ADVERTISEMENT

ಕೆಜಿಎಫ್‌ನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ

ಪಕ್ಷದ ಅಭ್ಯರ್ಥಿ ಚಿದಾನಂದ ಗೌಡ ಪರ ಪ್ರಚಾರ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2020, 2:37 IST
Last Updated 23 ಅಕ್ಟೋಬರ್ 2020, 2:37 IST
ಕೆಜಿಎಫ್‌ ರಾಬರ್ಟಸನ್‌ಪೇಟೆಯಲ್ಲಿ ಗುರುವಾರ ನಡೆದ ಕಾರ್ಯಕರ್ತರ ಸಭೆಯನ್ನು ಬಿಜೆಪಿ ರಾಜ್ಯ ಕಾರ್ಯದರ್ಶಿ ಕೇಶವಪ್ರಸಾದ್‌ ಉದ್ಘಾಟಿಸಿದರು. ಮುಖಂಡರಾದ ಕಮಲನಾಥನ್‌, ಸುರೇಶ್‌ ನಾರಾಯಣಕುಟ್ಟಿ ಹಾಜರಿದ್ದರು
ಕೆಜಿಎಫ್‌ ರಾಬರ್ಟಸನ್‌ಪೇಟೆಯಲ್ಲಿ ಗುರುವಾರ ನಡೆದ ಕಾರ್ಯಕರ್ತರ ಸಭೆಯನ್ನು ಬಿಜೆಪಿ ರಾಜ್ಯ ಕಾರ್ಯದರ್ಶಿ ಕೇಶವಪ್ರಸಾದ್‌ ಉದ್ಘಾಟಿಸಿದರು. ಮುಖಂಡರಾದ ಕಮಲನಾಥನ್‌, ಸುರೇಶ್‌ ನಾರಾಯಣಕುಟ್ಟಿ ಹಾಜರಿದ್ದರು   

ಕೆಜಿಎಫ್‌: ‘ಸಮಾಜವನ್ನು ಸರಿದಾರಿಯಲ್ಲಿ ತೆಗೆದುಕೊಂಡು ಹೋಗಬಲ್ಲ ಪ್ರಬುದ್ಧರು ವಿಧಾನ ಪರಿಷತ್‌ನಲ್ಲಿರಬೇಕು. ವಿದ್ಯಾವಂತರ ಪ್ರತಿನಿಧಿಯಾಗುವ ಅಭ್ಯರ್ಥಿಗೆ ಅಂತಹ ಸಾಮರ್ಥ್ಯ ಇರಬೇಕು. ಅಂತಹವರನ್ನೇ ಚುನಾವಣೆಯಲ್ಲಿ ಗೆಲ್ಲಿಸಬೇಕು’ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕೇಶವಪ್ರಸಾದ್‌ ಹೇಳಿದರು.

ರಾಬರ್ಟಸನ್‌ಪೇಟೆಯಲ್ಲಿ ಗುರುವಾರ ನಡೆದ ಕಾರ್ಯಕರ್ತರ ಮತ್ತು ಆಗ್ನೇಯ ಪದವೀಧರ ಕ್ಷೇತ್ರದ ಮತದಾರರ ಸಭೆಯಲ್ಲಿ ಅವರು ಮಾತನಾಡಿದರು.

ದೇಶವನ್ನು ಸಂಕಷ್ಟದ ಪರಿಸ್ಥಿತಿಯಲ್ಲಿ ವಿದ್ಯಾವಂತರು ಕಾಪಾಡಿದ್ದಾರೆ. ಇಡೀ ಜಗತ್ತು ಇಂದು ಭಾರತದತ್ತ ನೋಡುವ ಸಂದರ್ಭದಲ್ಲಿ ಜನಪ್ರತಿನಿಧಿಗಳು ವಿಷಯದ ಗಂಭೀರತೆಯನ್ನು ಇಟ್ಟುಕೊಂಡವರಾಗಿರಬೇಕು. ವಿದ್ಯಾವಂತರ ಆಶೋತ್ತರಗಳನ್ನು ಮೇಲ್ಮನೆಯಲ್ಲಿ ಬಿಂಬಿಸಬೇಕು. ಈ ನಿಟ್ಟಿನಲ್ಲಿ ತಳಮಟ್ಟದಿಂದ ಬಂದ ಬಿಜೆಪಿ ಅಭ್ಯರ್ಥಿ ಚಿದಾನಂದ ಗೌಡ ಅರ್ಹರಿದ್ದಾರೆ ಎಂದು
ಹೇಳಿದರು.

ADVERTISEMENT

ಮಧ್ಯವರ್ತಿಗಳನ್ನು ದೂರವಿಡಲು ಡಿಜಿಟಲ್‌ ಪರಿಕಲ್ಪನೆ, ಸ್ವಚ್ಛ ಭಾರತ ಯೋಜನೆ ಜಾರಿ, ಕೋವಿಡ್‌ ಸಮರ್ಪಕ ನಿರ್ವಹಣೆಯು ಕೇಂದ್ರ ಸರ್ಕಾರದ ದೂರದೃಷ್ಟಿಯನ್ನು ಎತ್ತಿ ತೋರುತ್ತಿದೆ. ಆದ್ದರಿಂದ ಪಕ್ಷಕ್ಕೆ ನಿಷ್ಠವಾಗಿರುವವರು ಕೂಡ ಜನಪ್ರತಿನಿಧಿಗಳಾಗಬೇಕು ಎಂದು ತಿಳಿಸಿದರು.

‘ಎರಡು ದಶಕಗಳಿಂದ ಮುಚ್ಚಿರುವ ಬಿಜಿಎಂಎಲ್‌ ಪುನರುಜ್ಜೀವನಕ್ಕೆ ಕೇಂದ್ರ ಸರ್ಕಾರ ಪ್ರಯತ್ನ ನಡೆಸುತ್ತಿದೆ. ರಾಜ್ಯ ಸರ್ಕಾರ ಮತ್ತು ಸಂಸದರು ಕೂಡ ಈ ನಿಟ್ಟಿನಲ್ಲಿ ಸಕ್ರಿಯರಾಗಿದ್ದಾರೆ’ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಕಮಲನಾಥನ್‌
ಹೇಳಿದರು.

‘ಭ್ರಷ್ಟಾಚಾರರಹಿತ ಆಡಳಿತ ನೀಡಿರುವ ಬಿಜೆಪಿಗೆ ವಿದ್ಯಾವಂತರು ಮತ ಹಾಕಬೇಕು’ ಎಂದು ಜಿಲ್ಲಾ ಕಾರ್ಯದರ್ಶಿ ಸುರೇಶ್‌ ನಾರಾಯಣಕುಟ್ಟಿ ಮನವಿ ಮಾಡಿದರು.

ಮುಖಂಡರಾದ ವಾಸು, ಕೋಳಿನಾಗರಾಜ್‌, ರವಿಕುಮಾರ್‌, ವಿಜಯಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.