
ಆನೇಕಲ್: ಆನೇಕಲ್ ತಾಲ್ಲೂಕಿನ ಹೃದಯಭಾಗದಲ್ಲಿರುವ ಚಂದಾಪುರ ಸೂರ್ಯಸಿಟಿ ಮುಖ್ಯ ರಸ್ತೆಯ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಗುಂಡಿ ಗಂಡಾಂತರದಿಂದ ಪಾರಾಗಲು ಸಾಹಸ ಮಾಡುತ್ತಿದ್ದಾರೆ.
ತಾಲ್ಲೂಕಿನ ಚಂದಾಪುರ ಆಗಮಿಸುವವರಿಗೆ ರಸ್ತೆ ಗುಂಡಿಗಳು ಸ್ವಾಗತ ಕೋರುತ್ತವೆ. ಇಲ್ಲಿ ದ್ವಿಚಕ್ರ ವಾಹನ ಚಲಾಯಿಸಬೇಕಾದರೆ ಬೈಕ್ ಸವಾರರು ಜೀವ ಕೈಯಲ್ಲಿ ಹಿಡಿದು ಸಾಗಬೇಕಿದೆ.
ಚಂದಾಪುರ–ಸೂರ್ಯಸಿಟಿ ನಡುವಿನ ಚಂದಾಪುರ ಮುಖ್ಯ ರಸ್ತೆಯನ್ನು ಅಭಿವೃದ್ಧಿಗಾಗಿ ಅಗೆದು ಜಲ್ಲಿ ಕಲ್ಲು ಹಾಕಲಾಗಿತ್ತು. ಇತ್ತೀಚಿಗೆ ನಿತ್ಯ ಸುರಿಯುತ್ತಿರುವ ಮಳೆಯಿಂದ ಕಾಮಗಾರಿ ಸ್ಥಗಿತವಾಗಿದೆ. ಕಾಮಗಾರಿ ಅರ್ಧಕ್ಕೆ ಸ್ಥಗಿತವಾಗಿರುವ ಕಾರಣ ಜಲ್ಲಿ ಮೇಲೆ ಎದ್ದು ಬಂದಿದ್ದು, ಈ ರಸ್ತೆ ಸಂಚಾರ ತಂತಿ ಮೇಲಿನ ನಡಿಗೆಯಂತಾಗಿದೆ.
ಚಂದಾಪುರ ರಸ್ತೆ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡಿರುವುದರಿಂದ ರಸ್ತೆ ಧೂಳುಮಯವಾಗಿದೆ. ಧೂಳಿನಿಂದ ರಸ್ತೆಯಲ್ಲಿ ಸಂಚರಿಸಲು ಕಷ್ಟವಾಗುತ್ತಿದೆ. ಮಳೆ ಬಂದರೆ ರಸ್ತೆ ಕೆಸರು ಗದ್ದೆಯಾದಂತಾಗುತ್ತದೆ.
ಚಂದಪುರ ಸೂರ್ಯಸಿಟಿ – ಚಂದಾಪುರ – ಹೀಲಲಿಗೆ – ರಾಮಸಾಗರ ರಸ್ತೆಯೂ ಹದಗೆಟ್ಟಿದ್ದು ಚಂದಾಪುರದಿಂದ ದೊಮ್ಮಸಂದ್ರಕ್ಕೆ ಸಾಗುವವರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ರಸ್ತೆಯ ತುಂಬೆಲ್ಲಾ ಗುಂಡಿಗಳು ಬಿದ್ದಿರುವುದರಿಂದ ಗುಂಡಿಗಳ ಮಧ್ಯೆ ಸಾಗುವುದು ಕಷ್ವವಾಗಿದೆ. ವಾಹನಗಳಲ್ಲಿ ಈ ರಸ್ತೆ ಸಂಚರಿಸುವವರಿಗೆ ಬೆನ್ನು ನೋವು ಕಟ್ಟಿಟ್ಟಬುತ್ತಿ ಎನ್ನುತ್ತಾರೆ ಪ್ರತಿದಿನ ಚಂದಾಪುರ-ದೊಮ್ಮಸಂದ್ರ ರಸ್ತೆಯಲ್ಲಿ ಸಂಚರಿಸುವ ಚೇತನ್ ರೆಡ್ಡಿ.
ಒಂದು ಗುಂಡಿಯಾದರೆ ತಪ್ಪಿಸಿ ಸಾಗಬಹುದು ಆದರೆ ರಸ್ತೆಯೆಲ್ಲಾ ಗುಂಡಿಗಳಾದರೆ ಸಂಚರಿಸುವುದೇ ಕಷ್ಟ. ಚಂದಾಪುರ ಮುಖ್ಯ ರಸ್ತೆ ಕಾಮಗಾರಿಗೆ ವೇಗ ನೀಡಿ ಕಾಮಗಾರಿಯನ್ನು ಮುಗಿಸಬೇಕು. ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ಸ್ಥಳೀಯರ ಬೇಡಿಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.