ADVERTISEMENT

ಸಾಕು ತಂದೆ ಪೊಲೀಸರ ವಶಕ್ಕೆ

ನಿಧಿಗಾಗಿ ಮಗು ಬಲಿ ಯತ್ನ ಪ್ರಕರಣ: ಹೆತ್ತ ತಾಯಿ ವಶಕ್ಕೆ; ತಂದೆ ಪರಾರಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 2:58 IST
Last Updated 7 ಜನವರಿ 2026, 2:58 IST
ವಾಮಾಚಾರ ನಡೆದ ಮನೆಯಲ್ಲಿ ಸ್ಥಳ ಮಹಜರು ನಡೆಸಿದ ಡಿವೈಎಸ್‌ಪಿ ಮಲ್ಲೇಶ್ ಹಾಗೂ ಸಿಬ್ಬಂದಿ
ವಾಮಾಚಾರ ನಡೆದ ಮನೆಯಲ್ಲಿ ಸ್ಥಳ ಮಹಜರು ನಡೆಸಿದ ಡಿವೈಎಸ್‌ಪಿ ಮಲ್ಲೇಶ್ ಹಾಗೂ ಸಿಬ್ಬಂದಿ   

ಸೂಲಿಬೆಲೆ(ಹೊಸಕೋಟೆ): ಎಂಟು ತಿಂಗಳ ದತ್ತು ಮಗುವನ್ನು ನಿಧಿ ಆಸೆಗಾಗಿ ಬಲಿ ಕೊಡಲು ಮುಂದಾಗಿದ್ದ ಸಾಕು ತಂದೆ ಸೈಯ್ಯದ್ ಇಮ್ರಾನ್‌ನನ್ನು ಪೊಲೀಸರು ಸೋಮವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಮಗುವಿನ ಹೆತ್ತ ತಾಯಿ ಕೋಲಾರ ಆರೋಹಳ್ಳಿ ಗ್ರಾಮದ ಮಂಜುಳ ಅವರನ್ನು ಸೂಲಿಬೆಲೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಎಂಟು ತಿಂಗಳ ದತ್ತು ಮಗುವನ್ನು ನಿಧಿಗಾಗಿ ಬಲಿ ಕೊಡಲು ಯತ್ನಿಸಿದ ಆರೋಪದ ಮೇಲೆ ಸೂಲಿಬೆಲೆ ಜನತಾ ಕಾಲೊನಿ ನಿವಾಸಿಗಳಾದ ಸೈಯ್ಯದ್ ಇಮ್ರಾನ್ ಮತ್ತು ನಜ್ಮಾ ದಂಪತಿಯನ್ನು ಜ.3ರಂದು ವಶಕ್ಕೆ ಪಡೆಯಲಾಗಿತ್ತು.

ADVERTISEMENT

ಭಾನುವಾರ ರಾತ್ರಿಯೇ ಸಭೆ ನಡೆಸಿದ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ವರದಿ ಸಿದ್ಧಪಡಿಸಿ ಜಿಲ್ಲಾ ಶಿಶು ರಕ್ಷಣಾ ಘಟಕಕ್ಕೆ ಸಲ್ಲಿಸಿದ್ದರು.  ಸಂಬಂಧಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಶಿಶು ರಕ್ಷಣಾ ಘಟಕ ಸೂಲಿಬೆಲೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿತ್ತು. ಮಕ್ಕಳ ಕಲ್ಯಾಣ ಸಮಿತಿ ವರದಿ ಶಿಫಾರಸಿನಂತೆ ಸೂಲಿಬೆಲೆ ಪೊಲೀಸ್ ಸಬ್ಇನ್‌ಸ್ಪೆಕ್ಟರ್, ಮಗುವಿನ ದತ್ತು ತಂದೆಯನ್ನು ಬಂಧಿಸಿದರು.

ವೈದ್ಯ, ವಕೀಲ ಕೂಡ ಭಾಗಿ: ಮಗುವಿನ ಹೆತ್ತ ತಂದೆ,ತಾಯಿ ಕೋಲಾರದ ಆರೋಹಳ್ಳಿಯ ರಾಮಪ್ಪ ಮತ್ತು  ಮಂಜುಳ ದಂಪತಿಯನ್ನು ಪತ್ತೆ ಮಾಡಲಾಗಿದೆ. ತಾಯಿಯನ್ನು ವಶಕ್ಕೆ ಪಡೆಯಲಾಗಿದ್ದು, ತಂದೆ ಪರಾರಿಯಾಗಿದ್ದಾನೆ. ಮಗು ಮಾರಾಟಕ್ಕೆ ಕುಮ್ಮಕ್ಕು ನೀಡಿದ ಶ್ರೀರಂಗ ಆಸ್ಪತ್ರೆಯ ವೈದ್ಯ, ಸೂಲಿಬೆಲೆಯ ಮುಖ್ಯ ನೋಂದಾಣಾಧಿಕಾರಿ, ಅಂಬರೀಷ್ ಹಾಗೂ ಬೆಂಗಳೂರಿನ ವಕೀಲರೊಬ್ಬರನ್ನು ಪ್ರಕರಣದ ಆರೋಪಿಗಳು ಎಂದು ಗುರುತಿಸಲಾಗಿದೆ ಎಂದು ತಾಲ್ಲೂಕು ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ದಿ ಯೋಜನಾಧಿಕಾರಿ ಶಿವಮ್ಮ ಮಾಹಿತಿ ನೀಡಿದರು.

ಸಾಕ್ಷ್ಯ ಸಿಕ್ಕಿವೆ: ಮಗು ದತ್ತು ಪಡೆದಿದ್ದ ಇಮ್ರಾನ್, ನಜ್ಮಾ ದಂಪತಿ ಹಾಗೂ ಹೆತ್ತ ಪೋಷಕರಾದ ಮಂಜುಳ, ರಾಮಪ್ಪ ದಂಪತಿಗೆ ವಿಚಾರಣೆಗೆ ಹಾಜರಾಗಲು ತಿಳಿಸಲಾಗಿತ್ತು. ಆದರೆ, ಎರಡು ಕುಟುಂಬಗಳೂ ವಿಚಾರಣೆಗೆ ಗೈರಾಗಿದ್ದರು. ಸ್ಥಳ ಮಹಜರು ನಡೆಸಿದ ಸಂದರ್ಭದಲ್ಲಿ ಸಿಕ್ಕ ಸಾಕ್ಷಿ ಮತ್ತು ಕಾನೂನುಬಾಹಿರ ದತ್ತು ಪ್ರಕ್ರಿಯೆ ಪರಿಗಣಿಸಿ ವರದಿ ಸಿದ್ದಪಡಿಸಲಾಗಿದೆ. ಶುಕ್ರವಾರ ಮತ್ತೊಮ್ಮೆ ಸಭೆ ಸೇರಲಾಗುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಶಿಶು ಮಕ್ಕಳ ರಕ್ಷಣಾಧಿಕಾರಿ ಶ್ರೀಧರ್ ಯಾದವ್ ಹೇಳಿದರು.

ವಾಮಾಚಾರಕ್ಕೆ ಬಳಸಿದ ವಸ್ತುಗಳನ್ನು ವಶಕ್ಕೆ ಪಡೆದ ಪೊಲೀಸರು
ನಿಧಿ ಆಸೆಗಾಗಿ ಮಗು ಬಲಿ ಕೊಡಲು ವಾಮಾಚಾರ ನಡೆಸಿದ ಬಗ್ಗೆ ಸ್ಪಷ್ಟ ಸಾಕ್ಷ್ಯಾಧಾರಗಳು ಪತ್ತೆಯಾಗಿವೆ. ಮಕ್ಕಳ ಕಲ್ಯಾಣ ಸಮಿತಿ ಒಟ್ಟು ಏಳು ಜನರ ವಿರುದ್ಧ ಪ್ರಕರಣ ದಾಖಲಿಸಲು ಸೂಲಿಬೆಲೆ ಪೊಲೀಸ್ ಠಾಣೆಗೆ ವರದಿ ಸಲ್ಲಿಸಿದೆ. 
ಶ್ರೀಧರ್ ಯಾದವ್ ಶಿಶು ಮಕ್ಕಳ ರಕ್ಷಣಾಧಿಕಾರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಬೆಂಗಳೂರು ಗ್ರಾಮಾಂತರ ಜಿಲ್ಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.