ಹೊಸಕೋಟೆ: ದೇಶದಲ್ಲಿ ಅಲೆಮಾರಿ ಜನಾಂಗ ಸೇರಿದಂತೆ ರಾಜಕೀಯ ಮತ್ತು ಸಾಮಾಜಿಕವಾಗಿ ಅಷ್ಟೇನೂ ಬಲಾಢ್ಯರಲ್ಲದ ಸಣ್ಣಪುಟ್ಟ ಸಮುದಾಯ, ಜನಾಂಗಗಳನ್ನು ಗುರುತಿಸುವ ಕೆಲಸ ಆಗಬೇಕಿದೆ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಅಭಿಪ್ರಾಯಪಟ್ಟರು.
ರಾಜ್ಯ ದೇವಗಾಣಿಗ ಮತ್ತು ಒಂಟೆತ್ತು ಗಾಣಿಗರ ಕ್ಷೇಮಾಭಿವೃದ್ಧಿ ಸಂಘ ಇಲ್ಲಿಯ ಸೈಯದ್ ಪ್ಯಾಲೇಸ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಎರಡನೇಯ ಸಮಾವೇಶ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಧಾರ್, ಕರೆಂಟ್ ಬಿಲ್, ಮನೆ ಕಂದಾಯ ರಸೀದಿ ಮುಂತಾದ ದಾಖಲೆಗಳನ್ನು ಆಧಾರವಾಗಿ ಇಟ್ಟುಕೊಂಡು ಜಾತಿಗಣತಿ, ಸಮೀಕ್ಷೆ ಮಾಡಿದರೆ ಈ ಯಾವ ದಾಖಲೆಗಳೂ ಇಲ್ಲದ ಸಣ್ಣ ಸಮುದಾಯಗಳ ಗತಿ ಏನು ಎಂದು ಅವರು ಪ್ರಶ್ನಿಸಿದರು.
ಸಮಾಜದಲ್ಲಿ ಬಲವಾದ ಧ್ವನಿ ಮತ್ತು ಗಟ್ಟಿಯಾದ ಅಸ್ತಿತ್ವ ಇಲ್ಲದ ಚಿಕ್ಕ ಸಮುದಾಯಗಳ ಭವಿಷ್ಯದ ಬಗ್ಗೆ ಸರ್ಕಾರ ಗಂಭೀರವಾಗಿ ಯೋಚಿಸಬೇಕು ಎಂದರು.
ಸಣ್ಣ ಸಮುದಾಯಗಳ ಅಸ್ತಿತ್ವ ರಕ್ಷಣೆ ಅಗತ್ಯ
ಶಿಕ್ಷಣ ಮತ್ತು ಸಂಘಟನೆಯಿಂದ ಮಾತ್ರ ಸಮುದಾಯದ ಏಳಿಗೆ ಸಾಧ್ಯ. ಸಣ್ಣಪುಟ್ಟ ಸಮುದಾಯದವರು ಕೇವಲ ಕುಲ ಕಸುಬಿಗೆ ಜೋತು ಬೀಳದೆ, ಕಾಲಕ್ಕೆ ತಕ್ಕಂತೆ ಜೀವನಶೈಲಿ ಮಾರ್ಪಾಡು ಮಾಡಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಸಲಹೆ ಮಾಡಿದರು.
ಉಪ ಪಂಗಡಗಳನ್ನು ಮರೆತು ಸಮುದಾಯಗಳು ಒಂದಾಗಿ ಅಭಿವೃದ್ಧಿ ಹೊಂದಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ಕಿವಿಮಾತು ಹೇಳಿದರು. ಹೊಸಕೋಟೆಯಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆಗೂ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ದೇವಗಾಣಿಗ-ಒಂಟೆತ್ತು ಗಾಣಿಗ ಸಮುದಾಯದ ರುದ್ರಭೂಮಿ ರಕ್ಷಣೆಗಾಗಿ ₹40 ಲಕ್ಷ ಅನುದಾನದಲ್ಲಿ ಕಾಮಗಾರಿ ನಡೆಯುತ್ತಿವೆ. ಸಮುದಾಯದ ಮುಖಂಡರೊಂದಿಗೆ ಚರ್ಚಿಸಿ ಚಿಂತಾಮಣಿ ಇಲ್ಲವೇ ಕೋಲಾರ್ ರಸ್ತೆಯಲ್ಲಿ ಸಮುದಾಯ ಭಾವನಕ್ಕೆ ಬೇಕಾದ ಜಾಗ ಕೊಡಿಸುವ ಭರವಸೆ ನೀಡಿದರು.
ಜಾತಿಗೆ ಬದಲಾಗಿ ಶಿಕ್ಷಣಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಬೇಕು. ಆಂಧ್ರ ಪ್ರದೇಶದಲ್ಲಿ ಜಾರಿಯಲ್ಲಿರುವ ಪಿ–ಪರ್ (ಬಡ ಮಕ್ಕಳನ್ನು ದತ್ತು ತೆಗೆದುಕೊಂಡು ಶಿಕ್ಷಣ ನೀಡುವುದು) ಯೋಜನೆಯ ಮಾದರಿಯನ್ನು ಕರ್ನಾಟಕದಲ್ಲೂ ಜಾರಿಗೆ ತರಬೇಕು ಎಂದು ಆಂಧ್ರ ಪ್ರದೇಶದ ಮಾಜಿ ಶಾಸಕ ಗೌನಿವಾಳು ಶ್ರೀನಿವಾಸಲು ಸಲಹೆ ಮಾಡಿದರು.
ಪ್ರತಿ ವರ್ಷ ಸಮುದಾಯದ ಒಬ್ಬ ಬಡ ಪ್ರತಿಭಾವಂತ ವಿದ್ಯಾರ್ಥಿಗೆ ಸಂಘದಿಂದ ಉಚಿತ ಶಿಕ್ಷಣ ಕೊಡಿಸುವುದಾಗಿ ಬೆಂಗಳೂರಿನ ಪೀಪಲ್ ಟ್ರೀ ಹಾಸ್ಪಿಟಲ್ ವೈದ್ಯ ನೀರಜ್ ಚೌಧರಿ ಘೋಷಿಸಿದರು.
ಆಂಧ್ರ ಪ್ರದೇಶ, ತೆಲಂಗಾಣ,ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧ ಭಾಗಗಳ ದೇವಗಾಣಿಗಾರ -ಒಂಟೆತ್ತು ಗಾಣಿಗ ಸಮುದಾಯದವರು ಭಾಗವಹಿಸಿದ್ದರು.
ಗಾಯಿತ್ರಿ, ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಎನ್. ಕೃಷ್ಣಮೂರ್ತಿ, ಅಖಿಲ ಕರ್ನಾಟಕ ಗಾಣಿಗರ ಸಂಘದ ಅಧ್ಯಕ್ಷ ಎಂ.ಆರ್.ರಾಜಶೇಖರ,ಚಿಂತಾಮಣಿ ಬಿಜೆಪಿ ಮುಖಂಡ ಜಿ.ಎನ್.ವೇಣುಗೋಪಾಲ, ಕರ್ನಾಟಕ ರಾಜ್ಯ ದೇವಗಾಣಿಗ-ಒಂಟೆತ್ತು ಗಾಣಿಗರ ಕ್ಷೇಮಭಿವೃದ್ಧಿ ಸಂಘದ ಗೌರವಧ್ಯಕ್ಷ ಕೆ.ಎನ್.ರಾಮಚಂದ್ರಪ್ಪ, ರಾಜ್ಯಾಧ್ಯಕ್ಷ ಕೆ.ಬಿ.ರಮೇಶ್, ಪ್ರಧಾನ ಕಾರ್ಯದರ್ಶಿ ಕೆ.ಬಿ. ಸದಾಶಿವಪ್ಪ,ಖಜಾಂಚಿ ಕೆ.ಎಂ.ನಾರಾಯಣಪ್ಪ ಭಾಗವಹಿಸಿದ್ದರು.
ಸಮುದಾಯದ ವಿದ್ಯಾರ್ಥಿಗಳಿಗೆ ವಸತಿ ನಿಲಯ
ರಾಜ್ಯದಲ್ಲಿ ಗಾಣಿಗ ಸಮುದಾಯದಲ್ಲಿ ದೇವಗಾಣಿಗ-ಒಂಟೆತ್ತು ಗಾಣಿಗರ 3.50 ಲಕ್ಷ ಜನರಿದ್ದಾರೆ. ಸಾವಿರಾರು ವರ್ಷಗಳಿಂದ ಗಾಣಿಗ ವೃತಿಯಲ್ಲಿ ತೊಡಗಿದ್ದಾರೆ. ಜಾಗತಿಕರಣದ ಸಂದರ್ಭದಲ್ಲಿ ದೊಡ್ಡ ಕಂಪನಿಗಳ ಸ್ಪರ್ಧೆ ಎದುರಿಸಲಾಗದೆ ದೇಶಿ ಗಾಣಿಗ ಕುಟುಂಬಗಳು ಸೋತಿವೆ. ಸಮುದಾಯ ಸಮಾಜದ ಮುನ್ನೆಲೆಗೆ ತರಲು ಸಮುದಾಯಕ್ಕೆ ಶಿಕ್ಷಣ ಸಂಸ್ಥೆ ಸಮುದಾಯ ಭವನ ಸಮುದಾಯದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಸತಿ ನಿಲಯ ಸ್ಥಾಪಿಸಬೇಕು. ಅದಕ್ಕಾಗಿ ಸರ್ಕಾರ ಜಾಗ ಮಂಜೂರು ಮಾಡಿಕೊಡಬೇಕು ಎಂದು ಸಮುದಾಯದ ಗಾಯಿತ್ರಿ ಅವರು ಮನವಿ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.