ಆನೇಕಲ್: ತಾಲ್ಲೂಕಿನ ಹಳೆ ಚಂದಾಪುರದ ರೈಲ್ವೆ ಸೇತುವೆ ಬಳಿ ಬುಧವಾರ ಅನಾಥವಾಗಿ ಬಿದ್ದಿದ್ದ ಸೂಟ್‌ಕೇಸ್‌ನಲ್ಲಿ ಸುಮಾರು 16 ವಯಸ್ಸಿನ ಬಾಲಕಿಯ ಶವ ಪತ್ತೆಯಾಗಿದೆ.
ಬಾಲಕಿಯ ಕೈಕಾಲು ಮಡಚಿ ಸೂಟ್‌ಕೇಸ್‌ನಲ್ಲಿ ತುಂಬಲಾಗಿದ್ದು, ಕಿವಿ ಮತ್ತು ಮೂಗಿನಲ್ಲಿ ರಕ್ತಸ್ರಾವವಾಗಿರುವ ಕುರುಹುಗಳಿವೆ. ಬಾಲಕಿಯನ್ನು ಬೇರೆಡೆ ಕೊಲೆ ಮಾಡಿದ ನಂತರ ಶವವನ್ನು ಸೂಟ್‌ಕೇಸ್‌ನಲ್ಲಿಟ್ಟು ರೈಲಿನಿಂದ ಎಸೆದಿರಬಹುದು ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ಮತ್ತು ಸೂರ್ಯ ಸಿಟಿ ಪೊಲೀಸರು ಶಂಕಿಸಿದ್ದಾರೆ.
ರಸ್ತೆಯಲ್ಲಿ ಅನಾಥವಾಗಿ ಬಿದ್ದಿದ್ದ ನೀಲಿ ಬಣ್ಣದ ಸೂಟ್‌ಕೇಸ್ ತೆರೆದುಕೊಂಡಿತ್ತು. ಅದರಲ್ಲಿ ಬಾಲಕಿಯ ಮುಖ ಕಂಡು ಸೂರ್ಯಸಿಟಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಸೂರ್ಯಸಿಟಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸಂಜೀವ್ ಮಹಾಜನ್ ಸೇರಿದಂತೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಸೂಟ್‌ಕೇಸ್ ತೆರೆದಾಗ ಕೈಕಾಲು ಮಡಚಿ ತುರುಕಿದ್ದ ಬಾಲಕಿಯ ಶವ ಕಂಡು ಬಂದಿದೆ.
ಸೂರ್ಯಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣವನ್ನು ವಿವಿಧ ಆಯಾಮಗಳಿಂದ ತನಿಖೆ ನಡೆಸಬೇಕಾಗಿದೆ ಎಂದು ಇನ್‌ಸ್ಟೆಕ್ಟರ್ ಮಹಾಜನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.