ADVERTISEMENT

ಸೇತುವೆ ನಿರ್ಮಾಣಕ್ಕೆ 11ರಂದು ಚಾಲನೆ

ಅಧ್ಯಕ್ಷರ ಧರಣಿಗೆ ಬೆದರಿದ ಅಧಿಕಾರಿಗಳು: ಸಂಧಾನ ಮಾತುಕತೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 13:31 IST
Last Updated 8 ನವೆಂಬರ್ 2019, 13:31 IST
ಭದ್ರಯ್ಯ ಕಾಲೊನಿ ಸೇತುವೆ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಗುರುವಾರ ಲೋಕೋಪಯೋಗಿ ಇಲಾಖೆಯಲ್ಲಿ ಸಭೆ ನಡೆಯಿತು
ಭದ್ರಯ್ಯ ಕಾಲೊನಿ ಸೇತುವೆ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಗುರುವಾರ ಲೋಕೋಪಯೋಗಿ ಇಲಾಖೆಯಲ್ಲಿ ಸಭೆ ನಡೆಯಿತು   

ರಾಮನಗರ: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಿಡದಿ ಹೋಬಳಿಯ ಭದ್ರಯ್ಯ ಕಾಲೊನಿ ಸೇತುವೆ ನಿರ್ಮಾಣ ಕಾಮಗಾರಿಗೆ ಇದೇ 11ರಂದು ಚಾಲನೆ ದೊರೆಯಲಿದೆ.

ಗುತ್ತಿಗೆ ನೀಡಿ 9 ತಿಂಗಳಾದರೂ ಸೇತುವೆ ಕಾಮಗಾರಿ ಆರಂಭವಾಗಿಲ್ಲ. ಆದ್ದರಿಂದ ಇದೇ 8ರಂದು ಧರಣಿ ಮಾಡುವುದಾಗಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಾಣಕಲ್ ನಟರಾಜ್ ಎಚ್ಚರಿಸಿದ್ದರು. ಇದರಿಂದ ಎಚ್ಚೆತ್ತುಕೊಂಡ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಗುರುವಾರ ಸಂಧಾನ ಸಭೆ ನಡೆಸಿದರು.

ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ದುರ್ಗಪ್ಪ ಮಾತನಾಡಿ, ‘ಇದೇ 11 ರಂದು ಸೇತುವೆ ಕಾಮಗಾರಿಗೆ ಚಾಲನೆ ನೀಡಲಾಗುವುದು. ಸಂಬಂಧಪಟ್ಟ ಅಧಿಕಾರಿಗಳಿಗೆ ಕಾಮಗಾರಿಯನ್ನು ಆರಂಭಿಸುವಂತೆ ಸೂಚನೆ ನೀಡಲಾಗಿದೆ’ ಎಂದು ತಿಳಿಸಿದರು.

ADVERTISEMENT

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಾಣಕಲ್ ನಟರಾಜ್ ಮಾತನಾಡಿ, ‘ಮಾರ್ಚ್ ತಿಂಗಳಿನಲ್ಲೇ ಕ್ರಿಯಾ ಯೋಜನೆ ಜಾರಿಯಾಗಿದ್ದರೂ ಈವರೆಗೆ ಕಾಮಗಾರಿ ಆರಂಭವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಗುತ್ತಿಗೆದಾರರ ಕುಟುಂಬದಲ್ಲಿನ ಸಮಸ್ಯೆಯಿಂದಾಗಿ ಕಾಮಗಾರಿ ವಿಳಂಬವಾಗಿದೆ. ನಮ್ಮ ಕಡೆಯಿಂದಲೂ ತಪ್ಪಾಗಿದೆ. ಆಗಿರುವ ತಪ್ಪನ್ನು ಸರಿಪಡಿಸಿಕೊಂಡು ಕಾಮಗಾರಿ ಪ್ರಾರಂಭಿಸುತ್ತೇವೆ’ ಎಂದು ದುರ್ಗಪ್ಪ ತಿಳಿಸಿದರು.

‘ಅಧಿಕಾರಿಗಳು ಕಾಮಗಾರಿಗೆ ಚಾಲನೆ ನೀಡುತ್ತೇವೆ ಎಂದು ಹೇಳಿರುವುದರಿಂದ ಇದೇ 8ರಂದು ನಡೆಯಬೇಕಿದ್ದ ಧರಣಿಯನ್ನು ಹಿಂದಕ್ಕೆ ಪಡೆದಿದ್ದೇನೆ’ ಎಂದು ಗಾಣಕಲ್ ನಟರಾಜ್ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಮಾತನಾಡಿ, ‘ಊಟ ಸಿದ್ಧವಿದೆ. ಹಸಿದವರು ಇದ್ದಾರೆ. ಇಬ್ಬರು ನಡುವೆ ಬಡಿಸುವವರು ಮಾತ್ರ ಸುಮ್ಮನಿದ್ದಾರೆ. ಈ ಸ್ಥಿತಿಯಲ್ಲಿ ಭದ್ರಯ್ಯ ಕಾಲೊನಿಯ ಸೇತುವೆ ನಿರ್ಮಾಣ ಕಾಮಗಾರಿಯಾಗಿದೆ ಎಂದರು. ಕಾರ್ಯನಿರ್ವಾಹಕ ಎಂಜಿನಿಯರ್ ಜಯಗೋಪಾಲ್, ಭದ್ರಯ್ಯ ಕಾಲೊನಿಯ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.