ADVERTISEMENT

ಕಟ್ಟಡ ನಿರ್ವಹಣೆ ಅಧಿಕಾರಿಗಳ ಜವಾಬ್ದಾರಿ :ಶಾಸಕ ನಿಸರ್ಗ ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2020, 2:19 IST
Last Updated 11 ಸೆಪ್ಟೆಂಬರ್ 2020, 2:19 IST
ಅತಿಥಿಗೃಹ ಕಟ್ಟಡ ಕಾಮಗಾರಿ ಭೂಮಿಪೂಜೆಯಲ್ಲಿ ಗಣ್ಯರು ಉಪಸ್ಥಿತರಿದ್ದರು.
ಅತಿಥಿಗೃಹ ಕಟ್ಟಡ ಕಾಮಗಾರಿ ಭೂಮಿಪೂಜೆಯಲ್ಲಿ ಗಣ್ಯರು ಉಪಸ್ಥಿತರಿದ್ದರು.   

ದೇವನಹಳ್ಳಿ: ‘ಸರ್ಕಾರದಿಂದ ನಿರ್ಮಾಣ ಮಾಡುವ ಯಾವುದೇ ನೂತನ ಕಟ್ಟಡಗಳ ನಿರ್ವಹಣೆ ಅಯಾ ಇಲಾಖೆ ಅಧಿಕಾರಿಗಳ ಜವಾಬ್ದಾರಿಯಾಗಿದೆ’ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಇಲ್ಲಿನ ಪುರಸಭೆ ವಾಪ್ತಿಯಲ್ಲಿರುವ ತ್ಯಾಜ್ಯ ನಿರ್ವಹಣೆ ಘಟಕದ ಬಳಿ ಅತಿಥಿಗೃಹದ ನೂತನ ಕಟ್ಟಡಕ್ಕೆ ಭೂಮಿ ಪೂಜೆ ಮತ್ತು ನೂತನ ಶೌಚಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಸರ್ಕಾರದ ಅನುದಾನ ತಂದು ಕಾಮಗಾರಿ ನಡೆಸುತ್ತೇವೆ. ಸರ್ಕಾರದ ಅನುದಾನ ಸಾರ್ವಜನಿಕರ ತೆರಿಗೆ ಹಣ ಎಂಬುದನ್ನು ಅಧಿಕಾರಿಗಳು, ಸಾರ್ವಜನಿಕರು ಅರ್ಥ ಮಾಡಿಕೊಳ್ಳುವುದಿಲ್ಲ’ ಎಂದು ಹೇಳಿದರು.

ADVERTISEMENT

‘ದೇವನಹಳ್ಳಿ ಪುರಸಭೆ ಮತ್ತು ವಿಜಯಪುರ ಪುರಸಭೆ ವ್ಯಾಪ್ತಿಯಲ್ಲಿ ಜಾಗದ ಕೊರತೆ ಇದೆ. ಇರುವ ಜಾಗದಲ್ಲಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಈ ಹಿಂದೆ ನಿರ್ಮಾಣ ಮಾಡಿರುವ ಶೌಚಾಲಯಗಳ ಸ್ಥಿತಿ ಅಯೋಮಯವಾಗಿದೆ. ಸಮುದಾಯ ಭವನಗಳು ಹೊರತಲ್ಲ. ಸಮರ್ಪಕ ಬಳಕೆಯಾಗದಿದ್ದರೆ ಲಕ್ಷಾಂತರ ರೂಪಾಯಿ ಅನುದಾನಕ್ಕೆ ಬೆಲೆ ಇಲ್ಲವೆ? ಯಾವುದೇ ಅಭಿವೃದ್ಧಿ ಕಾಮಗಾರಿ ಸದ್ಬಳಕೆಯಾದರೆ ಮಾತ್ರ ಸಾರ್ಥಕವಾಗಲಿದೆ’ ಎಂದು ಹೇಳಿದರು.

‘ಪುರಸಭೆ ವಿಸ್ತರಣೆಗೊಳ್ಳುತ್ತಿದೆ. ಅದಕ್ಕೆ ತಕ್ಕಂತೆ ಮೂಲ ಸೌಲಭ್ಯ ನೀಡುವ ಜವಾಬ್ದಾರಿಯನ್ನು ಜನಪ್ರತಿನಿಧಿಗಳು ಮತ್ತು ಇಲಾಖೆ ಅಧಿಕಾರಿಗಳು ನಿರ್ವಹಿಸಬೇಕು. ತಾಲ್ಲೂಕಿನಲ್ಲಿ ಎರಡು ಪುರಸಭೆಗಳಿರುವುದರಿಂದ ಎರಡನ್ನು ಒಟ್ಟುಗೂಡಿಸಿ ಅವಳಿ ನಗರ ಸಭೆಯನ್ನಾಗಿಸಲು ಸರ್ಕಾರಕ್ಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಈಗಾಗಲೇ ಮನವಿ ನೀಡಿದ್ದೇನೆ’ ಎಂದು ಹೇಳಿದರು.

ಪುರಸಭೆ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್ ಮಾತನಾಡಿ, ‘2019-20ನೇ ಸಾಲಿನ 13ನೇ ಹಣಕಾಸು ನಿಧಿಯಲ್ಲಿ ಉಳಿದಿರುವ 33 ಲಕ್ಷ ವೆಚ್ಚದಲ್ಲಿ ಅತಿಥಿಗೃಹ ನಿರ್ಮಾಣ ಮಾಡಲಾಗುತ್ತಿದೆ. ಖಾಸಗಿ ಕಂಪನಿಯೊಂದು ₹ 8 ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಿಸಿಕೊಟ್ಟಿದೆ’ ಎಂದು ಹೇಳಿದರು.

ಜೆಡಿಎಸ್ ತಾಲ್ಲೂಕು ಘಟಕ ಕಾರ್ಯಾಧ‍್ಯಕ್ಷ ಆರ್.ಮುನೇಗೌಡ, ಪ್ರಧಾನ ಕಾರ್ಯದರ್ಶಿ ರವೀಂದ್ರ, ಪುರಸಭೆ ಸದಸ್ಯರಾದ ಬಾಂಬೆನಾರಾಯಣಸ್ವಾಮಿ, ಮುನಿಕೃಷ್ಣ, ಬಾಲರಾಜ್, ನಾಗೇಶ್, ಶ್ರೀಧರ ಮೂರ್ತಿ, ಜೆಡಿಎಸ್ ನಗರ ಘಟಕ ಅಧ್ಯಕ್ಷ ಮುನಿನಂಜಪ್ಪ, ಯುವ ಜೆಡಿಎಸ್ ಘಟಕ ಅಧ್ಯಕ್ಷ ಭರತ್, ತಾಲ್ಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮಂಡಿಬೆಲೆ ರಾಜಣ್ಣ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಮುನಿರಾಜು, ಮುಖಂಡ ಎಂ.ಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.