
ಸೂಲಿಬೆಲೆ (ಹೊಸಕೋಟೆ): ಮಗು ಬಲಿ ಕೊಡಲು ಸಂಚು ನಡೆಸಿದ್ದ ಸೈಯ್ಯದ್ ಇಮ್ರಾನ್ ಹಾಗೂ ನಜ್ಮಾ ದಂಪತಿ ಕೋಲಾರದ ಬಡ ಕುಟುಂಬದಿಂದ ಎಂಟು ತಿಂಗಳ ಹಸುಳೆಯನ್ನು ₹1ಲಕ್ಷ ನೀಡಿ ಖರೀದಿಸಿದ್ದರು.
ಸೈಯ್ಯದ್ ಇಮ್ರಾನ್ ಹಾಗೂ ನಜ್ಮಾ ದಂಪತಿ ಇಬ್ಬರು ಮಕ್ಕಳಿದ್ದರೂ ₹1ಲಕ್ಷ ನೀಡಿ ಮಗು ಪಡೆದಿದ್ದರು. ಮಗು ದತ್ತು ಪಡೆಯುವಾಗ ಯಾವುದೇ ಕಾನೂನು ಅನುಸರಿಸಿಲ್ಲ. ದಂಪತಿ ನೀಡುತ್ತಿರುವ ವಿಭಿನ್ನ ಹೇಳಿಕೆಗಳು ಅನುಮಾನ ಮೂಡಿಸುತ್ತಿವೆ ಎಂದು ಪೊಲೀಸರು ಹೇಳಿದ್ದಾರೆ.
ಮನೆಯಲ್ಲಿ ಅನೇಕ ದಿನಗಳಿಂದ ಬೆಳೆದಿದ್ದ ಹುತ್ತ ತೆರವುಗೊಳಿಸಲು ಗುಂಡಿ ಅಗೆಯಲಾಗಿದೆ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.
‘ನನ್ನ ಗಂಡನ ಆರೋಗ್ಯ ಹದಗೆಡಲಿ ಎಂದು ಯಾರೋ ಮಾಟ ಮಂತ್ರ ಮಾಡಿಸಿ ಇಲ್ಲಿ ಅಡಗಿಸಿಟ್ಟಿದ್ದಾರೆ. ಅದನ್ನು ಹೊರ ತೆಗೆಯಲು ಗುಂಡಿ ತೋಡಿದ್ದೇವೆ’ ಎಂದು ಇಮ್ರಾನ್ ಪತ್ನಿ ನಜ್ಮಾ ಪೊಲೀಸರ ಎದುರು ಹೇಳಿಕೆ ನೀಡಿದ್ದಾರೆ.
ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ ವ್ಯಕ್ತಿ ಸಕಾಲಕ್ಕೆ ಸುಳಿವು ನೀಡಿದ್ದರಿಂದ ಮಗುವನ್ನು ರಕ್ಷಿಸಲು ಸಾಧ್ಯವಾಯಿತು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಶಿವಮ್ಮ ತಿಳಿಸಿದ್ದಾರೆ.
ಸೂಲಿಬೆಲೆ ಪೊಲೀಸರ ನೆರವು ಪಡೆದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಮಕ್ಕಳ ಸಹಾಯವಾಣಿ, ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಮಕ್ಕಳ ಕಲ್ಯಾಣ ಸಮಿತಿ ಮುಂದೆ ಜ.5ರಂದು ಮಗುವನ್ನು ಹಾಜರುಪಡಿಸಿ ವರದಿ ಸಲ್ಲಿಸಲಾಗುವುದು. ಮಗುವಿನ ಹೆತ್ತವರು ಮತ್ತು ದತ್ತು ಪಡೆದ ದಂಪತಿಯ ವಿಚಾರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾಮಾಚಾರಕ್ಕೆ ಮನೆಯ ಒಳಗೆ ತೋಡಿರುವ ಗುಂಡಿ
ದತ್ತು ಪ್ರಕ್ರಿಯೆ ಗೊತ್ತಿಲ್ಲ
ನಮ್ಮ ತಂದೆಯ ಸ್ನೇಹಿತನ ಕಡೆಯ ಕೋಲಾರದ ಬಡ ದಂಪತಿಗೆ ಇಬ್ಬರು ಮಕ್ಕಳಿದ್ದರು. ಬಡತನದಿಂದಾಗಿ ಅವರಿಗೆ ಎರಡು ಮಕ್ಕಳ ಲಾಲನೆ ಪಾಲನೆ ಕಷ್ಟವಾಗಿತ್ತು. ಹಾಗಾಗಿ ಬಡ ಕುಟುಂಬಕ್ಕೆ ಹಣಕಾಸಿನ ನೆರವು ನೀಡಿ ಮಗು ದತ್ತು ಪಡೆದಿದ್ದೇವೆ. ಕಾನೂನು ಪ್ರಕಾರ ದತ್ತು ಪಡೆಯುವ ವಿಚಾರ ನಮಗೆ ಗೊತ್ತಿಲ್ಲ. ಆದರೆ ನಿಧಿ ಆಸೆಗಾಗಿ ಮಗು ಬಲಿ ಕೊಡುತ್ತಿದ್ದಾರೆ ಎಂಬುವುದು ಸುಳ್ಳು. ನಮ್ಮ ವಿರುದ್ಧ ಯಾರೋ ವ್ಯವಸ್ಥಿತ ಪಿತೂರಿ ನಡೆಸಿದ್ದಾರೆ. ಇದರ ಹಿಂದೆ ಯಾರದೋ ಕೈವಾಡ ಇದೆ ಎಂದು ಮಗು ದತ್ತು ಪಡೆದ ಸೈಯ್ಯದ್ ಇಮ್ರಾನ್ ಪ್ರತಿಕ್ರಿಯಿಸಿದ್ದಾರೆ.
ಮಗುವಿನ ಯೋಗಕ್ಷೇಮ ವಿಚಾರಿಸಿದ ಅಧಿಕಾರಿಗಳು
ದೇವನಹಳ್ಳಿ: ನಿಧಿ ಬಲಿಯಿಂದ ರಕ್ಷಿಸಿ ದೇವನಹಳ್ಳಿಯ ಶಿಶುಮಂದಿರದಲ್ಲಿ ಆಶ್ರಯ ನೀಡಲಾಗಿರುವ ಎಂಟು ತಿಂಗಳ ಮಗುವಿನ ಯೋಗಕ್ಷೇಮವನ್ನು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷ ಶಶಿಧರ ಎಸ್. ಕೋಸಂಬೆ ಹಾಗೂ ಮಕ್ಕಳ ನಿರ್ದೇಶನಾಲಯದ ನಿರ್ದೇಶಕಿ ಡಾ. ಸ್ನೇಹಾ ಭಾನುವಾರ ವಿಚಾರಿಸಿದರು. ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ಡಾ. ರಾಜಣ್ಣ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನಿತಾ ಲಕ್ಷ್ಮಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ ಇದ್ದರು. ಇಂದು ಪೋಷಕರ ವಿಚಾರಣೆ ದೇವನಹಳ್ಳಿಯಲ್ಲಿ ಜ.5ರಂದು ಮಗು ಹೆತ್ತವರು ಮತ್ತು ದತ್ತು ಪಡೆದವರ ವಿಚಾರಣೆ ನಡೆಸಲಾಗುತ್ತದೆ. ಕಾನೂನಾತ್ಮಕವಾಗಿ ದತ್ತು ಪಡೆದಿದ್ದರೆ ಮಗು ಹಿಂದಿರುಗಿಸಲಾಗುವುದು. ಇಲ್ಲದಿದ್ದರೆ ಮಗುವಿನ ಹೆತ್ತ ತಂದೆತಾಯಿ ವಿರುದ್ಧ ಹಾಗೂ ಮಗು ಬಲಿ ಕೊಡಲು ವಾಮಾಚಾರ ಯತ್ನ ನಡೆದಿರುವುದು ಸಾಬೀತಾದರೆ ದತ್ತು ಪಡೆದ ಕುಟುಂಬದ ವಿರುದ್ಧ ಎಫ್‌ಐಆರ್ ದಾಖಲಿಸಲು ಶಿಫಾರಸು ಮಾಡಲಾಗುವುದು. ದೊಡ್ಡಬಳ್ಳಾಪುರದಲ್ಲಿ ಶುಕ್ರವಾರ ಮಕ್ಕಳ ಕಲ್ಯಾಣ ಸಮಿತಿಗೆ ಸಮಗ್ರ ವರದಿ ಸಲ್ಲಿಸಲಾಗುವುದು ಎಂದು ಶಿಶು ರಕ್ಷಣಾಧಿಕಾರಿ ಶ್ರೀಧರ್ ಯಾದವ್ ತಿಳಿಸಿದ್ದಾರೆ.
ದತ್ತು ಪಡೆಯುವುದು ಹೇಗೆ?
ಕಾನೂನುಬಾಹಿರವಾಗಿ ಮಕ್ಕಳನ್ನು ದತ್ತು ಪಡೆಯುವುದು ಅಪರಾಧ. ದತ್ತು ಪ್ರಕ್ರಿಯೆಗೆ ಸರ್ಕಾರದಿಂದಲೇ ಅಗತ್ಯ ಸಹಾಯ ದೊರೆಯುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿರುವ ‘ಮಮತೆಯ ತೊಟ್ಟಿಲು’ ಯೋಜನೆ ಹಾಗೂ ಮಕ್ಕಳ ಸಹಾಯವಾಣಿ 1098 ಮೂಲಕ ಮಾಹಿತಿ ಪಡೆದುಕೊಳ್ಳಬಹುದು. ಮಕ್ಕಳ ಖರೀದಿ ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ ಎಂದು ಮಕ್ಕಳ ನಿರ್ದೇಶನಾಲಯದ ನಿರ್ದೇಶಕಿ ಡಾ. ಸ್ನೇಹಾ ತಿಳಿಸಿದ್ದಾರೆ.
ನಿಧಿ ಆಸೆಗಾಗಿ ಮಗು ಬಲಿ ಕೊಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಿದೆ. ಕಾನೂನುಬಾಹಿರವಾಗಿ ಮಗು ದತ್ತು ಪಡೆದಿರುವ ಹಾಗೂ ವಾಮಾಚಾರಕ್ಕೆ ಬಲಿ ಕೊಡಲು ಯತ್ನಿಸಿದ ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು.ಶಶಿಧರ ಎಸ್. ಕೋಸಂಬೆ, ಅಧ್ಯಕ್ಷ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ
ಮಗು ದತ್ತು ಪಡೆದಿದ್ದೇವೆ ಎಂದು ಸೈಯ್ಯದ್ ಇಮ್ರಾನ್ ಕುಟುಂಬ ಹೇಳುತ್ತಿದೆ. ಆದರೆ ದತ್ತು ಪ್ರಕ್ರಿಯೆಗೆ ಸಂಬಂಧಿಸಿದ ಕಾನೂನು ದಾಖಲೆ ತೋರಿಸಿಲ್ಲಶಿವಮ್ಮ, ಶಿಶು ಅಭಿವೃದ್ದಿ ಯೋಜನಾ ಅಧಿಕಾರಿ