ADVERTISEMENT

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಗಮನ ಸೆಳೆದ ವಾಣಿಜ್ಯ ಮೇಳ

‘ವ್ಯಾಪಾರಕ್ಕೆ ಸಂಹವನ ಕಲೆ ಅತಿಮುಖ್ಯ’

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2018, 14:00 IST
Last Updated 14 ಅಕ್ಟೋಬರ್ 2018, 14:00 IST
ವಾಣಿಜ್ಯ ವಹಿವಾಟುವಿನಲ್ಲಿ ಊಟ ಮಾಡುತ್ತಿರುವ ಗ್ರಾಹಕರು
ವಾಣಿಜ್ಯ ವಹಿವಾಟುವಿನಲ್ಲಿ ಊಟ ಮಾಡುತ್ತಿರುವ ಗ್ರಾಹಕರು   

ದೇವನಹಳ್ಳಿ: ಒಂದೆಡೆಎಳನೀರು, ಚುರುಮುರಿ. ಮತ್ತೊಂದೆಡೆ ಇಡ್ಲಿ, ದೋಸೆ ಚಪ್ಪರಿಸುತ್ತಿರುವ ಗ್ರಾಹಕರು. ಹಾಗೆಯೇ ಅವರೇಕಾಳು ಸಾರು, ರಾಗಿ ಮುದ್ದೆ ಸವಿಯುತ್ತಿರುವ ಜನರು. ಇದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಕಂಡು ಬಂದ ದೃಶ್ಯಗಳು.

2018ನೇ ಶೈಕ್ಷಣಿಕ ಸಾಲಿನ ಅಂತಿಮ ವರ್ಷದ ಬಿ.ಕಾಂ ಮತ್ತು ಬಿ.ಬಿ.ಎ ತರಗತಿಯ 180 ವಿದ್ಯಾರ್ಥಿಗಳು ‘ವಾಣಿಜ್ಯ ವಹಿವಾಟು ಮೇಳ’ವನ್ನುಆಯೋಜಿಸಿದ್ದರು.

ಕಡಿಮೆ ಬಂಡವಾಳದಲ್ಲಿ ಲಾಭ ಗಳಿಸುವುದು ಹೇಗೆ ಹಾಗೂ ಪದವಿಯ ನಂತರ ಸ್ವಯಂ ಉದ್ಯೋಗದ ಆಕಾಂಕ್ಷಿಗಳಾಗಿದ್ದರೆ ಅವರಿಗೆ ಈ ಮೇಳ ಪ್ರಾಯೋಗಿಕ ಪಾಠವಾಗುವ ಉದ್ದೇಶದೊಂದಿಗೆ ಈ ಮೇಳವನ್ನು ಆಯೋಜಿಸಲಾಗಿತ್ತು.

ADVERTISEMENT

ಸಲಾಡ್‌ ಮತ್ತು ಚುರುಮುರಿ ಮಾರಾಟ ಮಳಿಗೆ ಹಾಕಿದ್ದ ಅನಿಲ್‌ ಮತ್ತು ವಿಜಯ್‌ಕುಮಾರ್‌ ಪ್ರತಿಕ್ರಿಯಿಸಿ, ‘ಇಂದು ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಸರ್ಕಾರ ಮತ್ತು ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಸಿಗುತ್ತಿದೆ ಎಂಬ ಭರವಸೆ ಉಳಿದಿಲ್ಲ. ಹೆಚ್ಚಿಗೆ ಬಂಡವಾಳ ಹಾಕುವ ಆರ್ಥಿಕ ಪರಿಸ್ಥಿತಿ ನಮ್ಮಲ್ಲಿ ಇಲ್ಲ. ಇಂದಿನ ಗ್ರಾಹಕರು ಬಯಸುವುದು ವಸ್ತುವಿನ ಗುಣಮಟ್ಟ ಮತ್ತು ಕಡಿಮೆ ಬೆಲೆ. ಇದನ್ನು ಪೂರೈಸಿದರೆ ಮತ್ತೊಮ್ಮೆ ಹುಡುಕಿಕೊಂಡು ಬರುತ್ತಾರೆ. ಈ ಮಳಿಗೆಗೆ ₹3 ಸಾವಿರ ಬಂಡವಾಳ ಹಾಕಿದ್ದೇವೆ. ಕನಿಷ್ಠ ಒಂದು ಸಾವಿರ ಲಾಭದ ನಿರೀಕ್ಷೆ ಇದೆ’ ಎಂದು ಹೇಳಿದರು.

ವಿವಿಧ ಅಲಂಕಾರಿಕ ಸಸ್ಯ ಮಳಿಗೆ ಹಾಕಿದ್ದ ವಿದ್ಯಾರ್ಥಿ ಗೋಪಿ ಮಾತನಾಡಿ, ‘ಇಂದಿನ ಜನ ಸಮುದಾಯ ಅಲಂಕಾರಿಕ ವಸ್ತುಗಳಿಗೆ ಮಾರು ಹೋಗುತ್ತಿದ್ದಾರೆ. ಬಣ್ಣದ ವಿನ್ಯಾಸ ಇರುವ ವಸ್ತುಗಳು, ಸಸ್ಯಗಳನ್ನು ಫ್ಯಾಷನ್‌ಗಾಗಿ ಖರೀದಿಸುತ್ತಾರೆ. ಗ್ರಾಹಕರನ್ನು ಆಕರ್ಷಿಸುವುದರ ಜತೆಗೆ ಅವರಲ್ಲಿ ನಂಬಿಕೆ ಹುಟ್ಟಿಸಿ ವ್ಯಾಪಾರ ನಡೆಸಬೇಕು. ಸಂಹವನ ಕಲೆಯು ಅತಿಮುಖ್ಯ’ ಎಂದು ಹೇಳಿದರು.

ವಾಣಿಜ್ಯ ವಹಿವಾಟು ಸಲಹೆಗಾರ್ತಿ ಹಾಗೂ ಉಪನ್ಯಾಸಕಿ ಡಾ.ಅರ್ಚನಾ ಮಾತನಾಡಿ, ಉದ್ಯಮಶೀಲರಾಗಿ ಬೆಳೆಯಲು ಇದೊಂದು ಪ್ರಾಯೋಗಿಕ ಕಾರ್ಯಕ್ರಮ. ಸ್ಥಳೀಯ ಭಾಷೆಯ ಜತೆಗೆ ಆಂಗ್ಲ ಭಾಷೆ ಅತಿ ಮುಖ್ಯ. ಇಲ್ಲಿ ಸಂವಹನ ಕಲೆಯೂ ಮುಖ್ಯ ‍ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಪ್ರಾಂಶುಪಾಲ ಡಾ.ಶಿವಶಂಕರಪ್ಪ ಮಾತನಾಡಿ, ಇಲ್ಲಿ ಒಟ್ಟು 11 ವಾಣಿಜ್ಯ ವಹಿವಾಟು ಮಳಿಗೆಗಳಿವೆ. ವಿದ್ಯಾರ್ಥಿಗಳೇ ತೆಂಗಿನ ಗರಿ ಕುಟೀರ ನಿರ್ಮಾಣ ಮಾಡಿ ವಹಿವಾಟು ನಡೆಸುತ್ತಿದ್ದಾರೆ. ಬೇರೆ ತರಗತಿಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಅನೇಕ ವಸ್ತುಗಳನ್ನು ಖರೀದಿಸಲು ಮತ್ತು ನೋಡಲು ಬರುತ್ತಿದ್ದಾರೆ. ನೂತನ ಚಿಂತನೆ ಹಾಗೂ ಬದಲಾವಣೆಗೆ ಇದು ಪ್ರೇರಣೆಯಾಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.