
ಕನಕಪುರ: ಗಡಿಭಾಗದ ಸರ್ಕಾರಿ ಕನ್ನಡ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ವಿಶೇಷ ಶಿಕ್ಷಣ ನೀತಿ ರೂಪಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಪಿ.ವಿ. ನಿರಂಜನಾರಾಧ್ಯ ಒತ್ತಾಯಿಸಿದ್ದಾರೆ.
ಬೂದುಗುಪ್ಪೆ ಬಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ಗಡಿಭಾಗದ ಕನ್ನಡ ಶಾಲೆಗಳ ಸ್ಥಿತಿಗತಿ ಹಾಗೂ ಪರಿಹಾರೋಪಾಯ ಸಮಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಮಾತೃಶ್ರೀ ಸಂಸ್ಥೆ, ನಮನ ಚಾರಿಟಬಲ್ ಟ್ರಸ್ಟ್ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಜಂಟಿಯಾಗಿ ಈ ಸಮಾಲೋಚನಾ ಸಭೆ ಆಯೋಜಿಸಿದ್ದವು.
ಗಡಿಭಾಗದ ಸರ್ಕಾರಿ ಶಾಲೆಗಳು ಅಭಿವೃದ್ಧಿ ಆಗಬೇಕಾದರೆ ಕಾಯಂ ಶಿಕ್ಷಕರನ್ನು ನೇಮಿಸಬೇಕು. ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲು ಶಿಕ್ಷಣ ನೀತಿ ಜಾರಿಗೊಳಿಸಬೇಕು ಎಂದು ಅಭಿಪ್ರಾಯಪಟ್ಟರು.
ಗಡಿಭಾಗದ ಕನ್ನಡ ಶಾಲೆಗಳ ಸ್ಥಿತಿಗತಿ ಹಾಗೂ ಪರಿಹಾರೋಪಾಯ ವಿಷಯವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕೆ.ಟಿ.ವೆಂಕಟೇಶ್ ಮಂಡಿಸಿದರು.
ಗಡಿಭಾಗದ ಸರ್ಕಾರಿ ಶಾಲೆಗಳು ಬರೀ ಮಾತಿನಲ್ಲಿ ಹೇಳಿದರೆ ಉಳಿಯಲ್ಲ. ಶಾಲೆಗಳನ್ನು ದತ್ತು ಪಡೆದು ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ ಸಲಹೆ ನೀಡಿದರು.
‘ನಮ್ಮೂರ ಶಾಲೆಗೆ ನಮ್ಮೂರ ಯೋಜನೆ’ ಕಾರ್ಯಕ್ರಮದ ಅಡಿ ಗಡಿಭಾಗದ ಕನ್ನಡ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಸರ್ಕಾರಿ ಶಾಲಾ ಮಕ್ಕಳಿಗೆ ಅಗತ್ಯ ಕಲಿಕಾ ಸಾಮಗ್ರಿ ಮತ್ತು ಕ್ರೀಡೋಪಕರಣಗಳ ವಿತರಣೆ ಮಾಡಲಾಗುತ್ತಿದೆ ಎಂದು ನಮನ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ನಮನ ಚಂದ್ರು ಹೇಳಿದರು.
ಬೂದಿಗುಪ್ಪೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಕೋಮಲ ಎ.ಸಿ ಅಧ್ಯಕ್ಷತೆ ವಹಿಸಿದ್ದರು. ಮಾತೃಶ್ರೀ ಸಂಸ್ಥೆ ಗೌರವಾಧ್ಯಕ್ಷ ಡಿ.ವೆಂಕಟರಮಣಸ್ವಾಮಿ, ಸಹ ಪ್ರಾಧ್ಯಾಪಕ ವಿಶ್ವರಾಧ್ಯ, ಡಾ.ಪ್ರತಿಮಾದೇವಿ ಚರ್ಚೆಯಲ್ಲಿ ಭಾಗವಹಿಸಿದ್ದರು.
ಗಡಿ ಭಾಗದ ಸರ್ಕಾರಿ ಶಾಲಾ ಶಿಕ್ಷಕರಾದ ಸತೀಶ್, ಮಹದೇವ ರಾವ್, ನಟರಾಜ್ ವೈ.ಸಿ, ಅವಿನಾಶ್, ಮರಸಪ್ಪ ರವಿ, ಕೂಗಿ ಗಿರಿಯಪ್ಪ, ಮಹಮ್ಮದ್ ಯಾಕೂದ್ ಪಾಷಾ, ಚಂದ್ರಾಜ್, ಲೋಕೇಶ್ ಚರ್ಚೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.