ADVERTISEMENT

ಭೂಸ್ವಾಧೀನ ದರ ನಿಗದಿ ಸಭೆಗೆ ಬಹಿಷ್ಕಾರ

ಕುಂದಾಣ-, ಚಪ್ಪರಕಲ್ಲು ಬಳಿ 867 ಎಕರೆ ಭೂಮಿ ವಶಕ್ಕೆ ರೈತರ ವಿರೋಧ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2022, 6:20 IST
Last Updated 21 ಅಕ್ಟೋಬರ್ 2022, 6:20 IST
ದೇವನಹಳ್ಳಿ ತಾಲ್ಲೂಕಿನ ಕುಂದಾಣ ಬಳಿಯ ಕೃಷ್ಣೋದಯ ಕಲ್ಯಾಣ ಮಂಟಪದ ಮುಂಭಾಗ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ರೈತರು ಸಭೆಗೆ ಬಹಿಷ್ಕರಿಸಿದರು
ದೇವನಹಳ್ಳಿ ತಾಲ್ಲೂಕಿನ ಕುಂದಾಣ ಬಳಿಯ ಕೃಷ್ಣೋದಯ ಕಲ್ಯಾಣ ಮಂಟಪದ ಮುಂಭಾಗ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ರೈತರು ಸಭೆಗೆ ಬಹಿಷ್ಕರಿಸಿದರು   

ದೇವನಹಳ್ಳಿ: ಕೆಐಎಡಿಬಿಯಿಂದ ಕೈಗಾರಿಕಾ ಉದ್ದೇಶಕ್ಕೆ ಸ್ವಾಧೀನಪಡಿಸಿಕೊಳ್ಳುವಭೂಮಿಗೆ ದರ ನಿಗದಿ ಸಂಬಂಧ ತಾಲ್ಲೂಕಿನ ಕುಂದಾಣ-ಚಪ್ಪರಕಲ್ಲು ಬಳಿಯ ಕೃಷ್ಣೋದಯ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಸಭೆಗೆ ರೈತರು ಬಹಿಷ್ಕಾರ ಹಾಕಿದರು. ದರ ನಿಗದಿ ಸಂಬಂಧ ಬೆಳಿಗ್ಗೆಯೇ ಬಂದಿದ್ದಜಿಲ್ಲಾಧಿಕಾರಿ ಆರ್‌. ಲತಾ ‌ವಾಪಸ್‌ ಹೋದರು.

ಅರವನಹಳ್ಳಿ, ದೊಡ್ಡಗೊಲ್ಲಹಳ್ಳಿ, ಚಪ್ಪರದಹಳ್ಳಿ, ಭೈರದೇನಹಳ್ಳಿ ಸುತ್ತಮುತ್ತ ಕೆಐಎಡಿಬಿ 867 ಎಕರೆ ಜಮೀನಿನ ಸ್ವಾಧೀನಕ್ಕೆ ಮುಂದಾಗಿದ್ದು, ಈಗಾಗಲೇ ಅಂತಿಮ ಅಧಿಸೂಚನೆಯನ್ನೂ ಹೊರಡಿಸಿದೆ. ಹಾಗಾಗಿ, ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ದರ ನಿಗದಿ ಸಭೆ ಕರೆಯಲಾಗಿತ್ತು. ಈ ಭಾಗದ ಜಮೀನಿನ ರೈತರು ಮತ್ತು ಮಾಲೀಕರಿಗೆ ನೋಟಿಸ್‌ ನೀಡಿ ಸಭೆಗೆ ಆಹ್ವಾನಿಸಲಾಗಿತ್ತು. ಆದರೆ, ರೈತರು ಭೂಸ್ವಾಧೀನ ಪ್ರಕ್ರಿಯೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಆಕ್ರೋಶ ಹೊರಹಾಕಿದರು.

ಸಭೆಗೆ ಹಾಜರಾಗದೆ ರೈತರು ಹೊರಗಡೆಯೇ ಉಳಿದರು. ಕೆಲಕಾಲ ಕಾಯ್ದ ಜಿಲ್ಲಾಧಿಕಾರಿ ಅವರ ಜಿಲ್ಲಾಡಳಿತ ಭವನಕ್ಕೆ ಮರಳಿದರು. ಬೆಲೆ ನಿಗದಿಪಡಿಸುವ ಮೊದಲ ಸಭೆ ವಿಫಲವಾಯಿತು.

ADVERTISEMENT

ರೈತರು ಭೂಮಿ ಕೊಡುವುದಿಲ್ಲವೆಂದು ಹೇಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರೈತರೊಂದಿಗೆ ಚರ್ಚಿಸಿ ಸರ್ಕಾರದ ಹಂತದಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ ಎಲ್ಲಿ ಅವಶ್ಯಕತೆ ಇದೆಯೋ ಅಲ್ಲಿ ಸರ್ಕಾರ ಭೂಸ್ವಾಧೀನ ಪಡಿಸಿಕೊಳ್ಳುತ್ತಿದೆ. ರೈತರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಂಡು ಮುಂದಿನ ಕ್ರಮಕೈಗೊಳ್ಳಲಾಗುತ್ತದೆ. ಈಗಾಗಲೇ ಸರ್ಕಾರದ ಹಂತದಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಹಾಗಾಗಿ, ಇದನ್ನು ಕೈಬಿಡಲು ಬರುವುದಿಲ್ಲ ಎಂದು ಕೆಐಎಡಿಬಿ ಅಧಿಕಾರಿಗಳು ಹೇಳಿದರು.

ರೈತರ ಆಕ್ರೋಶ: ಕುಂದಾಣ ಹೋಬಳಿ ವ್ಯಾಪ್ತಿಯ ಫಲವತ್ತಾದ ಐದು ಗ್ರಾಮಗಳ ಭೂಮಿಯನ್ನು ಕೆಐಎಡಿಬಿಗೆ ಯಾವುದೇ ಕಾರಣಕ್ಕೂ ಕೊಡುವುದಿಲ್ಲ. ಈ ಬಗ್ಗೆ ಒಗ್ಗೂಡಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಹಿಂದೆಯೂ ಜಿಲ್ಲಾಧಿಕಾರಿ ಕಚೇರಿ ಮುಂದೆ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಲು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗಿತ್ತು. ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ರೈತರು ಎಚ್ಚರಿಸಿದರು.

ಈ ಸಂದರ್ಭದಲ್ಲಿ ದೇವನಹಳ್ಳಿ ತಹಶೀಲ್ದಾರ್‌ ಶಿವರಾಜ್, ಕೆಐಎಡಿಬಿ ವ್ಯವಸ್ಥಾಪಕ ಶಿವಾನಂದ್, ಪ್ರಥಮದರ್ಜೆ ಸಹಾಯಕ ಬಿ.ವಿ. ರಾಜು, ಭೂ ತಪಾಸಣೆ ಅಧಿಕಾರಿ ಸತ್ಯಪ್ರಕಾಶ್, ಅವಿನಾಶ್, ತಾಂತ್ರಿಕ ಸಹಾಯಕ ಸುನೀಲ್, ಕೃಷಿ ಇಲಾಖೆಯ ಉಪ ನಿರ್ದೇಶಕಿ ವಿನುತಾ, ಸಹಾಯಕ ಮುಜಾಮಿಲ್, ರಾಜಸ್ವ ನಿರೀಕ್ಷಕ ಚಿದಾನಂದ್, ಗ್ರಾಮ ಲೆಕ್ಕಿಗರಾದ ಲಾವಣ್ಯ, ರಾಮಚಂದ್ರ, ವಿಶ್ವನಾಥಪುರ ಠಾಣೆಯ ಇನ್‌ಸ್ಪೆಕ್ಟರ್‌ ನಾಗಪ್ಪ ಅಂಬಿಗೇರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.