ಆನೇಕಲ್: ತಾಲ್ಲೂಕಿನ ಚಂದಾಪುರ ಪುರಸಭೆಯಿಂದ ಮಂಗಳವಾರ ಪೌರಕಾರ್ಮಿಕರ ದಿನಾಚರಣೆ ನಡೆಯಿತು. ಪೌರ ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ವಿವಿಧ ಕ್ರೀಡೆಗಳನ್ನು ಆಯೋಜಿಸಿ ಬಹುಮಾನ ವಿತರಿಸಲಾಯಿತು.
ಪೌರಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಪೌರಕಾರ್ಮಿಕರಿಗೆ ಕ್ರಿಕೆಟ್, ರಂಗೋಲಿ ಸೇರಿದಂತೆ 10ಕ್ಕೂ ಹೆಚ್ಚು ಕ್ರೀಡೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.
ಚಂದಾಪುರ ಪುರಸಭೆ ಅಧ್ಯಕ್ಷೆ ಶಾರದ ವರದರಾಜು ಮಾತನಾಡಿ, ಪಟ್ಟಣದ ಸ್ವಚ್ಛತೆಯನ್ನು ಕಾಪಾಡುವಲ್ಲಿ ಪೌರಕಾರ್ಮಿಕರು ಪ್ರಮುಖ ಪಾತ್ರ ವಹಿಸುತ್ತಾರೆ. ಹಾಗಾಗಿ ಅವರನ್ನು ಗೌರವಿಸಬೇಕಾದುದ್ದು ಸಮಾಜದ ಜವಾಬ್ದಾರಿ. ಚಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಕಸದ ನಿರ್ವಹಣೆಯೇ ದೊಡ್ಡ ಸವಾಲಾಗಿದೆ. ಪುರಸಭೆ ವ್ಯಾಪ್ತಿಯಲ್ಲಿ ವಿದ್ಯಾವಂತರೇ ಹೆಚ್ಚಿದ್ದರೂ ಎಲ್ಲಂದರಲ್ಲಿ ಕಸ ಹಾಕುವುದು, ರಸ್ತೆ ವಿಭಜಕಗಳಲ್ಲಿ ಕಸ ಇಡುವುದನ್ನು ಬಿಡುತ್ತಿಲ್ಲ. ಸ್ವಚ್ಛತೆಯನ್ನು ಕಾಪಾಡಲು ಸಾರ್ವಜನಿಕರು ಸಹಕಾರ ನೀಡಬೇಕು. ಮನೆಗಳಲ್ಲಿಯೇ ಹಸಿ ಮತ್ತು ಒಣ ಕಸವನ್ನು ವಿಂಗಡಿಸಬೇಕು. ಇದರಿಂದಾಗಿ ಪೌರಕಾರ್ಮಿಕರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದರು.
ಪೌರಕಾರ್ಮಿಕರು ಹಬ್ಬ ಹರಿದಿನ, ವಿಶೇಷ ದಿನಗಳೆನ್ನದೇ ವರ್ಷದ 365 ದಿನವು ಪಟ್ಟಣದ ಸ್ವಚ್ಛತೆಗೆ ಶ್ರಮಿಸುತ್ತಾರೆ. ವಾಟರ್‌ಮನ್‌ಗಳು, ಸ್ವಚ್ಛತಾಗಾರರು ತಮ್ಮ ಮನೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಪಟ್ಟಣದ ಸ್ವಚ್ಛತೆಯನ್ನು ಕಾಪಾಡುತ್ತಾರೆ. ಹಾಗಾಗಿ ಅವರ ಶ್ರಮ ವ್ಯರ್ಥವಾಗದಂತೆ ಸಾರ್ವಜನಿಕರು ದಿನನಿತ್ಯ ವ್ಯವಹರಿಸಬೇಕು. ಎಲ್ಲಂದರಲ್ಲಿ ಕಸ ಹಾಕಬಾರದು, ಕಸವನ್ನು ಕಡ್ಡಾಯವಾಗಿ ಪುರಸಭೆಯ ವಾಹನಗಳಿಗೆ ನೀಡಬೇಕು ಎಂದರು.
ಪುರಸಭಾ ಮುಖ್ಯಾಧಿಕಾರಿ ಮಂಜುನಾಥ್ ಮಾತನಾಡಿ, ಚಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಪೌರಕಾರ್ಮಿಕರಿಗೆ ಸ್ವಂತ ಸೂರು ಹೊಂದುವಂತೆ ಮಾಡಲು ಸರ್ಕಾರಕ್ಕೆ ಮನವಿ ನೀಡಲಾಗುವುದು. ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಡಲು ಜಾಗ ಗುರುತಿಸಿ ಮನವಿ ಸಲ್ಲಿಸಲಾಗುವುದು. ಪೌರಕಾರ್ಮಿಕರಿಗೆ ವಿಮೆ ಸೌಲಭ್ಯ ಕಲ್ಪಿಸಲಾಗಿದೆ. ಪೌರಕಾರ್ಮಿಕರ ಸುರಕ್ಷತೆಗೆ ಎಲ್ಲಾ ಮುನ್ನೆಚ್ಚರಿಕೆಯ ಕ್ರಮಗಳನ್ನು ವಹಿಸಲಾಗಿದೆ. ಪೌರಕಾರ್ಮಿಕರು ಹಗಲು ರಾತ್ರಿಯೆನ್ನದೇ ಪಟ್ಟಣದ ಸೌಂದರ್ಯ ಕಾಪಾಡುತ್ತಾರೆ. ಚಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ನಿವಾರಿಸಲು ಕ್ರಮ ವಹಿಸಲಾಗಿದೆ. ಕಸದ ಹಾಟ್ ಸ್ಪಾಟ್‌ಗಳಲ್ಲಿ ಸಿಸಿ ಕ್ಯಾಮರ ಹಾಕಲು ಚಿಂತನೆ ನಡೆಸಲಾಗುತ್ತಿದೆ ಎಂದರು.
ಪುರಸಭಾ ಆರೋಗ್ಯ ನಿರೀಕ್ಷಕ ರಮೇಶ್ ರಾಜು, ಪುರಸಭಾ ಉಪಾಧ್ಯಕ್ಷೆ ಮಂಜುಳ, ಸದಸ್ಯರಾದ ಸೋಮಶೇಖರರೆಡ್ಡಿ, ಕೃಷ್ಣಾರೆಡ್ಡಿ, ರಾಕೇಶ್, ಉಮೇಶ್, ಶ್ರೀಧರ್, ರೇಣುಕಾ, ಭಾರತಿ ಬಸವರಾಜು, ಅನ್ನಪೂರ್ಣಮ್ಮ, ರಾಮಣ್ಣ, ದಿವ್ಯಲಕ್ಷ್ಮೀ, ಸುಕನ್ಯಾ ವೇಣುಗೋಪಾಲ್, ಸೌಮ್ಯ ಸುಧಾಕರ್, ವೆಂಕಟಸ್ವಾಮಿ, ರೂಪಾ, ಜ್ಯೋತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.