
ದೊಡ್ಡಗಟ್ಟಿಗನಬ್ಬೆ (ಹೊಸಕೋಟೆ): ‘ರಸ್ತೆ ಸುರಕ್ಷತೆ ಕೇವಲ ನಿಯಮಗಳ ಪಾಲನೆಯಲ್ಲ. ಅದು ಜೀವ ಉಳಿಸುವ ಜವಾಬ್ದಾರಿಯೂ ಹೌದು. ಅಪಘಾತಕ್ಕೀಡಾದ ಅನಿರೀಕ್ಷಿತ ಸಂತ್ರಸ್ತರಿಗೆ ರಕ್ತ ನೀಡುವುದು ಶ್ರೇಷ್ಠ ಸೇವೆ’ ಎಂದು ಸುಗುಣ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಹಿರಿಯ ವ್ಯವಸ್ಥಾಪಕ ಫ್ರಾನ್ಸಿಸ್ ಪ್ರವೀಣ್ ಹೇಳಿದರು.
ತಾಲ್ಲೂಕಿನ ದೊಡ್ಡ ಗಟ್ಟಿಗನಬ್ಬೆ ಬಳಿ ಇರುವ ಸುಗುಣ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಆವರಣದಲ್ಲಿ ಸರ್.ಸಿ.ವಿ.ರಾಮನ್ ಜನರಲ್ ಆಸ್ಪತ್ರೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ರಸ್ತೆ ಅಪಘಾತಗಳಲ್ಲಿ ಸಕಾಲಕ್ಕೆ ರಕ್ತ ಸಿಗದೆ ಸಾವು ಸಂಭವಿಸುತ್ತಿರುವುದನ್ನು ತಪ್ಪಿಸಲು ರಕ್ತದಾನಕ್ಕೆ ಮುಂದಾಗಬೇಕು. ಶಿಬಿರದಲ್ಲಿ 35 ಯೂನಿಟ್ ರಕ್ತ ಸಂಗ್ರಹವಾಗಿದೆ. ಕಾರ್ಮಿಕರು ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.
ಸಿ.ವಿ. ರಾಮನ್ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶೀಲಾ ಮಾತನಾಡಿ, ಕಾರ್ಮಿಕರು ತಮ್ಮ ದಿನನಿತ್ಯದ ಕಷ್ಟದ ಕೆಲಸದ ನಡುವೆಯೂ ಇಂತಹ ಸಾಮಾಜಿಕ ಕಳಕಳಿ ಮೆರೆದಿರುವುದು ಮೆಚ್ಚುವಂತಹದ್ದು ಎಂದರು
ಬಾಲಾಜಿ, ಕೃಷ್ಣಮೂರ್ತಿ, ಬಾಲು, ಗಿರಿಧರನ್, ಹೊಸಕೋಟೆ ಸರ್ಕಾರಿ ಆಸ್ಪತ್ರೆ ಪ್ರಯೋಗಾಲಯದ ರಕ್ತ ಸಂಗ್ರಹ ಘಟಕದ ಅಧಿಕಾರಿ ಶುಭಂ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.