
ದೇವನಹಳ್ಳಿ: ವಂದೇ ಮಾತರಂ ಗೀತೆಯ 150ನೇ ವರ್ಷದ ಸ್ಮರಣಾರ್ಥ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಜನವರಿ 28ರಿಂದ ಫೆಬ್ರವರಿ 22 ರವರೆಗೆ ‘ಸಿಐಎಸ್ಎಫ್ ವಂದೇ ಮಾತರಂ ಕರಾವಳಿ ಸೈಕ್ಲೋಥಾನ್’ ಎರಡನೇ ಆವೃತ್ತಿ ಆಯೋಜಿಸಿದೆ ಎಂದು ಸಿಐಎಸ್ಎಫ್ ಬೆಂಗಳೂರು ವಲಯದ ಡಿಐಜಿ ಎಚ್.ಮಂಜುನಾಥ್ (ಐಪಿಎಸ್) ತಿಳಿಸಿದ್ದಾರೆ.
‘ಸುರಕ್ಷಿತ ಕರಾವಳಿ, ಸಮೃದ್ಧ ಭಾರತ’ ಎಂಬ ಘೋಷವಾಕ್ಯದೊಂದಿಗೆ 25 ದಿನಗಳ ಕಾಲ ದೇಶವ್ಯಾಪಿ ಕರಾವಳಿ ವ್ಯಾಪ್ತಿಯಲ್ಲಿ ಸೈಕ್ಲೋಥಾನ್ ನಡೆಯಲಿದೆ. ಒಂಬತ್ತು ಕರಾವಳಿ ರಾಜ್ಯಗಳನ್ನು ಒಳಗೊಂಡಂತೆ ಪೂರ್ವ ಮತ್ತು ಪಶ್ಚಿಮ ಕರಾವಳಿಗಳಲ್ಲಿ ಸುಮಾರು 6,500 ಕಿ.ಮೀ. ದೂರವನ್ನು ಸೈಕ್ಲಿಸ್ಟ್‌ಗಳು ಕ್ರಮಿಸಲಿದ್ದಾರೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕರಾವಳಿ ಪ್ರದೇಶಗಳು ಭಾರತದ ರಾಷ್ಟ್ರೀಯ ಭದ್ರತೆ ಹಾಗೂ ಆರ್ಥಿಕ ಅಭಿವೃದ್ಧಿಗೆ ಪ್ರಮುಖವಾಗಿವೆ. ದೇಶದ ಜನಸಂಖ್ಯೆಯ ಸುಮಾರು ಶೇ 18 ಮಂದಿ ಕರಾವಳಿ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ. ಭಾರತದ ವಾಣಿಜ್ಯದ ಸುಮಾರು ಶೇ 90 ಪ್ರಮಾಣ, ಶೇ 70ರಷ್ಟು ವಹಿವಾಟು ಸಮುದ್ರ ಮಾರ್ಗದ ಮೂಲಕ ನಡೆಯುತ್ತಿದೆ ಎಂದರು.
3,300ಕ್ಕೂ ಹೆಚ್ಚು ಕರಾವಳಿ ಹಳ್ಳಿಗಳು, 12 ಪ್ರಮುಖ ಬಂದರು, 200ಕ್ಕೂ ಹೆಚ್ಚು ಸಣ್ಣ ಬಂದರುಗಳು ಮತ್ತು ಹಲವು ತಂತ್ರಾತ್ಮಕ ಜಾಗಗಳು ಕರಾವಳಿ ವ್ಯಾಪ್ತಿಯಲ್ಲಿವೆ. ಈ ಮಹತ್ವದ ರಾಷ್ಟ್ರೀಯ ಆಸ್ತಿಯನ್ನು ರಕ್ಷಿಸುವಲ್ಲಿ ಸಾರ್ವಜನಿಕ ಜಾಗೃತಿ ಹಾಗೂ ಜನರ ಸಕ್ರಿಯ ಭಾಗವಹಿಸುವಿಕೆ ಉತ್ತೇಜಿಸುವುದು ಸೈಕ್ಲೋಥಾನ್ ಉದ್ದೇಶವಾಗಿದೆ ಎಂದು ತಿಳಿಸಿದರು.
ಸೈಕ್ಲೋಥಾನ್–2025ರಲ್ಲಿ 25 ದಿನಗಳಲ್ಲಿ 6,553 ಕಿ.ಮೀ. ದೂರ ಕ್ರಮಿಸಲಾಗಿತ್ತು. 25 ಲಕ್ಷಕ್ಕೂ ಹೆಚ್ಚು ನಾಗರಿಕರು ನೇರವಾಗಿ ಭಾಗವಹಿಸಿದ್ದರೆ, ಡಿಜಿಟಲ್ ವೇದಿಕೆಗಳಲ್ಲಿ 2.5 ಕೋಟಿಗೂ ಅಧಿಕ ಜನರಿಗೆ ತಲುಪಿತ್ತು. 1,100ಕ್ಕೂ ಹೆಚ್ಚು ನೋಂದಾಯಿತ ಸೈಕ್ಲಿಸ್ಟ್‌ಗಳು, ಪ್ರಸಿದ್ಧ ಕ್ರೀಡಾಪಟುಗಳು, ಚಲನಚಿತ್ರ ಹಾಗೂ ಸಾರ್ವಜನಿಕ ವ್ಯಕ್ತಿಗಳು ಪಾಲ್ಗೊಂಡಿದ್ದರು ಎಂದು ತಿಳಿಸಿದರು.
ಮೀನುಗಾರಿಕೆ, ಬಂದರುಗಳು, ಸಾಗಣೆ, ಕರಾವಳಿ ಪ್ರವಾಸೋದ್ಯಮ ಮತ್ತು ಸಮುದ್ರ ಸಂಪನ್ಮೂಲಗಳನ್ನು ಒಳಗೊಂಡ ಭಾರತದ ನೀಲಿ ಆರ್ಥಿಕತೆ ರಾಷ್ಟ್ರೀಯ ಜಿಡಿಪಿಗೆ ಅಂದಾಜು ಶೇ 4 ಕೊಡುಗೆ ನೀಡುತ್ತಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.