ADVERTISEMENT

ಕೇಂದ್ರದ ಕೃಷಿ ಕಾಯ್ದೆಗಳು ರದ್ದಾಗಲಿ: ಸಮ್ಮೇಳನಾಧ್ಯಕ್ಷ ಟಿ.ಎನ್‌.ಪ್ರಭುದೇವ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 6:27 IST
Last Updated 20 ಫೆಬ್ರುವರಿ 2021, 6:27 IST
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಹಿರಿಯ ಹೋರಾಟಗಾರ ಟಿ.ಎನ್‌. ಪ್ರಭುದೇವ ಅವರನ್ನು ಅವರ ಅಭಿಮಾನಿಗಳು ಹೂ ಮಾಲೆ ಹಾಕಿ ಅಭಿನಂದಿಸಿದರು
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಹಿರಿಯ ಹೋರಾಟಗಾರ ಟಿ.ಎನ್‌. ಪ್ರಭುದೇವ ಅವರನ್ನು ಅವರ ಅಭಿಮಾನಿಗಳು ಹೂ ಮಾಲೆ ಹಾಕಿ ಅಭಿನಂದಿಸಿದರು   

ದೊಡ್ಡಬಳ್ಳಾಪುರ: ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಹೋರಾಟಕ್ಕೆ ಮನ್ನಣೆ ನೀಡುವ ಮೂಲಕ ಕೇಂದ್ರ ಸರ್ಕಾರಿ ರೈತ ವಿರೋಧಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕು ಎಂದು 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಹಿರಿಯ ಕನ್ನಡಪರ ಹೋರಾಟಗಾರ ಟಿ.ಎನ್‌.ಪ್ರಭುದೇವ ಆಗ್ರಹಿಸಿದರು.

ಅವರು ನಗರದ ಬಸವ ಭವನದಲ್ಲಿ ಶುಕ್ರವಾರ ಆರಂಭವಾದ ಎರಡು ದಿನಗಳ ಬೆಂಗಳೂರು ಗ್ರಾಮಾಂತರ 22ನೇ ಜಿಲ್ಲಾ ಸಾಹಿತ್ಯ ಸಮ್ಮೇಳದಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ನಾಡಿನ ಏಳಿಗೆಗಾಗಿ ಹೋರಾಟ ನಡೆಸುತ್ತಿರುವ ಕನ್ನಡಪರ ಹಾಗೂ ರೈತರಪರ ಮುಖಂಡರ ವಿರುದ್ಧ ಹಾಕಲಾಗಿರುವ ಎಲ್ಲ ಮೊಕ್ಕದ್ದಮೆಗಳನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆಯಬೇಕು ಎಂದರು.

ADVERTISEMENT

ಕನ್ನಡ ಸಾಹಿತ್ಯ, ಸಂಸ್ಕೃತಿಗೆ ಪ್ರತಿಯೊಬ್ಬರೂ ಶ್ರಮಿಸಬೇಕಿದೆ. ಅನೇಕ ಗಣ್ಯರು ಕ್ರೀಡೆ, ನಾಟಕ, ವೈದ್ಯಕೀಯ,ಗಾಳಿಪಟ ಹಾಗೂ ಸಾಹಿತ್ಯ, ಕೃಷಿ ಮತ್ತಿತರೆ ಕ್ಷೇತ್ರದಲ್ಲಿ ನಮ್ಮ ತಾಲ್ಲೂಕಿನ ಗೌರವ ಹೆಚ್ಚಿಸಿದ್ದಾರೆ. ನಗರದಲ್ಲಿ ರೇಷ್ಮೆ ಉದ್ಯಮ ಹಾಗೂ ಕೈಗಾರಿಕಾ ಪ್ರದೇಶಗಳಿದ್ದರೂ ಸಹ ತಾಲ್ಲೂಕಿನಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಬಯಲು ಸೀಮೆಯ ಪ್ರಾಂತ್ಯದಲ್ಲಿರುವ ನಮಗೆ ಶಾಶ್ವತ ನೀರಾವರಿ ಕೊರತೆ ಇದ್ದು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಕಷ್ಟಕರವಾಗಿದೆ ಎಂದು ಅವರು ಹೇಳಿದರು.

ಸರ್ಕಾರಿ ಶಾಲೆಗಳಗಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ಶಾಲಾ ಕೊಠಡಿಗಳ ನಿರ್ಮಾಣವಾಗಬೇಕು. ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲು
ಮಾಡುವ ಕಾನೂನು ಜಾರಿಯಾದರೆ ಮಾತ್ರ ಕನ್ನಡ ಶಾಲೆಗಳ ಉಳಿವಿಗೆ ಉತ್ತೇಜನವಾಗಲಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಬೇಕಿದೆ. ನೆರೆ ಪ್ರವಾಹಗಳಂತಹ ಪ್ರಕೃತಿ ವಿಕೋಪದಿಂದ ನಮ್ಮ ನಾಡಿಗಾದ ಅನ್ಯಾಯದ ಸಮ್ಮೇಳನ ಅಧ್ಯಕ್ಷರು ಬೇಸರ
ವ್ಯಕ್ತಪಡಿಸಿದರು.

ತಾಲ್ಲೂಕಿಗೆ ಬೆಂಗಳೂರಿನಿಂದ ಬರುತ್ತಿರುವ ಕಸವನ್ನು ವೈಜ್ಞಾನಿಕವಾಗಿ ವಿಂಗಡಣೆ ಮಾಡಿ ಜನವಸತಿ ಪ್ರದೇಶದಿಂದ ದೂರ ಸಾಗಿಸಬೇಕು. ಭೂ ಕಾನೂನು ತಿದ್ದುಪಡಿಯಾದ ನಂತರ ವಲಸಿಗರು ಮೂಲ ರೈತರಿಗೆ ಹೆಚ್ಚಿನ ಬೆಲೆಯ ಆಮಿಷ ತೋರಿಸಿ ಭೂಮಿ ಖರೀದಿಸಿ ರೆಸಾರ್ಟ್‌ಗಳು, ಮೋಜಿನ ತಾಣಗಳನ್ನು ಮಾಡಿಕೊಳ್ಳುವುದನ್ನು ತಪ್ಪಿಸಬೇಕು. ಕೃಷಿ ಉದ್ದೇಶಕ್ಕೆ ಮಾತ್ರ ಭೂಮಿ ಬಳಸುವಂತೆ ಕಾನೂನು ರೂಪಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.