
ದೊಡ್ಡಬಳ್ಳಾಪುರ: ತಾಲ್ಲೂಕಿನ ತೂಬಗೆರೆ ರಸ್ತೆಯ ರಾಮಯ್ಯನಪಾಳ್ಯ ಸಮೀಪ ಮಂಗಳವಾರ ಬೆಳಿಗ್ಗೆ ನಡೆದ ದ್ವಿಚಕ್ರ ವಾಹನ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಸವಾರರು ಮೃತಪಟ್ಟಿದ್ದಾರೆ.
ಮೃತರನ್ನು ಚಿಕ್ಕತಿಮ್ಮನಹಳ್ಳಿ ನಿವಾಸಿ ನಂದನ್‌ಕುಮಾರ್ (22) ಮತ್ತು ರವಿಕುಮಾರ್ (24) ಎಂದು ಗುರುತಿಸಲಾಗಿದೆ.
ದೊಡ್ಡಬಳ್ಳಾಪುರಕ್ಕೆ ಕೆಲಸಕ್ಕೆಂದು ದ್ವಿಚಕ್ರ ವಾಹನದಲ್ಲಿ ಬರುವ ವೇಳೆ ರಾಮಯ್ಯನಪಾಳ್ಯದ ಬಳಿ ದ್ವಿಚಕ್ರ ವಾಹನ ಅಪಘಾತಕ್ಕೀಡಾಗಿದೆ. ಬೈಕ್‌ನ ನಿಯಂತ್ರಣ ತಪ್ಪಿ ನೆಲಕ್ಕೆ ಬಿದ್ದ ಯುವಕರ ಮೇಲೆ ಆಟೊ ಹರಿದು ಪರಾರಿಯಾಗಿದೆ ಎಂದು ಶಂಕಿಸಲಾಗಿದೆ.
ಅಪಘಾತ ಸ್ಥಳಕ್ಕೆ ಗ್ರಾಮಾಂತರ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ಪ್ರಸಾದ್, ಡಿವೈಎಸ್‌ಪಿ ರವಿ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಸಾಧಿಕ್‌ಪಾಷಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಸ್ತೆ ನಿರ್ವಹಣೆ ಕೊರತೆ: ನಗರದ ಮುದ್ದನಾಯಕನಪಾಳ್ಯದಿಂದ ತೂಬಗೆರೆ ಹೋಬಳಿ ಕೇಂದ್ರಕ್ಕೆ ಹೋಗುವ ಈ ರಸ್ತೆಯಲ್ಲಿ ಹತ್ತಾರು ಗ್ರಾಮಗಳ ಜನರು ಪ್ರತಿನಿತ್ಯ ಸಂಚರಿಸುತ್ತಾರೆ. ಅಲ್ಲದೆ ಗ್ರಾಮೀಣ ಭಾಗದ ಮೂಲಕ ಚಿಕ್ಕಬಳ್ಳಾಪುರಕ್ಕೆ ಹೋಗುವ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳು, ಲಾರಿಗಳು ಸಂಚರಿಸುತ್ತವೆ. ರಸ್ತೆಯ ಅಗಲ ಮಾತ್ರ ಕೇವಲ 20 ಅಡಿಗಳಷ್ಟು ಇದೆ.
ರಸ್ತೆಯ ಎರಡೂ ಬದಿಯಲ್ಲೂ ಪೊದೆ ಬೆಳೆದಿರುವುದರಿಂದ ರಸ್ತೆ ತಿರುವುಗಳಲ್ಲಿ ಹಾಗೂ ರಸ್ತೆ ಬದಿಯಲ್ಲಿ ಓಡಾಡುವುದೇ ಕಷ್ಟವಾಗಿದೆ. ಈ ರಸ್ತೆಗೆ ಡಾಂಬರು ಹಾಕಿ ಸುಮಾರು ಒಂದುವರೆ ವರ್ಷವಷ್ಟೇ ಕಳೆದಿದೆ. ರಸ್ತೆ ತಿರುವುಗಳಲ್ಲಿ ಸೂಚನಾ ಫಲಕ ಇಲ್ಲ. ಕೆಂಪು ರೇಡಿಯಂ ಸ್ಟಿಕ್ಕರ್‌ಗಳು ಇಲ್ಲ. ರಸ್ತೆ ನಿಮಾರ್ಣ ಮಾಡಿದ ನಂತರ ಕನಿಷ್ಠ ಮೂರರಿಂದ ಐದು ವರ್ಷಗಳ ನಿರ್ವಹಣೆ ಇರುತ್ತದೆ. ಈ ರಸ್ತೆ ನಿರ್ವಹಣೆ ಇಲ್ಲದೆ ಇರುವುದೇ ಅಪಘಾತಗಳು ಹೆಚ್ಚಾಗಲು ಕಾರಣವಾಗಿದೆ ಎಂದು ಸ್ಥಳೀಯ ಯುವ ಮುಖಂಡ ಓಂಪ್ರಕಾಶ್ ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.