ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರದಿಂದ ಸೆ.22 ರಿಂದ ಅ.7 ರವರೆಗೆ 15 ದಿನಗಳ ಕಾಲ ನಡೆಯುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸಂದರ್ಭದಲ್ಲಿ ಜಾತಿ ಕಾಲಂನಲ್ಲಿ ಎಲ್ಲರೂ ‘ಒಕ್ಕಲಿಗ’ ಎಂದೇ ಬರೆಸಬೇಕು ಎಂದು ಒಕ್ಕಲಿಗರ ಸಂಘದ ತಾಲ್ಲೂಕು ಅಧ್ಯಕ್ಷ, ಮಾಜಿ ಶಾಸಕ ವಿ.ಕೃಷ್ಣಪ್ಪ ಹೇಳಿದರು.
ತಾಲ್ಲೂಕಿನಲ್ಲಿ ಒಕ್ಕಲಿಗ ಜನಾಂಗ ಹಿಂದಿನಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇಡೀ ಜನಾಂಗದ ಏಳಿಗೆಗಾಗಿ ಆದಿಚುಂನಗಿರಿ ಮಠ ಅವಿರತವಾಗಿ ಶ್ರಮಿಸುತ್ತಿದೆ. ಮಠದ ಸ್ವಾಮೀಜಿಗಳು ಈಗಾಗಲೇ ರಾಜ್ಯದ ವಿವಿಧ ಭಾಗಗಳಲ್ಲಿ ಸಭೆಗಳನ್ನು ನಡೆಸುವ ಮೂಲಕ ಸಮೀಕ್ಷೆ ಸಂದರ್ಭದಲ್ಲಿ ಒಕ್ಕಲಿಗ ಎಂದು ಬರೆಸುವಂತೆ ಅರಿವು ಮೂಡಿಸಿದ್ದಾರೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಮೀಕ್ಷೆಯಲ್ಲಿ ನಿಖರವಾಗಿ ಜಾತಿ ಹೆಸರು ಬರೆಸುವುದರಿಂದ ರಾಜಕೀಯ, ಆರ್ಥಿಕ, ಶೈಕ್ಷಣಿಕ, ಉದ್ಯೋಗದ ಸೇರಿದಂತೆ ಇತರೆ ಸೌಲಭ್ಯ ಪಡೆಯಲು ಸಹಕಾರಿಯಾಗಲಿದೆ. ಯಾವುದೇ ರೀತಿಯ ಗೊಂದಲದ ಮಾತುಗಳಿಗೂ ಕಿಗೊಡದೆ ಸಮೀಕ್ಷೆಯಲ್ಲಿ ಸಮುದಾಯದ ಜನರು ಸಕ್ರಿಯವಾಗಿ ಭಾಗವಹಿಸಿ ಮಾಹಿತಿ ನೀಡಬೇಕು ಎಂದರು.
ಒಕ್ಕಲಿಗರ ಸಂಘದ ಉಪಾಧ್ಯಕ್ಷ, ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ರಾಜ್ಯದ ಎಲ್ಲಾ ಜಾತಿಗಳ ಜನರಿಗೂ ಸಾಮಾಜಿಕ ನ್ಯಾಯ ಕಲ್ಪಿಸುವ ಸಲುವಾಗಿ ಸರ್ಕಾರ ನಡೆಸುತ್ತಿರುವ ಸಮೀಕ್ಷೆಯಲ್ಲಿ ಎಲ್ಲ ಜಾತಿ, ಧರ್ಮದವರು ಭಾಗವಹಿಸಬೇಕು. ಇದರಿಂದ ಸರ್ಕಾರದ ಸೌಲಭ್ಯ ಪಡೆಯಲು ಸಹಕಾರಿಯಾಗಲಿದೆ ಎಂದರು.
ಒಕ್ಕಲಿಗ ಸಂಘದ ಕಾರ್ಯದರ್ಶಿ ಬಿ.ಸಿ.ವೆಂಕಟೇಶ್, ಖಜಾಂಚಿ ಕೆ.ಎಂ.ಹನುಮಂತರಾಯಪ್ಪ, ನಿರ್ದೇಶಕರಾದ ಎ.ನರಸಿಂಹಯ್ಯ, ಬಿ.ಎಚ್.ಕೆಂಪಣ್ಣ, ಚುಂಚೇಗೌಡ, ಜನಾರ್ದನ್, ಆಂಜನೇಗೌಡ, ಆರ್.ಚಂದ್ರಶೇಖರ್, ಪ್ರಕಾಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.