ADVERTISEMENT

ದೊಡ್ಡಬಳ್ಳಾಪುರ | ಬಿಪಿಎಲ್‌ ಕಾರ್ಡ್‌ ರದ್ದು: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 2:09 IST
Last Updated 16 ಅಕ್ಟೋಬರ್ 2025, 2:09 IST
ದೊಡ್ಡಬಳ್ಳಾಪುರ ತಾಲ್ಲೂಕು ಕಚೇರಿ ಮುಂದೆ ಬುಧವಾರ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಕುಮಾರ್ ಶೆಟ್ಟಿ) ಬಣದಿಂದ ಪ್ರತಿಭಟನೆ ನಡೆಸಲಾಯಿತು
ದೊಡ್ಡಬಳ್ಳಾಪುರ ತಾಲ್ಲೂಕು ಕಚೇರಿ ಮುಂದೆ ಬುಧವಾರ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಕುಮಾರ್ ಶೆಟ್ಟಿ) ಬಣದಿಂದ ಪ್ರತಿಭಟನೆ ನಡೆಸಲಾಯಿತು   

ದೊಡ್ಡಬಳ್ಳಾಪುರ: ಬಿಪಿಎಲ್ ಕಾರ್ಡ್‌ ರದ್ದುಗೊಳಿಸುವ ಹುನ್ನಾರಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಕುಮಾರ್ ಶೆಟ್ಟಿ) ಬಣದಿಂದ ಬುಧವಾರ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.

ತಾಲ್ಲೂಕಿನಲ್ಲಿ ಸುಮಾರು 2,873 ಅಂತ್ಯೋದಯ, 4,470 ಎಪಿಲ್ ಕಾರ್ಡ್‌, 66,120 ಬಿಪಿಎಲ್ ಕಾರ್ಡ್ ಇವೆ. ಆದರೆ ಏಕಾಏಕಿ ಅವೈಜ್ಞಾನಿಕವಾಗಿ ಮಾನದಂಡ ರೂಪಿಸಿ 5,700 ಮಂದಿಗೆ ನೋಟಿಸ್ ನೀಡುವ ಮೂಲಕ ಪಡಿತರ ಚೀಟಿ ರದ್ದು ಮಾಡುವ ಹುನ್ನಾರಕ್ಕೆ ಇಲಾಖೆ ಮುಂದಾಗಿದೆ ಎಂದು  ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ತಾಲ್ಲೂಕು ಘಟಕದ ಅಧ್ಯಕ್ಷ ಹಮಾಮ್ ವೆಂಕಟೇಶ್, ನಗರ ಅಧ್ಯಕ್ಷ ಶ್ರೀನಗರ ಬಶೀರ್ ದೂರಿದರು.

ಪಡಿತರ ಚೀಟಿ ಅನರ್ಹಗೊಳಿಸಲು ಗ್ರಾಹಕರಿಗೆ ನೋಟಿಸ್ ನೀಡುವ ಬರದಲ್ಲಿ ಕೆಲವು ಮಾನದಂಡ ತಯಾರಿಸಿದ್ದು, ಅವು ಬಡವರ ವಿರೋಧಿ ಮನಸ್ಥಿತಿಗೆ ಸಾಕ್ಷಿಯಾಗಿದೆ. ಬಿಪಿಎಲ್ ಕಾರ್ಡ್ ರದ್ದು ಮಾಡಿ, ಎಪಿಎಲ್ ಮಾಡುವ ಉದ್ದೇಶ ಹೊಂದಿದ್ದು, ವಾರ್ಷಿಕ ಆದಾಯ ₹1,20,000, 125ಸಿಸಿ ಬೈಕ್‌, ಸಾವಿರ ಚದರ ಅಡಿ ಮನೆ ಇರುವವರಿಗೆ ನೋಟಿಸ್ ನೀಡುತ್ತಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಕೇವಲ ₹500 ದಿನ ಕೂಲಿ ಸಂಪಾದಿಸುವ ಬಡವನ ವಾರ್ಷಿಕ ಆದಾಯ ₹1.80 ಲಕ್ಷ. ಆದರೆ ಇಲಾಖೆ ವಾರ್ಷಿಕ ₹1.20 ಲಕ್ಷಕ್ಕೆ ಮಾತ್ರ ಬಿಪಿಎಲ್ ಕಾರ್ಡ್ ಎಂದು ರದ್ದು ಮಾಡಲು ಮುಂದಾಗಿದೆ. ಸಣ್ಣಪುಟ್ಟ ಅಂಗಡಿಯವರು ಸರ್ಕಾರದ ನಿಯಮಾನುಸಾರ ಆದಾಯ ತೆರಿಗೆಯಲ್ಲಿ ನೊಂದಣಿ ಮಾಡಿಸಿ, ವಹಿವಾಟು ವಿವರ ತಿಳಿಸಿದ್ದಾರೆ. ಆದರೆ ಇದೇ ಅಪರಾಧ ಎಂಬಂತೆ ₹1.50 ಲಕ್ಷ ವಾರ್ಷಿಕ ವರಮಾನ ಇದ್ದವರಿಗೆ ನೋಟಿಸ್ ನೀಡಲಾಗಿದೆ ಎಂದು ಕಿಡಿಕಾರಿದರು.

ಬಡವರ ಮೇಲಿರುವ ತಾತ್ಸಾರ ಮನೋಭಾವನೆ ತೋರಿಸುತ್ತದೆ. ಸರ್ಕಾರದ ಈ ನಿಲುವಿನಿಂದ ಬಡವರು ಬೀದಿಗೆ ಬೀಳುತ್ತಾರೆ ಎಂಬ ಪ್ರಜ್ಞೆ ಇಲ್ಲವಾಗಿದೆ. ಬಡವರು ಕೆರಳಿ ರಸ್ತೆಗಿಳಿಯುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ ಎಂದು ಎಚ್ಚರಿಕೆ ನೀಡಿದರು.

ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎಸ್.ಎಲ್.ಎನ್. ವೇಣು,ಉಪಾಧ್ಯಕ್ಷ ಜೋಗಳ್ಳಿಅಮ್ಮು,ಕಾರ್ಯದರ್ಶಿ ಮುಕ್ಕೇನಳ್ಳಿರವಿ,ಉಪಾಧ್ಯಕ್ಷ ಮಂಜಣ್ಣ, ಕಾರ್ಯದರ್ಶಿ ಸಿರಾಜ್, ರಾಮ ಮಡಿವಾಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.