ADVERTISEMENT

ಸಿಎಂ ಸ್ಥಾನ ಗೊಂದಲಕ್ಕೆ ಹೈಕಮಾಂಡ್‌ ನೇರ ಕಾರಣ: ಛಲವಾದಿ ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 4:47 IST
Last Updated 7 ಫೆಬ್ರುವರಿ 2026, 4:47 IST
ಪತ್ರಿಕಾಗೋಷ್ಠಿಯಲ್ಲಿ ಛಲವಾದಿ ನಾರಾಯಣಸ್ವಾಮಿ ಮಾತನಾಡಿದರು
ಪತ್ರಿಕಾಗೋಷ್ಠಿಯಲ್ಲಿ ಛಲವಾದಿ ನಾರಾಯಣಸ್ವಾಮಿ ಮಾತನಾಡಿದರು   

ದೊಡ್ಡಬಳ್ಳಾಪುರ: ‘ಮುಖ್ಯಮಂತ್ರಿ ಸ್ಥಾನ ಗೊಂದಲಕ್ಕೆ ಹೈಕಮಾಂಡ್ ನೇರ ಕಾರಣ. ಕಪ್ಪ ಕಾಣಿಕೆಗಾಗಿ ಹೈಕಮಾಂಡ್ ಈ ಎಲ್ಲ ಆಟ ಆಡಿಸುತ್ತಿದೆ. ‘ನಾಕೊಡೆ ನಿ ಬಿಡೆ’ ಹಗ್ಗ ಜಗ್ಗಾಟ ನಡೆಯುತ್ತಿದೆ’ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು. 

‘ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆ ಒಪ್ಪಂದ ಆಗಿತ್ತಾ ಇಲ್ಲವಾ ಎಂಬುದರ ಬಗ್ಗೆ ಹೈಕಮಾಂಡ್ ಸ್ಪಷ್ಟನೆ ನೀಡುತ್ತಿಲ್ಲ. ಈ ಕಡೆ ಇವರನ್ನು ಛೂ ಬಿಡುತ್ತಾರೆ. ಆ ಕಡೆ ಅವರನ್ನು ಛೂ ಬಿಡುತ್ತಾರೆ. ಎರಡೂ ಕಡೆಯಿಂದ ಬಂಡವಾಳ ಮಾಡಿಕೊಳ್ಳಲಾಗುತ್ತಿದೆ’ ಎಂದು ಇಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಯಾರು ಹೆಚ್ಚು ಕೊಡುತ್ತಾರೋ ಅವರು ಸಿ.ಎಂ ಆಗುತ್ತಾರೆ. ಇಬ್ಬರನ್ನು ಹೈಕಮಾಂಡ್ ಎತ್ತಿ ಕಟ್ಟುತ್ತಿದೆ. ಇಬ್ಬರ ಜಗಳದಲ್ಲಿ ಇಡೀ ರಾಜ್ಯ ಹಾಳಾಗುತ್ತಿದೆ’ ಎಂದರು. 

ADVERTISEMENT

‘ಮೆಟ್ರೊ ದರವನ್ನು ಕೇಂದ್ರ ಏರಿಕೆ ಮಾಡಿದೆ ಎಂದು ಆರೋಪ ಮಾಡುತ್ತಾರೆ. ನಮಗೂ ಅದಕ್ಕೂ ಸಂಬಂಧವಿಲ್ಲ. ಒಂದು ಸಮಿತಿ ರಚನೆ ಆಗಿದೆ. ಕಮಿಟಿ ಮತ್ತು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ವಿಚಾರ. ಮೆಟ್ರೊ ನಷ್ಟದಲ್ಲಿ ಇಲ್ಲ. ಕಾಂಗ್ರೆಸ್‌ಗೆ ಎಟಿಎಂ ಇರುವುದು ಕರ್ನಾಟಕದಲ್ಲೇ. ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡಿಗೆ ದುಡ್ಡು ಕೊಡಬೇಕು. ಎಲ್ಲ ಕಡೆಯಲ್ಲೂ ಕೈ ಆಡಿಸುತ್ತಿದ್ದಾರೆ’ ಆರೋಪಿಸಿದರು.

ಗಾಂಧಿ ವಿರೋಧಿ ಕಾಂಗ್ರೆಸ್ಸಿಗರು

ಗಾಂಧೀಜಿ ಹೆಸರು ಹೇಳುವ ಕಾಂಗ್ರೆಸ್‌ನಲ್ಲಿ ಖಾದಿ ಹಾಕುವವರಿಲ್ಲ. ಸಂವಿಧಾನದಲ್ಲಿ ಪಾನಮತ್ತರಿಗೆ ಅವಕಾಶವಿಲ್ಲ ಎನ್ನುತ್ತಾರೆ. ಆದರೆ ಆ ಪಕ್ಷದಲ್ಲೇ ಪಾನಪ್ರಿಯರಿದ್ದಾರೆ. ಕಾಂಗ್ರೆಸ್ಸಿಗರಿಗೆ ಕುಡಿದಿಲ್ಲ ಎಂದರೆ ರಾತ್ರಿ ನಿದ್ದೆ ಬರಲ್ಲ. ಒಂದು ದಿನವೂ ರಾಹುಲ್ ಗಾಂಧಿ ಖಾದಿ ಹಾಕಿಲ್ಲ. ಗಾಂಧಿ ತತ್ವಗಳ ವಿರುದ್ಧ ಕಾಂಗ್ರೆಸ್ ಇದೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.