ADVERTISEMENT

ತಾಯಂದಿರು ಮಕ್ಕಳ ಪಾಲಿಗೆ ಮನೋವೈದ್ಯರಾಗಬೇಕು

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2019, 13:07 IST
Last Updated 14 ನವೆಂಬರ್ 2019, 13:07 IST
ವಿಜಯಪುರದ ರಾಯಲ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆಯಲ್ಲಿ ವಿವಿಧ ವೇಷಭೂಷಣಗಳು ತೊಟ್ಟಿದ್ದ ಮಕ್ಕಳನ್ನು ಅಭಿನಂದಿಸಿದರು
ವಿಜಯಪುರದ ರಾಯಲ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆಯಲ್ಲಿ ವಿವಿಧ ವೇಷಭೂಷಣಗಳು ತೊಟ್ಟಿದ್ದ ಮಕ್ಕಳನ್ನು ಅಭಿನಂದಿಸಿದರು   

ವಿಜಯಪುರ: ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ತಾಯಂದಿರ ಪಾತ್ರ ಮಹತ್ತರವಾದದ್ದು ಎಂದು ಮುಖಂಡ ನರಸಿಂಹನಾಯಕ್ ಹೇಳಿದರು.

ಇಲ್ಲಿನ ರಾಯಲ್ ಪಬ್ಲಿಕ್ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಯಂದಿರು ಮಕ್ಕಳ ಪಾಲಿಗೆ ಮನೋವೈದ್ಯರಿದ್ದಂತೆ. ಮಗುವಿನ ಚಿಂತನೆ, ಅಂತರಾಳ, ಅವರ ಚಲನವಲನಗಳ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡಿರುವ ಅವರು, ಅವರನ್ನು ಹೇಗೆ ಬೆಳೆಸಬೇಕು ಎನ್ನುವ ಬಗ್ಗೆ ಅವರಿಗೆ ಮಾತ್ರವೇ ಮಾಹಿತಿ ಇರಲುಸಾಧ್ಯ. ಮಕ್ಕಳ ಕುರಿತು ನಿರ್ಲಕ್ಷ್ಯ ಭಾವನೆಯನ್ನು ಬಿಟ್ಟು ಅವರಿಗೆ ಉತ್ತಮ ಸಂಸ್ಕಾರ, ಗುರು ಹಿರಿಯರ ಬಗ್ಗೆ ಗೌರವ ಭಾವನೆ ಮೂಡುವಂತೆ ಮಾಡಬೇಕಾಗಿದೆ.

ADVERTISEMENT

‘ಬಾಲಾಪರಾಧಿಗಳು ಹೆಚ್ಚಾಗುತ್ತಿದ್ದಾರೆ. ಇದಕ್ಕೆಲ್ಲಾ ವ್ಯವಸ್ಥೆಯಲ್ಲಿನ ಲೋಪದೋಷಗಳೇ ಮೂಲ ಕಾರಣ. ಮಕ್ಕಳಲ್ಲಿ ಅಪರಾಧ ಮನೋಭಾವ ತೊಲಗಬೇಕಾದರೆ ಅವರನ್ನು ಸುಶಿಕ್ಷಿತರನ್ನಾಗಿ ಮಾಡಲು ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕು. ಮಕ್ಕಳು ತಮ್ಮ ಹಕ್ಕುಗಳ ಪಡೆದು ಗೌರವಯುತವಾಗಿ ಬದುಕಲು ಅವಕಾಶ ಮಾಡಿಕೊಡಬೇಕು’ ಎಂದರು.

ಪ್ರಭಂಜನ ಎಜುಕೇಷನ್ ಟ್ರಸ್ಟಿನ ಅಧ್ಯಕ್ಷ ವಿ.ಎನ್.ರಮೇಶ್ ಮಾತನಾಡಿ, ‘ಇಂದಿನ ಮಕ್ಕಳಲ್ಲಿ ಬುದ್ಧಿಶಕ್ತಿಯ ಕೊರತೆಯಿಲ್ಲ. ಆದರೆ, ಸಂಸ್ಕಾರದ ಕೊರತೆಯಿದೆ. ಹೀಗಾಗಿ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೇ ಉತ್ತಮ ಸಂಸ್ಕಾರ ನೀಡಬೇಕು. ಮನುಷ್ಯ ಶೈಕ್ಷಣಿಕವಾಗಿ ಎಷ್ಟೇ ಎತ್ತರಕ್ಕೆ ಬೆಳೆದರೂ ಅವನಲ್ಲಿ ಸಂಸ್ಕಾರವಿಲ್ಲದಿದ್ದರೆ ಆ ವ್ಯಕ್ತಿ ಸಮಾಜದ ಅತ್ಯಂತ ಕಟ್ಟಕಡೆಯ ವ್ಯಕ್ತಿಯಾಗಿರುತ್ತಾನೆ. ಪ್ರೌಢಶಾಲಾ ಹಂತದವರೆಗೂ ಪಾಲಕರು ಮಕ್ಕಳಿಗೆ ಮನೆಯಲ್ಲಿಯೇ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ನೀಡಬೇಕು’ ಎಂದರು.

ಜೇಸೀಸ್ ಸಂಸ್ಥೆಯ ಸೀನಿಯರ್ ಛೆಂಬರ್‌ನ ಮುಖಂಡ ಸುಬ್ರಮಣಿ ಶೆಟ್ಟಿ ಮಾತನಾಡಿ, ಪೋಷಕರು ಮಕ್ಕಳಿಗಿಂತ ಹೆಚ್ಚು ಆದಾಯದ ಕಡೆಗೆ ಗಮನ ಹರಿಸುವುದರಿಂದ ಮಕ್ಕಳು ದುಶ್ಚಟಗಳಿಗೆ ಬಲಿಯಾಗುವ ಸಾಧ್ಯತೆ ಇದೆ. ಹೀಗಾಗಿ ಪಾಲಕರು ಮನೆಯಲ್ಲಿ ಸ್ನೇಹಮಯ ವಾತಾವರಣ ನಿರ್ಮಿಸಿ ಪೋಷಕರು ಮಕ್ಕಳ ಕಡೆ ಗಮನಹರಿಸದೆ ಆದಾಯದ ಕಡೆ ಹೆಚ್ಚು ಗಮನಹರಿಸುವುದರಿಂದ ಮಕ್ಕಳ ಗಮನ ಬೇರೆಡೆ ಹರಿದು ಕೆಟ್ಟವರ ಸಹವಾಸ, ದುಶ್ಚಟದಂತಹ ಚಟುವಟಿಕೆಗಳಿಗೆ ಬಲಿಯಾಗಿ ಮಕ್ಕಳು ಕೊಲೆ, ಸುಲಿಗೆಯಂತಹ ಘೋರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಕಾನೂನಿನ ಸಂಘರ್ಷಕ್ಕೊಳಗಾಗುತ್ತಿದ್ದಾರೆ ಎಂದರು.

ಚಿತ್ರ ನಿರ್ಮಾಪಕ ಮಂಡಿಬೆಲೆ ಮುನೇಗೌಡ ಮಾತನಾಡಿ, ‘ಯಾರೂ ಹುಟ್ಟಿನಿಂದ ಕೆಟ್ಟವರಾಗಿರುವುದಿಲ್ಲ. ಸಮಾಜದಲ್ಲಿ ಬೆಳೆಯುವಾಗ ಅವರು ಆಯ್ದುಕೊಳ್ಳುವ ದಾರಿಗಳಿಂದ ಒಳ್ಳೆಯವರು ಅಥವಾ ಕೆಟ್ಟವರಾಗುತ್ತಾರೆ. ಆದ್ದರಿಂದ ಪೋಷಕರು ಮಕ್ಕಳನ್ನು ಜವಾಬ್ದಾರಿಯಿಂದ ಸಮಾಜಮುಖಿಯಾಗಿ ಬೆಳೆಸಬೇಕು’ ಎಂದು ಸಲಹೆ ನೀಡಿದರು.

ಶಾಲಾ ಮಕ್ಕಳು ಕಿತ್ತೂರುರಾಣಿ ಚೆನ್ನಮ್ಮ, ಮದರ್‌ತೆರೆಸಾ, ಟಿಪ್ಪಿಸುಲ್ತಾನ್, ಭಾರತಮಾತೆ, ಕನಕದಾಸರು, ಸೇರಿದಂತೆ ವಿವಿಧ ಸಾಧಕರ ವೇಷಭೂಷಣಗಳನ್ನು ಧರಿಸಿಕೊಂಡು ಎಲ್ಲರ ಗಮನ ಸೆಳೆದರು. ಮುಖ್ಯಶಿಕ್ಷಕಿ ಚಂದ್ರಮುಖಿ ರಮೇಶ್, ಮುಖಂಡರಾದ ಜೆ.ಆರ್.ಮುನಿವೀರಣ್ಣ, ಅಂಬುಜ, ಶಿಕ್ಷಕಿಯರಾದ ವಾಣಿಶ್ರೀ, ಪಲ್ಲವಿ, ಗಾಯಿತ್ರಿ, ಮೋನಿಷ, ಚೈತ್ರಾ, ಸಹಾಯಕಿ ನೇತ್ರಾವತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.