ADVERTISEMENT

ಸೂಲಿಬೆಲೆ‌ | ಭಾವಾಪುರ ರೈತನ ಕೈ ಹಿಡಿದ ಕೋಲ್ಕತ್ತ ಸೇವಂತಿ

20 ಗುಂಟೆಯಲ್ಲಿ ಲಾಭದಾಯಕ ಬೆಳೆ । ವರ್ಷಕ್ಕೆ ನಾಲ್ಕು ಇಳುವರಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 5:02 IST
Last Updated 18 ಜನವರಿ 2026, 5:02 IST
ಭಾವಾಪುರದ ರೈತ ಮುನೇಗೌಡ ಅವರ ಪಾಲಿ ಹೌಸ್‌ನಲ್ಲಿ ಸಂಪಾಗಿ ಬೆಳೆದ ಕೋಲ್ಕತ್ತಾದ ಮುಸ್ಕಿನ್ ವೈಟ್ ಮತ್ತು ತಮಿಳುನಾಡಿನ ರಾಯಕೋಟಿಯ ಐಶ್ವರ್ಯ ತಳಿಯ ಸೇವಂತಿ
ಭಾವಾಪುರದ ರೈತ ಮುನೇಗೌಡ ಅವರ ಪಾಲಿ ಹೌಸ್‌ನಲ್ಲಿ ಸಂಪಾಗಿ ಬೆಳೆದ ಕೋಲ್ಕತ್ತಾದ ಮುಸ್ಕಿನ್ ವೈಟ್ ಮತ್ತು ತಮಿಳುನಾಡಿನ ರಾಯಕೋಟಿಯ ಐಶ್ವರ್ಯ ತಳಿಯ ಸೇವಂತಿ   

ಸೂಲಿಬೆಲೆ(ಹೊಸಕೋಟೆ): ದೊಡ್ಡಅರಳಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಾವಾಪುರ ಗ್ರಾಮದ ಪ್ರಗತಿಪರ ರೈತ ಮುನೇಗೌಡ 20 ಗುಂಟೆ ಜಮೀನಿನ ಪಾಲಿಹೌಸ್‌ನಲ್ಲಿ ಕೋಲ್ಕತ್ತಾ ‘ರಸ್ಕಿನ್‌ ವೈಟ್‌’ ಹಾಗೂ ತಮಿಳುನಾಡಿನ ರಾಯಕೋಟೆಯ ‘ಐಶ್ವರ್ಯ’ ತಳಿ ಸೇವಂತಿ ಬೆಳೆಯುತ್ತಿದ್ದು, ಮೊದಲ ಫಸಲಿನಲ್ಲಿಯೇ ಕೈತುಂಬಾ ಹಣ ಗಳಿಸಿದ್ದಾರೆ. 

ವರ್ಷಕ್ಕೆ ನಾಲ್ಕು ಫಸಲು ತೆಗೆಯಬಹುದಾದ ಈ ತಳಿಯ ಸೇವಂತಿ ಮೊದಲ ಬಾರಿಗೆ ಲಾಭ ಕಂಡಿದ್ದೇನೆ ಮುನೇಗೌಡ, ಸೇವಂತಿಯಿಂದ ತನ್ನ ಭಾಗ್ಯದ ಬಾಗಿಲು ತೆಗೆಯಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. 

‘ತರಕಾರಿ ಬೆಳೆಯಿಂದ ನಿರೀಕ್ಷಿತ ಲಾಭ ಸಿಗಲಿಲ್ಲ. ತೋಟದಲ್ಲಿ ಮೂರು ವರ್ಷ ಸೇವಂತಿ ಬೆಳೆದೆ. ಅದೂ ಕೂಡ ಪ್ರಯೋಜನ ಆಗಿಲ್ಲ. ಆಗ ಪಕ್ಕದೂರಿನ ತೋಟ ನೋಡಿ ಕೋಲ್ಕತ್ತಾ ಹಾಗೂ ತಮಿಳುನಾಡಿನ ರಾಯಕೋಟಿ ಸೇವಂತಿಗೆ ತಳಿ ಸಸಿ ತರಿಸಿಕೊಂಡು ಪಾಲಿಹೌಸ್‌ನಲ್ಲಿ ಹೂ ಬೆಳೆಯುವ ಪ್ರಯೋಗಕ್ಕೆ ಮೊದಲ ಬಾರಿಗೆ ಕೈ ಹಾಕಿದೆ. ಇದು ನನ್ನ ಕೈ ಹಿಡಿದಿದೆ’ ಎನ್ನುತ್ತಾರೆ. 

ADVERTISEMENT

‘ಸೇವಂತಿ ಬೆಳೆಯಲು ₹1.50 ಲಕ್ಷ ಖರ್ಚು ಮಾಡಿದ್ದೇನೆ. ವರ್ಷದಲ್ಲಿ ನಾಲ್ಕು ಬೆಳೆ ಬರಲಿದ್ದು, ಒಳ್ಳೆ ಬೆಲೆ ಸಿಕ್ಕರೆ ಒಂದು ಬೆಳೆಗೆ  ನಾಲ್ಕರಿಂದ ಐದು ಲಕ್ಷ ಗಳಿಸಿ ಲಾಭ ಗಳಿಸಬಹುದು. ಮೊದಲ ಬೆಳೆ ಉತ್ತಮ ಇಳುವರಿ ನೀಡಿದ್ದು, ಇದರಿಂದ ₹2 ಲಕ್ಷ ಲಾಭ ಬಂದಿದೆ. ಇನ್ನೂ ಮೂರು ಬೆಳೆ ಬಾಕಿ ಇದೆ’ ಎಂದು ತಿಳಿಸಿದರು.

‘ಕೆ.ಸತ್ಯವಾರದಲ್ಲಿ ರಸ್ಕಿನ್ ವೈಟ್ ಸೇವಂತಿ ಬೆಳೆಯುತ್ತಿದ್ದನ್ನು ಕಂಡು ಕೋಲ್ಕತ್ತಾದಿಂದ ರಸ್ಕಿನ್ ವೈಟ್ ಮತ್ತು ತಮಿಳುನಾಡಿನ ಐಶ್ವರ್ಯ ಸಸಿಯನ್ನು ಆನ್‌ಲೈನ್‌ ಮೂಲಕ ತರಿಸಿಕೊಂಡೆ. 20 ಗುಂಟೆಯಲ್ಲಿದ್ದ ಪಾಲಿಹೌಸ್‌ನಲ್ಲಿ ನಾಟಿ ಮಾಡಿಸಿದೆ. ಅಲ್ಲದೆ ಎರಡು ವರ್ಷಗಳ ಹಿಂದೆ 20 ಲೋಡ್ ತಿಪ್ಪೆ ಗೊಬ್ಬರ ಮತ್ತು ಆರು ತಿಂಗಳ ಹಿಂದೆ ಸಂಗ್ರಹಿಸಿದ್ದ ಎರಡು ಲೋಡ್ ಕೋಳಿ ಗೊಬ್ಬರ ಹಾಕಿದ್ದೆ, ಊಹೆಗಿಂತಲೂ ಸಸಿಗಳು ಸಂಪಾಗಿ ಬೆಳೆದು ನಿಂತಿವೆ. ದಿನಕ್ಕೆ 60 ಕೆ.ಜಿ ಹೂ ಕಟಾವು ಮಾಡುತ್ತಿದ್ದೇನೆ. ಒಂದು ಬೆಳೆಗೆ ₹2 ರಿಂದ ₹2.50 ಲಕ್ಷ ಸಿಗುತ್ತದೆ’ ಎಂದು ಮುನೆಗೌಡ ಹರ್ಷ ವ್ಯಕ್ತಪಡಿಸಿದರು.

₹7–8 ಲಕ್ಷ ಲಾಭ ಗಳಿಸಬಹುದು: ರಸ್ಕಿನ್ ವೈಟ್ ಸೇವಂತಿಗೆ ಹೂ ಬಹುತೇಕ ಸಭೆ ಸಮಾರಂಭಗಳಲ್ಲಿನ ಅಲಂಕಾರಕ್ಕೆ ಬಳಸಲಾಗುತ್ತದೆ. ಇದರಿಂದ ಸಾಮಾನ್ಯವಾಗಿ ವರ್ಷ ಪೂರ್ತಿ ಬೇಡಿಕೆ ಇದ್ದೇ ಇರುತ್ತೆ. ತಾಂತ್ರಿಕ ಬೇಸಾಯ ಮಾಡಿದರೆ ಕೇವಲ 10 ರಿಂದ 20 ಗುಂಟೆ ಇದ್ದರೂ ಸಾಕು. ಕನಿಷ್ಠ ಎರಡು ಟನ್ ಹೂ ಬೆಳೆಯುತ್ತದೆ. ಈ ತಳಿಯಲ್ಲಿ ಸಾಮಾನ್ಯವಾಗಿ ವರ್ಷದಲ್ಲಿ ನಾಲ್ಕು ಬೆಳೆ ತೆಗೆಯಬಹುದು. ಇದರಿಂದ ಒಟ್ಟಾರೆ ಎಂಟು ಟನ್‌ಗೂ ಹೆಚ್ಚಿನ ಹೂ ಕಟಾವಿಗೆ ಬರುತ್ತದೆ. ವರ್ಷಕ್ಕೆ ಖರ್ಚು ವೆಚ್ಚ ತೆಗೆದರೆ ₹7 ರಿಂದ ₹8 ಲಕ್ಷ ಲಾಭ ಗಳಿಸಬಹುದು. ಪುಷ್ಪ ಕೃಷಿಯಲ್ಲಿ ಎಷ್ಟು ಎಕರೆಯಲ್ಲಿ ಬೆಳೆಯುತ್ತೇವೆ ಎನ್ನುವುದು ಮುಖ್ಯವಲ್ಲ, ಇರುವ ಚಿಕ್ಕ ಜಾಗದಲ್ಲೇ ಹೇಗೆ ಬೆಳೆಯುತ್ತೇವೆ ಎಂಬುದೇ ಮುಖ್ಯ ಎನ್ನುವುದು ಅನುಭವದ ಮಾತು.

ಆರೈಕೆ ಹೇಗೆ?: ಮುಸ್ಕಿನ್ ವೈಟ್ ಮತ್ತು ಐಶ್ವರ್ಯ ತಳಿಯ ಸಸಿಗಳನ್ನು ಪಾಲಿಹೌಸ್‌ನಲ್ಲಿ ಮಾತ್ರ ನಾಟಿ ಮಾಡಿಸಿದೆ. ನಾಟಿ ಮಾಡಿದ ಒಂದು ತಿಂಗಳು ರಾತ್ರಿ ಸಂದರ್ಭದಲ್ಲಿ ಸಸಿಗೆ ಉಷ್ಣ ವಾತಾವರಣ ಇರಲೆಂದು ಸುಮಾರು 9 ವೋಲ್ಟ್ ನ 120 ಎಲ್ ಇಡಿ ಬಲ್ಬ್‌ ಅಳವಡಿಸಿದೆ. ಪ್ರತಿ ದಿನ 10 ನಿಮಿಷ ಮಾತ್ರ ಸಸಿಗೆ ನೀರು ಬಿಡುತ್ತಿದ್ದೆ. ಸಸಿ ರಕ್ಷಣೆಗಾಗಿ ಒಮ್ಮೆ ಮಾತ್ರ ಬೂಸ್ಟರ್ ಗೊಬ್ಬರ ಬಳಸಲಾಗಿತ್ತು. ನಂತರ ಆಗಾಗ ಸೊಳ್ಳೆ ಔಷದಿ ಸಿಂಪಡಿಸುತ್ತಿದ್ದೆ, ಇದನ್ನು ಬಿಟ್ಟರೆ ನೀರಿನ ಜೊತೆ ಯಾವಾಗಲಾದರೂ ಒಮ್ಮೆ ಗೊಬ್ಬರ ಕೊಡಲಾಗುತ್ತಿತ್ತು. ಇದನ್ನು ಬಿಟ್ಟರೆ ಬೇರೆ ಇನ್ನೇನನ್ನು ಮಾಡಿಲ್ಲ. ಸಾವಯವ ಗೊಬ್ಬರ ಹೆಚ್ಚಾಗಿ ಬಳಸಿದ್ದು ಕೈಹಿಡಿದೆ’ ಎಂದು ಮುನೇಗೌಡ ತಿಳಿಸಿದರು.

ಕೇವಲ 20 ಗುಂಟೆಯಲ್ಲಿ ಸಂಪಾಗಿ ಬೆಳೆದ ಸೇವಂತಿ
ಮುನೇಗೌಡ
ನಮ್ಮ ಹೊಲದಲ್ಲಿ ಹೂ ಯಾವಾಗ ಬರುತ್ತೆ ಎಂದು ತಾಲ್ಲೂಕಿನ ಹೂ ಮಂಡಿಯಲ್ಲಿ ಕಾಯುವಂತಹ ಮಟ್ಟಕ್ಕೆ ಬೇಡಿಕೆ ಸೃಷ್ಟಿಯಾಗಿದೆ
ಮುನೇಗೌಡ ಹೂ ಬೆಳೆಗಾರ

ಬೆಲೆ ನಿಗದಿಯಲ್ಲಿ ತಾರತಮ್ಯ ಗೊಬ್ಬರ ರಾಸಾಯಿನಿಕ ಮತ್ತಿತರ ಕೃಷಿ ಸಾಮಗ್ರಿ ಪ್ರತಿ ವಸ್ತುವಿಗೂ ಒಂದು ಬೆಲೆ ಮೊದಲೇ ನಿಗದಿ ಆಗಿರುತ್ತದೆ. ಅವುಗಳಿಗೆ ಬೇಡಿಕೆ ಹೆಚ್ಚಿದರೆ ಬೆಲೆಯೂ ಹೆಚ್ಚಾಗುತ್ತದೆ. ಆದರೆ ನಾವು ಬೆಳೆದ ಬೆಳೆಗೆ ಒಂದು ಬೆಲೆ ಎಂದು ನಿಗದಿ ಇರುವುದೇ ಇಲ್ಲ. ಮಾರುಕಟ್ಟೆಯಲ್ಲಿ ಒಂದು ರೀತಿ ದಳ್ಳಾಳಿಗಳಗೆ ಒಂದು ರೀತಿ ಜನರಿಗೆ ಒಂದು ರೀತಿಯ ಬೆಲೆಯಲ್ಲಿ ಮರಾಟಮಾಡಬೇಕಾದ ಸ್ಥಿತಿ ಇದೆ  ಮುನೇಗೌಡ ಹೂ ಬೆಳೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.