ADVERTISEMENT

ಸಮಾಜದ ಏಳಿಗೆಗೆ ದಾನ, ಧರ್ಮ ಮಾಡಬೇಕು

ಪ್ರವಾದಿ ಮಹಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಅಂಗನವಾಡಿ ಮಕ್ಕಳಿಗೆ ಕುರ್ಚಿ ವಿತರಣೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 16:35 IST
Last Updated 12 ನವೆಂಬರ್ 2019, 16:35 IST
ವಿಜಯಪುರದ ಗುರಪ್ಪನಮಠದ ಉರ್ದು ಶಾಲೆಯ ಆವರಣದಲ್ಲಿರುವ ಅಂಗನವಾಡಿ ಮಕ್ಕಳಿಗೆ ಕಾಂಗ್ರೆಸ್ ಮುಖಂಡ ಗೌಸ್‌ಖಾನ್ ಕುರ್ಚಿಗಳು ವಿತರಣೆ ಮಾಡಿದರು
ವಿಜಯಪುರದ ಗುರಪ್ಪನಮಠದ ಉರ್ದು ಶಾಲೆಯ ಆವರಣದಲ್ಲಿರುವ ಅಂಗನವಾಡಿ ಮಕ್ಕಳಿಗೆ ಕಾಂಗ್ರೆಸ್ ಮುಖಂಡ ಗೌಸ್‌ಖಾನ್ ಕುರ್ಚಿಗಳು ವಿತರಣೆ ಮಾಡಿದರು   

ವಿಜಯಪುರ: ಮಕ್ಕಳ ಏಳಿಗೆಗಾಗಿ ಸಮುದಾಯದ ಸಹಕಾರ ದೊರೆತರೆ ಭವಿಷ್ಯಕ್ಕೆ ಉತ್ತಮ ಪ್ರಜೆಗಳನ್ನು ನೀಡಲಿಕ್ಕೆ ಅವಕಾಶವಾಗಲಿದೆ ಎಂದು ಕಾಂಗ್ರೆಸ್ ಮುಖಂಡ ಗೌಸ್‌ಖಾನ್ ಹೇಳಿದರು.

ಇಲ್ಲಿನ ಉರ್ದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಅಂಗನವಾಡಿ, ಸತ್ಯಮ್ಮ ತಾಯಿ ಕಾಲೊನಿಯ ಅಂಗನವಾಡಿ, ರಹಮತ್‌ನಗರದ ಅಂಗನವಾಡಿ, ಟಿಪ್ಪುನಗರದ ಅಂಗನವಾಡಿ ಕೇಂದ್ರಗಳಲ್ಲಿನ ಮಕ್ಕಳಿಗೆ, ಪ್ರವಾದಿ ಮಹಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಕುರ್ಚಿಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು.

‘ಪರೋಪಕಾರ, ಶಿಕ್ಷಣ, ಸೇರಿದಂತೆ ಸಮಾಜದ ಏಳಿಗೆಗಾಗಿ ದಾನ, ಧರ್ಮಗಳನ್ನು ಮಾಡಬೇಕು ಎನ್ನುವುದು ಪ್ರವಾದಿ ಮಹಮದ್ ಪೈಗಂಬರ್ ಅವರ ಸಂದೇಶಗಳಲ್ಲಿ ಒಂದು. ನಾವು ಹಬ್ಬಗಳ ಆಚರಣೆ ಸೇರಿದಂತೆ ಅನೇಕ ಕಾರ್ಯಗಳಿಗೆ ದುಂದು ವೆಚ್ಚ ಮಾಡುವುದರ ಬದಲಿಗೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರ ನೀಡಬೇಕು’ ಎಂದು ಆಶಿಸಿದರು.

ADVERTISEMENT

ಇಡೀ ವಿಶ್ವವೇ ಒಂದು ಕುಟುಂಬ. ಇಲ್ಲಿ ಜಾತಿ, ಮತ, ಧರ್ಮಗಳ ಹಂಗಿರಬಾರದು. ಪರಸ್ಪರ ಒಬ್ಬರಿಗೊಬ್ಬರು ಸಹಕಾರ, ಸಹಾಯ ಮಾಡುತ್ತಾ ಕುಟುಂಬದ ಯಜಮಾನನ ನಿರ್ದೇಶನಗಳನ್ನು ಪಾಲನೆ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದ್ದು, ಅದನ್ನು ಪಾಲನೆ ಮಾಡುತ್ತಿದ್ದೇವೆ. ಇದರಿಂದ ಮಕ್ಕಳಲ್ಲಿ ಉತ್ತಮ ಸಂಸ್ಕಾರ, ದೇಶ ಪ್ರೇಮ, ಗುರುಹಿರಿಯರಲ್ಲಿ ಗೌರವಭಾವನೆ ಮೂಡಲು ಅವಕಾಶವಾಗುತ್ತದೆ ಎಂದರು.

ಮುಖಂಡ ಜಬ್ಬಾರ್‌ ಸಾಬ್ ಮಾತನಾಡಿ, ‘ಗಳಿಸಿದ್ದರಲ್ಲಿ ಸ್ವಲ್ಪ ಭಾಗವನ್ನಾದರೂ ಸಮಾಜಕ್ಕೆ ನೀಡಿದರೆ, ಜೀವನ ಸಾರ್ಥಕವಾಗುತ್ತದೆ. ಈ ಸತ್ಯವನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ನಾವು ಹುಟ್ಟಿ ಬೆಳೆದ ಭೂಮಿ, ವಿದ್ಯೆ ಕಲಿಸಿದ ಗುರು, ಜನ್ಮಕೊಟ್ಟ ತಂದೆತಾಯಿಯ ಋಣವನ್ನು ಎಂದಿಗೂ ಮರೆಯಬಾರದು’ ಎಂದರು.

‘ನಾವು ಮಾಡುವ ಉತ್ತಮ ಕಾರ್ಯಗಳು ಮಕ್ಕಳಲ್ಲಿ ಉತ್ತಮ ಗುಣಗಳು ಬೆಳೆಯಲು ಅವಕಾಶವಾಗುತ್ತದೆ. ಅವರು ದೊಡ್ಡವರಾದ ನಂತರ ಅದೇ ಹಾದಿಯಲ್ಲಿ ಸಾಗುತ್ತಾರೆ. ಯುವಜನರು ಇಂತಹ ಕಾರ್ಯಗಳಲ್ಲಿ ಕೈ ಜೋಡಿಸಬೇಕು. ಇಂತಹ ಕಾರ್ಯಕ್ರಮಗಳು ಮುಂದುವರೆಸಿಕೊಂಡು ಹೋಗಬೇಕು’ ಎಂದರು.

ಮುಖಂಡರಾದ ಷೇಕ್ ಹೈದರ್‌ಸಾಬ್, ರಫೀಕ್, ಸೈಯದ್ ಹುಸೇನ್, ಜಹಿರುದ್ದೀನ್, ಮೌಲಾ, ಇಲಿಯಾಸಾಬ್, ಗೌಸ್‌ ಪೀರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.