ದೊಡ್ಡಬಳ್ಳಾಪುರ: ನಗರದ ಹೊರಭಾಗದಲ್ಲಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಕಾವೇರಿ ನೀರು ಹರಿಸಲು ಯಲಹಂಕದಿಂದ ದಶಕಗಳ ಹಿಂದೆಯೇ ಪೈಪ್‌ಲೈನ್ ಅಳವಡಿಸಲಾಗಿದೆ. ಇದೇ ಪೈಪ್‌ಲೈನ್ ಮೂಲಕ ಕಾವೇರಿ ನೀರನ್ನು ಕುಡಿಯಲು ನಗರಕ್ಕೂ ನೀಡಬೇಕೆಂದು ಶಾಸಕ ಧೀರಜ್ ಮುನಿರಾಜು ಮನವಿ ಮಾಡಿದರು.
ಹಿರಿಯ ರಾಜಕಾರಣಿ ಆರ್.ಎಲ್.ಜಾಲಪ್ಪ ಜನ್ಮಶತಮಾನೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ, ವೇಗವಾಗಿ ಬೆಳೆಯುತ್ತಿರುವ ನಗರ ಹಾಗೂ ತಾಲ್ಲೂಕಿಗೆ ಕುಡಿಯುವ ನೀರಿನ ಬವಣೆ ನೀಗಲು ಕಾವೇರಿ ನೀರು ಅಗತ್ಯ ಅನಿವಾರ್ಯವಾಗಿದೆ ಎಂದರು.
ಮಾರ್ಚ್‌ನಲ್ಲಿ ಶಂಕುಸ್ಥಾಪನೆ ಮಾಡಲಾಗಿರುವ ಜಿಲ್ಲಾ ಆಸ್ಪತ್ರೆಗೆ ಬಜೆಟ್‌ನಲ್ಲಿ ನಿಗದಿಯಾಗಿರುವ ಹಣವನ್ನು ಬಿಡುಗಡೆ ಮಾಡಬೇಕು. ತಾಲ್ಲೂಕಿನಲ್ಲಿ ನಿವೇಶನ ರಹಿತರಿಗಾಗಿ ಹಂಚಿಕೆ ಮಾಡಲು 40 ಎಕರೆ ಜಮೀನಿ ಮೀಸಲಿಡಲಾಗಿದೆ. ರಾಜ್ಯ ಸರ್ಕಾರದಿಂದ ಗುಂಪು ಮನೆಗಳನ್ನು ನಿರ್ಮಿಸಲು ಮಂಜುರಾತಿ ನೀಡಬೇಕು. ನಗರದಲ್ಲಿ ಸುಸಜ್ಜಿತವಾದ ಕೃಷಿ ಮಾರುಕಟ್ಟೆ ನಿರ್ಮಾಣವಾಗಲು ತಾಲ್ಲೂಕಿನ ಹಿರಿಯ ರಾಜಕಾರಣಿ ಆರ್.ಎಲ್.ಜಾಲಪ್ಪ ಅವರು ಪ್ರಮುಖ ಕಾರಣ. ಹಾಗಾಗಿ ಈ ಮಾರುಕಟ್ಟೆಗೆ ಜಾಲಪ್ಪ ಅವರ ಹೆಸರು ನಾಮಕರಣ ಮಾಡುವಂತೆ ಮನವಿ ಮಾಡಿದರು.
ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಅವರು ತಾವು ಶಾಸಕರಾಗಿದ್ದ ಹತ್ತು ವರ್ಷಗಳಲ್ಲಿ ಆಗಿರುವ ಕೆಲಸಗಳ ಪಟ್ಟಿಯನ್ನು ಮುಖ್ಯಮಂತ್ರಿಗಳ ಮುಂದೆ ಮಂಡಿಸಿದರು. ಆದರೆ ಮುಖ್ಯಮಂತ್ರಿಗಳು ಮಾತ್ರ ತಮ್ಮ ಅರ್ಧ ಗಂಟೆಯ ಭಾಷಣದಲ್ಲಿ ತಾಲ್ಲೂಕಿನ ಯಾವುದೇ ಮನವಿಗಳ ಬಗ್ಗೆಯೂ ಪ್ರಸ್ತಾಪವನ್ನೇ ಮಾಡದೇ ಜಾಲಪ್ಪ ಹಾಗೂ ತಮ್ಮ ಒಡನಾಟದ ಬಗ್ಗೆ ಮಾತ್ರ ಮಾತನಾಡಿದರು.
ಸಿದ್ದರಾಮಯ್ಯ ಕಾಲಿಗೆರಗಿದ ಧೀರಜ್: ಶಾಸಕ ಹಾಗೂ ಬಿಜೆಪಿ ರಾಜ್ಯ ಯುವಘಟಕದ ಅಧ್ಯಕ್ಷ ಧೀರಜ್ ಮುನಿರಾಜು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹಿಂದುಳಿದ ವರ್ಗದ ನಾಯಕ ಎಂದು ಕೊಂಡಾಡಿದರು. ಸಮಾರಂಭ ಮುಕ್ತಾಯವಾದ ನಂತರ ವೇದಿಕೆಯಲ್ಲೇ ಮುಖ್ಯಮಂತ್ರಿಗಳ ಕಾಲಿಗೆ ಬಿದ್ದು ನಮಸ್ಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.