ADVERTISEMENT

ಪಕ್ಷಿಗಳಿಗೆ ಆಶ್ರಯ ತಾಣ ಒಣಗಿದ ತೆಂಗಿನ ಮರ

ಹವ್ಯಾಸಿ ಛಾಯಾಚಿತ್ರಗ್ರಾಹಕ ಹರೀಶ್‌ ಧ್ರುವ ಕ್ಯಾಮೆರಾ ಕಣ್ಣೋಟದಲ್ಲಿ ಸೆರೆಯಾದ ಪಕ್ಷಿ ಪ್ರಪಂಚ

ನಟರಾಜ ನಾಗಸಂದ್ರ
Published 26 ಮೇ 2019, 19:45 IST
Last Updated 26 ಮೇ 2019, 19:45 IST
ಒಣಗಿದ ತೆಂಗಿನ ಮರದ ತುತ್ತ ತುದಿಯಲ್ಲಿ ಬೇಟೆಗಾಗಿ ಕಾದು ಕುಳಿತ ಕಿಂಗ್‌ಫಿಷರ್‌  
ಒಣಗಿದ ತೆಂಗಿನ ಮರದ ತುತ್ತ ತುದಿಯಲ್ಲಿ ಬೇಟೆಗಾಗಿ ಕಾದು ಕುಳಿತ ಕಿಂಗ್‌ಫಿಷರ್‌     

ದೊಡ್ಡಬಳ್ಳಾಪುರ: ತೆಂಗಿನಮರ ಅಂದರೆ ಕಲ್ಪವೃಕ್ಷ. ಇದರ ಎಲ್ಲಾ ಭಾಗವೂ ಉಪಯುಕ್ತ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ, ಎಲ್ಲ ಜಾತಿಯ ಪಕ್ಷಿಗಳಿಗೂ ತೆಂಗಿನಮರ ಆಶ್ರಯ ತಾಣ ಅಂದರೆ ಆಶ್ಚರ್ಯವಾಗಬಹುದು. ಇದು ಸತ್ಯ ಕೂಡ ಹೌದು.

ದೊಡ್ಡಬಳ್ಳಾಪುರದ ರಿಟ್ಟಲ್‌ ಇಂಡಿಯಾ ಉದ್ಯೋಗಿ ಹವ್ಯಾಸಿ ಛಾಯಾಚಿತ್ರಗ್ರಾಹಕ ಹರೀಶ್‌ ಧ್ರುವ ಅವರು ಒಂದೇ ಮರದಲ್ಲಿ ಹಲವು ಜಾತಿಯ ಪಕ್ಷಿಗಳು ಆಶ್ರಯಿಸಿರುವುದನ್ನು ಸೆರೆ ಹಿಡಿದಿದ್ದಾರೆ.

ಕಿಂಗ್‌ಫಿಷರ್‌, ಗಿಳಿ, ಗೊರವಂಕ, ಹಾಲಕ್ಕಿ ಪಕ್ಷಿಗಳಿಗೆ ಒಣಗಿದ ತೆಂಗಿನ ಮರವೆಂದರೆ ಅದೆಲಿಲ್ಲದ ಪ್ರೀತಿ. ಒಣಗಿದ ಮರದಲ್ಲಿ ಮರಕುಟಕ ತನ್ನ ಕೊಕ್ಕಿನಿಂದ ಗೂಡು ಮಾಡುತ್ತದೆ. ಆದರೆ, ತಾನು ಮಾತ್ರ ಆ ಗೂಡಿನಲ್ಲಿ ವಾಸ ಮಾಡದೇ ಹಾರಿ ಹೋಗುತ್ತದೆ. ಈ ಗೂಡಿನಲ್ಲಿ ಆಶ್ರಯ ಪಡೆಯುವುದು ಗಿಳಿ, ಗೊರವಂಕ, ಕಿಂಗ್‌ಫಿಷರ್ ಮತ್ತಿತರ ಪಕ್ಷಿಗಳು.

ADVERTISEMENT

ತೆಂಗಿನ ತೋಟದಲ್ಲಿ ಹತ್ತಾರು ಹಚ್ಚಹಸಿರಿನ ಮರಗಳು ಇದ್ದರೂ ಆಶ್ರಯಕ್ಕೆ ಬಯಸುವುದು ಮಾತ್ರ ಒಣಗಿದ ತೆಂಗಿನ ಮರವನ್ನೇ. ಪುಟ್ಟ ಗೂಡಿನಲ್ಲಿ ಕುಳಿತುಕೊಳ್ಳಲು ನಾ ಮೊದಲು, ತಾ ಮೊದಲು ಎಂದು ಗಿಳಿಗಳಿಗಳು ಕಿತ್ತಾಡುವುದನ್ನು ನೋಡುವುದೇ ಕಣ್ಣಿಗೆ ಹಬ್ಬ ಎನ್ನುತ್ತಾರೆ ಛಾಯಾಗ್ರಾಹಕ ಹರೀಶ್‌ ಧ್ರುವ.

ತೆಂಗಿನ ಮರದ ಗೂಡಿನಲ್ಲಿ ಮೊಟ್ಟೆ ಇಟ್ಟು ಮರಿಗಳನ್ನು ಮಾಡಿಕೊಂಡು ಹೋಗುವವರೆಗೂ ಗಿಳಿ, ಗೊರವಂಕಗಳಿಗೆ ಆತಂಕ ತಪ್ಪಿದ್ದಲ್ಲ. ಕಾರಣ ಗಿಳಿ, ಗೊರವಂಕ ಸೇರಿದಂತೆ ಪಕ್ಷಿಗಳ ಗೂಡಿಗೆ ಹಾವು ಲಗ್ಗೆ ಇಟ್ಟು ಮೊಟ್ಟೆಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುವುದು ಜೈವಿಕ ನಿಯಮ. ಅದರಲ್ಲೂ ತೆಂಗಿನ ಮರಗಳಿಗೆ ಹಾವುಗಳು ಸುಲಭವಾಗಿ ಹತ್ತುತ್ತವೆ. ಕಾರಣ ಇತರೆ ಮರಗಳಿಗಿಂತಲೂ ತೆಂಗಿನ ಮರಕ್ಕೆ ಹಾವು ಹತ್ತಲು ಒರಟಾಗಿರುವುದರಿಂದ ಸುಲಭವಾಗಿ ಹತ್ತಿ ಹೋಗಿ ಪಕ್ಷಿಗಳ ಗೂಡಿಗೆ ಲಗ್ಗೆ ಇಡುತ್ತವೆ. ಆಕಸ್ಮಾತ್‌ ಏನಾದರು ತಮ್ಮ ಗೂಡುಗಳಿಗೆ ಹಾವು ಲಗ್ಗೆ ಇಡುತ್ತಿರುವುದನ್ನು ಗೊರವಂಕ, ಗಿಳಿಗಳು ಕಂಡರಂತೂ ರಂಪಾಟ ಮಾಡಿ, ಕಾಲು –ಕೊಕ್ಕುಗಳಿಂದ ಕುಕ್ಕಿ ಕೆಳಗಿಳಿಯುವ ತನಕವು ಬಿಡುವುದೇ ಇಲ್ಲ. ಸಾಕಷ್ಟು ಬಾರಿ ಈ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುವ ಪ್ರಯತ್ನ ನಡೆಸಿದ್ದೇನೆ’ ಎನ್ನುತ್ತಾರೆ ಹರೀಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.