
ಆನೇಕಲ್: ಪಟ್ಟಣದ ಬಮೂಲ್ ಶಿಬಿರ ಕಚೇರಿಯಲ್ಲಿ ಕರ್ನಾಟಕ ಹಾಲು ಮಹಾಮಂಡಳಿ ಮತ್ತು ಬೆಂಗಳೂರು ಹಾಲು ಒಕ್ಕೂಟದ ವತಿಯಿಂದ ಕ್ಷೀರ ಸಂಜೀವಿನಿ ಯೋಜನೆಯಡಿ ತಾಲ್ಲೂಕಿನ ಎರಡು ಹಾಲು ಉತ್ಪಾದಕ ಸಹಕಾರ ಮಹಿಳಾ ಸಂಘಗಳಿಗೆ ಬಮೂಲ್ ನಿರ್ದೇಶಕ ಆರ್.ಕೆ.ರಮೇಶ್ ರಾಸು ಖರೀದಿಸಲು ಚೆಕ್ ಮತ್ತು ವಿಮೆ ಸೌಲಭ್ಯವನ್ನು ಮಂಗಳವಾರ ವಿತರಿಸಿದರು.
ಬಳಿಕ ಮಾತನಾಡಿದ ಅವರು, ತಾಲ್ಲೂಕಿನ 13 ಗ್ರಾಮಗಳಲ್ಲಿ ಹಾಲು ಉತ್ಪಾದಕ ಸಹಕಾರ ಮಹಿಳಾ ಸಂಘಗಳಿವೆ. ಈ ಪೈಕಿ ಕಾಡುಜಕ್ಕನಹಳ್ಳಿ ಮತ್ತು ಬಂಡೆನಲ್ಲಸಂದ್ರ ಗ್ರಾಮಗಳ ಮಹಿಳಾ ಸಂಘಗಳಿಗೆ ರಾಸು ಖರೀದಿಸಲು ₹47 ಸಾವಿರದ ಚೆಕ್ ನೀಡಲಾಗಿದೆ. ಚೆಕ್‌ನೊಂದಿಗೆ ರಾಸು ವಿಮೆಯನ್ನು ಬಮೂಲ್‌ನಿಂದಲೇ ಮಾಡಿಸಲಾಗಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕಿನ 13 ಮಹಿಳಾ ಸಂಘಗಳಿಗೆ ಕ್ಷೀರ ಸಂಜೀವಿನಿ ಯೋಜನೆಯಡಿ ರಾಸು ಖರೀದಿಸಲು ಅನುದಾನ ನೀಡಲಾಗುವುದು ಎಂದು ಹೇಳಿದರು.
ಹಾಲು ಉತ್ಪಾದಕ ಮಹಿಳಾ ಸಂಘಗಳು 12 ತಿಂಗಳ ಬಡ್ಡಿ ರಹಿತವಾಗಿ ಈ ಸಾಲ ಸೌಲಭ್ಯ ತೀರಿಸಬಹುದಾಗಿದೆ. ಹಾಲು ಉತ್ಪಾದಕ ಸಹಕಾರ ಸಂಘಗಳ ಸದಸ್ಯರಿಗೆ ₹2.5ಲಕ್ಷ ವೆಚ್ಚದ ವೈದ್ಯಕೀಯ ನೆರವಿಗೆ ಚೆಕ್ ವಿತರಿಸಲಾಗಿದೆ ಎಂದು ತಿಳಿಸಿದರು.
ಬಮೂಲ್ ರೈತಸ್ನೇಹಿಯಾಗಿದ್ದು, ಹಾಲು ಉತ್ಪಾದಕ ರೈತರಿಗೆ ಅವಶ್ಯಕವಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಪ್ರೋತ್ಸಾಹ ಧನ ವಿತರಣೆಗೆ ಆದ್ಯತೆ ನೀಡಲಾಗಿದೆ. ಶೀಘ್ರವೇ ಆನೇಕಲ್ ತಾಲ್ಲೂಕಿನ ಹಾಲು ಉತ್ಪಾದಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಗುವುದು ಎಂದರು.
ಹಾಲು ಉತ್ಪಾದನೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ರೈತರು ತಮ್ಮ ಆದಾಯ ದುಪ್ಪಟ್ಟು ಮಾಡಿಕೊಳ್ಳಲು ಹೈನುಗಾರಿಕೆ ಆರಂಭಿಸಬೇಕು. ಹಾಲು ಒಕ್ಕೂಟದಲ್ಲಿ 22 ಲಕ್ಷ ಲೀಟರ್ ಹಾಲು ಸಂಗ್ರಹಿಸುವ ಸಾಮರ್ಥ್ಯವಿದೆ. ಆದರೆ 15 ಲಕ್ಷ ಲೀಟರ್ ಮಾತ್ರ ಸಂಗ್ರಹವಾಗುತ್ತಿದೆ ಎಂದರು.
ಬಮೂಲ್ ನಿರ್ದೇಶಕ ಆರ್.ಕೆ.ರಮೇಶ್, ಶಿಬಿರದ ಉಪವ್ಯವಸ್ಥಾಪಕ ಡಾ.ಸಿ.ಜಿ.ಸುರೇಶ್, ಮಹಿಳಾ ಒಕ್ಕೂಟದ ಅಧ್ಯಕ್ಷ, ಕಾರ್ಯದರ್ಶಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.