾ ಜ್ಞಾನ ಬೆಳೆಸುವ ಪುಸ್ತಕಗಳನ್ನು ಮಕ್ಕಳಿಗೆ ವಿತರಣೆ ಮಾಡಲಾಯಿತು. ಇದೆ ಸಂದರ್ಭದಲ್ಲಿ ವಿದ್ಯಾರಣ್ಯಪುರದ ಮಹಿಳಾ ದಕ್ಷತಾ ಸಮಿತಿಯಿಂದ ಉಚಿತ ನೋಟ್ ಬುಕ್‍ಗಳನ್ನು ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಶಿಕ್ಷಣ ಫೌಂಡೇಶನ್ ತಾಲ್ಲೂಕು ಸಂಯೋಜಕ ವಸಂತಕುಮಾರ್ ಮಾತನಾಡಿದರು. ಶಾಲಾ ಮುಖ್ಯಶಿಕ್ಷಕ ಟಿ.ಆರ್.ಜಯರಾಮ್, ಸಹ ಶಿಕ್ಷಕ ರಾಮಕೃಷ್ಣಯ್ಯ, ಎಂ.ಸುನೀತ, ನಜೀಮಾ ಬೇಗಮ್, ಎಸ್‍ಡಿಎಂಸಿ ಅಧ್ಯಕ್ಷ ಟಿ.ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.