ದೊಡ್ಡಬಳ್ಳಾಪುರ: ರಾಜ್ಯದಲ್ಲಿ ಹಿಂದುಳಿದ ಸಮುದಾಯಗಳ ಸ್ಥಿತಿಗತಿ ತಿಳಿಯುವ ಸಲುವಾಗಿ ರಾಜ್ಯ ಸರ್ಕಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದೆ. ಸಮೀಕ್ಷೆಗಾಗಿ ಮನೆಗಳ ಬಳಿ ಬರುವ ಗಣತಿದಾರರಿಗೆ ಜನತೆ ಸೂಕ್ತ ಮಾಹಿತಿ ಕೊಡುವ ಮೂಲಕ ಸಹಕರಿಸಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಟಿ.ವೆಂಕಟರಮಣಯ್ಯ ಮನವಿ ಮಾಡಿದರು.
ಈ ಹಿಂದೆ 2013-14ರಲ್ಲಿ ರಾಜ್ಯ ಸರ್ಕಾರ ಎಲ್ಲಾ ಸಮುದಾಯಗಳ ಸಮೀಕ್ಷೆ ನಡೆಸಿತ್ತು. ಆದರೆ ಹಲವು ಸಮುದಾಯದ ಮುಖಂಡರು, ಪ್ರಮುಖರು ಸಮೀಕ್ಷೆಯನ್ನು ಮತ್ತೊಮ್ಮೆ ಸೂಕ್ತ ರೀತಿಯಲ್ಲಿ ಮಾಡಬೇಕು ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತೆ ಸಮೀಕ್ಷೆಗೆ ಮುಂದಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಮೀಕ್ಷೆಗೆ ಸಹಕಾರಿಯಾಗುವ ಅರ್ಜಿಗಳನ್ನು ಆಶಾ ಕಾರ್ಯಕರ್ತೆಯರು ಪ್ರತಿ ಮನೆ ತಲುಪಿಸಲಿದ್ದಾರೆ. ಇದೇ ತಿಂಗಳ 22 ರಿಂದ ಸಮೀಕ್ಷೆ ಆರಂಭವಾಗಲಿದ್ದು, ಮಾಹಿತಿ ಪಡೆಯಲು ಮನೆ ಬಾಗಿಲಿಗೆ ಶಿಕ್ಷಕರು ಬರಲಿದ್ದಾರೆ. ಈ ಸಂದರ್ಭದಲ್ಲಿ ಮನೆಯ ಮುಖ್ಯಸ್ಥರು ಹಾಜರಿದ್ದು ಸೂಕ್ತ ಮಾಹಿತಿಯನ್ನು ಶಿಕ್ಷಕರಿಗೆ ಕೊಡುವ ಮೂಲಕ ಜಾತಿ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಒಕ್ಕಲಿಗ ಸಮುದಾಯದ ಮುಖಂಡರಾದ ನಾಗೇಶ್, ರಾಜ್ಯ ಸರ್ಕಾರ ನೆಡೆಸಲಿರುವ ಸಮೀಕ್ಷೆಯಲ್ಲಿ ಸಮುದಾಯದ ಜನತೆ ಭಾಗವಹಿಸುವಿಕೆ ಹಾಗೂ ಮಾಹಿತಿ ನೀಡುವ ಕುರಿತು ಅರಿವು ಮೂಡಿಸುವ ಸಲುವಾಗಿ ಸೆಪ್ಟೆಂಬರ್ 15 ರಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠಾದೀಶ ನಿರ್ಮಲಾನಂದಸ್ವಾಮೀಜಿ ಅವರು ನಗರದ ಒಕ್ಕಲಿಗರ ಭವನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದು, ತಾಲ್ಲೂಕಿನ ಒಕ್ಕಲಿಗ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಸಮೀಕ್ಷೆಯಲ್ಲಿ 60 ಪ್ರಶ್ನೆಗಳಿದ್ದು, ಕುಟುಂಬದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಕೇಳಲಾಗುತ್ತದೆ. ಒಕ್ಕಲಿಗ ಸಮುದಾಯದ ಹೆಸರನ್ನು ಸರಿಯಾಗಿ ನಮೂದಿಸಬೇಕು. ಸಮುದಾಯದ ಬಂಧುಗಳು ಸೂಕ್ತ ರೀತಿಯಲ್ಲಿ ಸಮೀಕ್ಷೆಯಲ್ಲಿ ಭಾಗವಹಿಸುವಂತೆ ತಾಲ್ಲೂಕಿನಾದ್ಯಂತ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮುಖಂಡರಾದ ಬೈರೇಗೌಡ, ಶಶಿಧರ್ ತಿಳಿಸಿದರು.
ಮುಖಂಡರಾದ ಕೆ.ಪಿ.ದಯಾನಂದ್, ವೆಂಕಟೇಶ್‌ಬಾಬು, ಕೆ.ಪಿ.ಜಗನ್ನಾಥ್, ಬಿ.ಜಿ.ಹೇಮಂತರಾಜು, ಅಪ್ಪಿವೆಂಕಟೇಶ್, ನಾರಾಯಣಗೌಡ, ವಿಶ್ವಾಸ್ ಹನುಮಂತೇಗೌಡ, ಸಿ.ಮನೋಹರ್, ರೇವತಿ ಅನಂತರಾಮು, ಡಿ.ಸಿ.ಶಶಿಧರ್, ಶರತ್ ಪಟೇಲ್, ಶಾಂತಮ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.