ADVERTISEMENT

ದೊಡ್ಡಬಳ್ಳಾಪುರ: ಭಕ್ತರ ಆರಾಧ್ಯ ಬೆಟ್ಟ ಚನ್ನಗಿರಿ

ಅಗತ್ಯ ಮೂಲಸೌಕರ್ಯ ಒದಗಿಸಲು ಸ್ಥಳೀಯರ ಮನವಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 6:01 IST
Last Updated 9 ಅಕ್ಟೋಬರ್ 2021, 6:01 IST
ಬೆಟ್ಟದ ಮೇಲಿನ ಚನ್ನರಾಯಸ್ವಾಮಿ
ಬೆಟ್ಟದ ಮೇಲಿನ ಚನ್ನರಾಯಸ್ವಾಮಿ   

ದೊಡ್ಡಬಳ್ಳಾಪುರ: ಚನ್ನಗಿರಿಗೆ ಚನ್ನರಾಯಸ್ವಾಮಿಬೆಟ್ಟ ಎಂದು ಹೆಸರು ಬರಲು ಕಾರಣವಾಗಿರುವುದೇ ಬೆಟ್ಟದ ಮೇಲಿನ ದೇವಾಲಯದಲ್ಲಿ ನೆಲೆಸಿರುವ ಚನ್ನರಾಯಸ್ವಾಮಿಯಿಂದಾಗಿ ಎನ್ನುವುದು ಸ್ಥಳೀಯರ ನಂಬಿಕೆ.

ಪ್ರತಿವರ್ಷ ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಚನ್ನಗಿರಿ ಸುತ್ತಲಿನ ಗ್ರಾಮಗಳಲ್ಲಿ ಜನ ಶನಿವಾರದಂದು ಬೆಟ್ಟಕ್ಕೆ ಹತ್ತಿ ಹೋಗಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರವೇ ಪ್ರಸಾದ ಸೇವನೆ ಮಾಡುವುದು. ಬಹುತೇಕ ಭಕ್ತರು ಹೋಳಿಗೆ ಅಡುಗೆ ಮಾಡಿಕೊಂಡು ಹೋಗಿ ದೇವರಿಗೆ ನೈವೇದ್ಯದ ನಂತರ ಭಕ್ತಾದಿಗಳಿಗೆ ನೀಡಿ ತಾವು ಊಟ ಮಾಡುವ ಪದ್ಧತಿ ಇಂದಿಗೂ ನಡೆದುಕೊಂಡು ಬಂದಿದೆ.

ಬೆಟ್ಟದ ಮೇಲೆ ಅಷ್ಟೇನು ಸೌಲಭ್ಯ ಇಲ್ಲದೇ ಇದ್ದರೂ ದಶಕಗಳಷ್ಟು ಹಿಂದೆಯೇ ದೇವಾಲಯದ ಮುಂಭಾಗದಲ್ಲಿಯೇ ಸುಂದರ ಕೆತ್ತನೆ ಕಲ್ಲುಗಳಿಂದ ಬೃಹತ್‌ ಕಲ್ಯಾಣಿ ನಿರ್ಮಾಣವಾಗಿದೆ. ವರ್ಷವಿಡೀ ಕಲ್ಯಾಣಿಯಲ್ಲಿ ನೀರು ಇರುತ್ತವೆ. ಆದರೆ, ಮಳೆಗಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಶೇಖರಣೆಯಾಗುತ್ತವೆ. ದೇವಾಲಯಕ್ಕೆ ಹೋಗುವ ಭಕ್ತಾದಿಗಳು ಕಲ್ಯಾಣಿಯಲ್ಲಿಯೇ ಸ್ನಾನ ಮಾಡುವುದರಿಂದ ಕುಡಿಯಲು ನೀರು ಯೋಗ್ಯವಾಗಿಲ್ಲ. ಹೀಗಾಗಿ ಬೆಟ್ಟಕ್ಕೆ ಹೋಗುವ ಭಕ್ತರು ಕುಡಿಯುವ ನೀರು ಕೊಂಡೊಯ್ಯಬೇಕು ಎನ್ನುತ್ತಾರೆ ದೊಡ್ಡರಾಯಪ್ಪನಹಳ್ಳಿ ಗ್ರಾಮದ ನಿವಾಸಿ ಚನ್ನೇಗೌಡ.

ADVERTISEMENT

ಚನ್ನಗಿರಿ ಬೆಟ್ಟದಲ್ಲಿ ಚನ್ನರಾಯಸ್ವಾಮಿ, ಆಂಜನೇಯಸ್ವಾಮಿ, ಶಿವಲಿಂಗ ಹಾಗೂ ನಾಗರಕಲ್ಲು ಸಹ ಇದೆ. ಈ ನಾಲ್ಕು ದೇವರುಗಳಿಗೂ ಭಕ್ತಾದಿಗಳು ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಬೆಟ್ಟದ ಸುತ್ತಲಿನ ಗ್ರಾಮಗಳಷ್ಟೇ ಅಲ್ಲದೆ ದೊಡ್ಡಬಳ್ಳಾಪುರ ನಗರದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಚನ್ನರಾಯಸ್ವಾಮಿದೇವರ ಭಕ್ತಾದಿಗಳು ಇದ್ದಾರೆ. ಶ್ರಾವಣ ಮಾಸದಲ್ಲಿ ಬೆಟ್ಟದ ಮೇಲಿನ ದೇವಾಲಯದಲ್ಲಿ ಇಡೀ ರಾತ್ರಿ ಭಜನೆ ನಡೆಯುತ್ತವೆ. ದವಸ, ಧಾನ್ಯ, ಪಾತ್ರೆಗಳೊಂದಿಗೆ ರಾತ್ರಿಯೇ ಬೆಟ್ಟಕ್ಕೆ ಹೋಗಿ ಪ್ರಸಾದ ತಯಾರಿಸಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಗುತ್ತದೆ.

ಚನ್ನರಾಯಸ್ವಾಮಿ ಬೆಟ್ಟದ ತಪ್ಪಲಿನಲ್ಲಿರುವ ಚಿಕ್ಕಗೌಡನ ಕೆರೆಯಲ್ಲಿ ಚಿಕ್ಕರಾಯಪ್ಪನಹಳ್ಳಿ, ಚನ್ನಾಪುರ, ದೊಡ್ಡರಾಯಪ್ಪನಹಳ್ಳಿ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ತೆಪ್ಪೋತ್ಸವ, ಹೂವಿನ ಆರತಿ ಮಾಡುವ ಮೂಲಕ ಗಂಗೆ ಪೂಜೆ ನೆರವೇರಿಸುತ್ತಾರೆ. ತೆಪ್ಪೋತ್ಸವ ಸಂದರ್ಭದಲ್ಲಿ ಸ್ಥಳೀಯ ಮಹಿಳಾ ಜನಪದ ಕಲಾವಿದರು ಗಂಗೆ ಕುರಿತ ಹಾಡು ಹಾಡುತ್ತಾರೆ. ಅಲ್ಲದೆ ಶಿವ,ಗಂಗೆಯ ಕಲ್ಯಾಣದ ಪ್ರಸಂಗದ ಜನಪದ ಕತೆ ಹಾಡಿನ ರೂಪದಲ್ಲಿ ಹೇಳುವುದು ವಿಶೇಷ.

ಕೆರೆಯ ಏರಿ ಮೇಲೆ ತೆಂಗಿನಗರಿ, ಹಸಿರುವ ಸೊಪ್ಪುಗಳಿಂದ ತಾತ್ಕಾಲಿಕವಾಗಿ ನಿರ್ಮಿಸುವ ಗಂಗಮ್ಮನ ಗುಡಿಗೆ ಹೂವಿನ ಆರತಿ, ತಮಟೆ ವಾದ್ಯಗಳೊಂದಿಗೆ ಆಗಮಿಸುವ ಮಹಿಳೆಯರು ಪೂಜಿಸಿ ಮಹಾ ಮಂಗಳಾರತಿ ನಂತರ ಕೆರೆ ನೀರಿನಲ್ಲಿ ತೇಲುವ ಮರಗಳಿಂದ ನಿರ್ಮಿಸುವ ತೆಪ್ಪವನ್ನು ಹೂವು, ಬಾಳೆ ಕಂದು ಕಟ್ಟಿ ಅಲಂಕರಿಸಲಾಗುತ್ತದೆ. ತೆಪ್ಪಕ್ಕೆ ಪೂಜೆ ಸಲ್ಲಿಸಿ ಕೆರೆಗೆ ಬಾಗೀನ ಅರ್ಪಿಸುವುದು ಇಲ್ಲಿನ ವಾಡಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.