ADVERTISEMENT

ಪೌರತ್ವ ತಿದ್ದುಪಡಿ ಕಾಯ್ದೆ: ಸಂಭ್ರಮಾಚರಣೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2019, 14:15 IST
Last Updated 17 ಡಿಸೆಂಬರ್ 2019, 14:15 IST
ಆನೇಕಲ್ ತಾಲ್ಲೂಕಿನ ಸೋಲೂರು ಗ್ರಾಮದಲ್ಲಿ ಸುಷ್ಮಾ ಸ್ವರಾಜ್ ಅಭಿಮಾನಿಗಳ ಮಹಿಳಾ ವೇದಿಕೆ ವತಿಯಿಂದ ಕಾರ್ಯಕರ್ತರು ಕೇಂದ್ರ ಸರ್ಕಾರದ ನಿರ್ಧಾರವನ್ನು ಅಭಿನಂದಿಸಿ ಸಿಹಿ ಹಂಚಿ ಸಂಭ್ರಮಿಸಿದರು
ಆನೇಕಲ್ ತಾಲ್ಲೂಕಿನ ಸೋಲೂರು ಗ್ರಾಮದಲ್ಲಿ ಸುಷ್ಮಾ ಸ್ವರಾಜ್ ಅಭಿಮಾನಿಗಳ ಮಹಿಳಾ ವೇದಿಕೆ ವತಿಯಿಂದ ಕಾರ್ಯಕರ್ತರು ಕೇಂದ್ರ ಸರ್ಕಾರದ ನಿರ್ಧಾರವನ್ನು ಅಭಿನಂದಿಸಿ ಸಿಹಿ ಹಂಚಿ ಸಂಭ್ರಮಿಸಿದರು   

ಆನೇಕಲ್: ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಿರುವುದು ಸ್ವಾಗತಾರ್ಹವಾಗಿದೆ. ಅಕ್ರಮ ನುಸುಳುಕೋರರಿಗೆ ಇದರಿಂದಾಗಿ ತಕ್ಕ ಪಾಠ ಕಲಿಸುವಂತಾಗಿದೆ. ರಾಜಕೀಯ ಕಾರಣಗಳಿಗಾಗಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುವುದು ಸಲ್ಲದು ಎಂದು ಜೈ ಜಮದಗ್ನಿ ಸಾತ್ವಿಕರ ರಕ್ಷಣಾ ಸೇನೆಯ ಅಧ್ಯಕ್ಷ ಸಿ.ತೋಪಯ್ಯ ತಿಳಿಸಿದರು.

ಅವರು ತಾಲ್ಲೂಕಿನ ಸೋಲೂರು ಗ್ರಾಮದಲ್ಲಿ ಸುಷ್ಮಾ ಸ್ವರಾಜ್‌ ಅಭಿಮಾನಿಗಳ ಮಹಿಳಾ ವೇದಿಕೆ ವತಿಯಿಂದ ಕೇಂದ್ರ ಸರ್ಕಾರದ ನಿರ್ಧಾರವನ್ನು ಅಭಿನಂದಿಸಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೇಂದ್ರ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿ ಮಸೂದೆಯನ್ನು ಬೆಂಬಲಿಸಿದ ಸಂಸತ್‌ನ ನಿರ್ಧಾರ ಅತ್ಯಂತ ಮಹತ್ವದ ನಿರ್ಧಾರವಾಗಿದೆ. ನರೇಂದ್ರ ಮೋದಿ ಅವರ ದಿಟ್ಟ ನಿರ್ಧಾರಗಳನ್ನು ಬೆಂಬಲಿಸಿ ಇಡೀ ದೇಶ ಅವರ ಪರವಾಗಿದೆ ಎಂದು ಹೇಳಿದರು.

ADVERTISEMENT

ಎಲ್ಲ ವರ್ಗಗಳು ಕೇಂದ್ರ ಸರ್ಕಾರದ ನಿರ್ಧಾರವನ್ನು ಬೆಂಬಲಿಸುತ್ತಿವೆ. ಕಾಂಗ್ರೆಸ್ ಪಕ್ಷವು ಮತಬ್ಯಾಂಕ್‌ ರಾಜಕಾರಣವನ್ನು ಕೈಬಿಟ್ಟು ದೇಶದ ಹಿತ ದೃಷ್ಠಿಯಿಂದ ಮತ್ತು ಅಭಿವೃದ್ಧಿಯ ದೃಷ್ಠಿಯಿಂದ ರಾಜಕಾರಣ ಮಾಡಬೇಕು ಎಂದರು.

ವೇದಿಕೆಯ ಪ್ರಧಾನ ಕಾರ್ಯದರ್ಶಿ ಶಕುಂತಲಮ್ಮ ಮಾತನಾಡಿ, ಮಹಿಳಾ ಸಂಘಗಳು ಕೇಂದ್ರದ ತೀರ್ಮಾನವನ್ನು ಬೆಂಬಲಿಸಿ ಇದರ ಅವಶ್ಯಕತೆಯನ್ನು ಜನರಿಗೆ ತಿಳಿಸುವ ಸಲುವಾಗಿ ಗ್ರಾಮ ಗ್ರಾಮಗಳಲ್ಲೂ ಜಾಗೃತಿ ಅಭಿಯಾನವನ್ನು ರೂಪಿಸಲಿವೆ. ಈ ಮೂಲಕ ಕಾಯ್ದೆಯನ್ನು ಬೆಂಬಲಿಸಲಾಗುವುದು. ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಿಳಿಸುವ ಮತ್ತು ಅವುಗಳನ್ನು ಸಮರ್ಪಕವಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಮಹಿಳೆಯರು ಮುಂಚೂಣಿಯಲ್ಲಿ ಕೆಲಸ ಮಾಡಲು ವೇದಿಕೆ ಶ್ರಮಿಸಲಿದೆ ಎಂದರು.

ವೇದಿಕೆಯ ಅಧ್ಯಕ್ಷೆ ವಿ.ರೇಣುಕಾ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರ ಕೈಗೊಂಡಿರುವ ಈ ತೀರ್ಮಾನ ದಿಟ್ಟ ತೀರ್ಮಾನವಾಗಿದೆ. ಓಟ್ ಬ್ಯಾಂಕ್‌ ರಾಜಕಾರಣ ಮಾಡದೇ ದೇಶದ ಸಮಗ್ರತೆ, ಏಕತೆಯನ್ನು ಗುರಿಯಾಗಿಸಿಕೊಂಡು ಕಾಯ್ದೆಯನ್ನು ಜಾರಿಗೊಳಿಸಿದೆ. ಹಾಗಾಗಿ ಮಹಿಳಾ ಸಂಘಟನೆಗಳು ಉತ್ತಮ ಕೆಲಸಕ್ಕೆ ಬೆಂಬಲ ಸೂಚಿಸಲು ಆಂದೋಲವನ್ನು ರೂಪಿಸಬೇಕು ಎಂದರು.

ವೇದಿಕೆಯ ಸದಸ್ಯರಾದ ಜ್ಯೋತಿ, ದೀಪಾ, ರೇಣುಕಾ, ಲಕ್ಷ್ಮಮ್ಮ, ಗೌರಮ್ಮ, ಕಾಂತ, ಚಿನ್ನಮ್ಮ, ಗುಂಡಮ್ಮ, ಪಿಲ್ಲಮ್ಮ, ಮುನಿಯಲ್ಲಮ್ಮ, ಸ್ನೇಹಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.