ADVERTISEMENT

31 ವಾರ್ಡ್‌ಗಳಿಗೂ ಶುದ್ಧ ನೀರು

ಮೂರು ತಿಂಗಳಿಗೊಮ್ಮೆ ಪರಿಶುದ್ಧತೆ ಪರಿಶೀಲನೆಗೆ ಶಾಸಕ ಧೀರಜ್‌ ಮುನಿರಾಜು ಸೂಚನೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 2:34 IST
Last Updated 30 ಸೆಪ್ಟೆಂಬರ್ 2025, 2:34 IST
ದೊಡ್ಡಬಳ್ಳಾಪುರದ ವೀರಭದ್ರನಪಾಳ್ಯದಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ದೀರಜ್‌ ಮುನಿರಾಜು ಭೂಮಿ ಪೂಜೆ ಸಲ್ಲಿಸಿದರು
ದೊಡ್ಡಬಳ್ಳಾಪುರದ ವೀರಭದ್ರನಪಾಳ್ಯದಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ದೀರಜ್‌ ಮುನಿರಾಜು ಭೂಮಿ ಪೂಜೆ ಸಲ್ಲಿಸಿದರು   

ದೊಡ್ಡಬಳ್ಳಾಪುರ: ನಗರದ 31 ವಾರ್ಡ್‌ಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಹೆಚ್ಚು ಒತ್ತು ನೀಡಲಾಗಿದೆ. ನೀರು ಶುದ್ಧೀಕರಣ ಘಟಕಗಳ ಪರಿಶುದ್ಧತೆಯನ್ನು ಮೂರು ತಿಂಗಳಿಗೊಮ್ಮೆ ಪರೀಕ್ಷೆ ಮಾಡುವಂತೆ ಸೂಚಿಸಲಾಗಿದೆ ಎಂದು ಶಾಸಕ ಧೀರಜ್‌ ಮುನಿರಾಜು ತಿಳಿಸಿದರು.

ನಗರಸಭೆ ವ್ಯಾಪ್ತಿಯ ಕನಕದಾಸ ನಗರ ಮತ್ತು ವೀರಭದ್ರನಪಾಳ್ಯ 12ನೇ ವಾರ್ಡ್‌ನಲ್ಲಿ ಗ್ರಂಥಾಲಯ ಉದ್ಘಾಟನೆ, ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ, ಶುದ್ಧ ನೀರಿನ ಘಟಕ ಉದ್ಘಾಟಿಸಿ ಮಾತನಾಡಿ, ನಗರದಲ್ಲಿ ಮೊದಲ ಬಾರಿಗೆ ವೈಟ್‌ಟ್ಯಾಪಿಂಗ್‌ ಕಾಂಕ್ರೀಟ್‌ ರಸ್ತೆ ನಿರ್ಮಾಣ ಕೆಲಸ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ತಾಲ್ಲೂಕಿನ ರಸ್ತೆಗಳ ಅಭಿವೃದ್ಧಿ ಹಾಗೂ ಕಾಮಗಾರಿಗಳನ್ನು ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದು. ನಗರೋತ್ಥಾನದಲ್ಲಿ ₹24 ಕೋಟಿ ಕಾಮಗಾರಿಗಳಿಗೆ ಟೆಂಡರ್‌ ಆಗಿದೆ. ನಗರಸಭೆ ಒಳಚರಂಡಿ ವ್ಯವಸ್ಥೆ ಉನ್ನತೀಕರಣಕ್ಕಾಗಿ ₹136 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ADVERTISEMENT

ನಗರದ ರಸ್ತೆ ವಿಸ್ತರಣೆಗೆ ಅಗತ್ಯ ಇರುವ ₹50 ಕೋಟಿಯನ್ನು ನಗರಸಭೆಗೆ ಸಾಲ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ರಸ್ತೆ ವಿಸ್ತರಣೆ ಹಾಗೂ ಮಾರುಕಟ್ಟೆ ಪ್ರದೇಶದಲ್ಲಿ ಅಂಗಡಿಗಳ ನಿರ್ಮಾಣ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.

ಶುದ್ಧ ನೀರಿನ ಘಟಕಗಳ ಬಗ್ಗೆ ದೂರುಗಳಿದ್ದರೆ ಸಾರ್ವಜನಿಕರು ನಗರಸಭೆಗೆ ತಿಳಿಸಿ, ಪರಿಹರಿಸಿಕೊಳ್ಳಬೇಕು ಎಂದರು.

ನಗರಸಭೆ ಅಧ್ಯಕ್ಷೆ ಸುಮಿತ್ರಾ ಆನಂದ್, ನಗರ ನಗರಸಭೆ ಸದಸ್ಯ ಎಂ.ಶಿವರಾಜ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.