
ಚನ್ನಪಟ್ಟಣ: ತಾಲ್ಲೂಕಿನ ಹಾರೋಕೊಪ್ಪ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅವರಣದಲ್ಲಿ ಬಮೂಲ್ ವತಿಯಿಂದ ಮೇವು ಕತ್ತರಿಸುವ ಕತ್ತರಿಸುವ ಪ್ರಾಯೋಗಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಬಮೂಲ್ ನಿರ್ದೇಶಕ ಎಸ್. ಲಿಂಗೇಶ್ ಕುಮಾರ್ ಮಾತನಾಡಿ, ತಾಲ್ಲೂಕಿನಲ್ಲಿ ಹಾಲು ಉತ್ಪಾದನೆ ಹೆಚ್ಚುತ್ತಿದ್ದು, ಜಾನುವಾರುಗಳಿಗೆ ಮೇವು ಕತ್ತರಿಸಿ ಅದನ್ನು ಶೇಖರಣೆ ಮಾಡಲು ಯಂತ್ರೋಪಕರಣ ಬಳಸುವ ವಿಧಾನವನ್ನು ರೈತರಿಗೆ ತಿಳಿಸಿಕೊಡುವ ಪ್ರಾಯೋಗಿಕ ಕಾರ್ಯಕ್ರಮ ಆರಂಭಿಸಲಾಗಿದೆ ಎಂದು ತಿಳಿಸಿದರು.
ಮಳೆಗಾಲದಲ್ಲಿ ಮೇವಿಗೆ ಕೊರತೆ ಆಗಿವುದಿಲ್ಲ. ಆದರೆ ಬೇಸಿಗೆಕಾಲದಲ್ಲಿ ಕೊರತೆ ಉಂಟಾಗುತ್ತದೆ. ಆಗ ಹಾಲು ಉತ್ಪಾದನೆಯು ಕ್ಷಿಣಿಸುತ್ತದೆ. ಹಾಗಾಗಿ ಮೇವು ಶೇಖರಣೆ ಮಾಡಿ ಬೇಸಿಗೆಯಲ್ಲಿ ಬಳಸಿ ಉತ್ಪಾದನೆ ಹೆಚ್ಚಿಸಲು ವೈಜ್ಞಾನಿಕ ಯಂತ್ರಗಳನ್ನು ಬಳಸುವ ಕುರಿತು ರೈತರಿಗೆ ತಿಳಿಸಿಕೊಡಲಾಗುತ್ತಿದೆ ಎಂದು ಹೇಳಿದರು.
ಹಸುಗಳಿಗೆ ಅಗತ್ಯವಾದ ಮೇವುಗಳನ್ನು ಚೀಲದಲ್ಲಿ ಶೇಖರಣೆ ಮಾಡಿ ಬೇಸಿಗೆಯಲ್ಲಿ ಬಳಸಬಹುದು. ಮಳೆಗಾಲದಲ್ಲಿ ಜೋಳ ಕಟಾವು ಮಾಡಿ ಚೀಲದಲ್ಲಿ ಶೇಖರಣೆ ಮಾಡುವುದು ಬಹಳ ಅನುಕೂಲವಾಗುತ್ತದೆ. ಸಹಕಾರ ಸಂಘಗಳ ಕಚೇರಿಯ ಅವರಣದಲ್ಲಿ ಪ್ರಾಯೋಗಿಕವಾಗಿ ತಿಳಿಸಿಕೊಟ್ಟು ಅಗತ್ಯವಿರುವವರಿಗೆ ತರಬೇತಿ ನೀಡಲು ಕೇಂದ್ರಗಳನ್ನು ತೆರೆಯಲು ಬಮೂಲ್ ವತಿಯಿಂದ ಯೋಜನೆ ರೂಪಿಸಲಾಗಿದೆ ಎಂದು ಬಮೂಲ್ ವಿಸ್ತರಣಾಧಿಕಾರಿ ಕಿರಣ್ ತಿಳಿಸಿದರು.
ಬಮೂಲ್ ಕೃಷಿ ಅಧಿಕಾರಿ ಜೀತೇಂದ್ರ, ಶಿಬಿರಾಧಿಕಾರಿಗಳಾದ ರಾಜ, ಹೊನ್ನಪ್ಪ ಪೂಜಾರಿ, ರಾಜು, ನಂದಿತ, ಝರೀನಾ, ಗ್ರಾಮದ ಎಂಪಿಸಿಎಸ್ ಕಾರ್ಯದರ್ಶಿ ಸಿದ್ದೇಗೌಡ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.