ADVERTISEMENT

ಇಂಧನ ಬೆಲೆ ಏರಿಕೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 4:37 IST
Last Updated 18 ಜೂನ್ 2021, 4:37 IST

ದೇವನಹಳ್ಳಿ: ‘ಪ್ರತಿದಿನವೂ ಇಂಧನದ ಬೆಲೆ ಏರಿಕೆಯಾಗುತ್ತಲೇ ಇದೆ. ಕೇಂದ್ರ ಸರ್ಕಾರ ಪೆಟ್ರೋಲ್‌ ಮತ್ತು ಡೀಸೆಲ್‌ಗೆ ಹೆಚ್ಚಿನ ತೆರಿಗೆ ವಸೂಲಿ ಮಾಡುತ್ತಿರುವುದೇ ಇದಕ್ಕೆ ಕಾರಣ’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ. ಪ್ರಸನ್ನಕುಮಾರ್ ದೂರಿದರು.

ತಾಲ್ಲೂಕಿನ ಚಪ್ಪರಕಲ್ಲು ಸರ್ಕಲ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಯಾವುದೇ ಜನಪರ, ಸಮಾಜಮುಖಿ ಕಾರ್ಯಕ್ರಮಗಳನ್ನು ಜಾರಿಗೆ ತಂದಿಲ್ಲ. ಪೆಟ್ರೋಲ್‌ ಬೆಲೆಯನ್ನು ₹ 100ಕ್ಕೆ ಏರಿಕೆ ಮಾಡುವ ಮೂಲಕ ಸೆಂಚುರಿ ಬಾರಿಸಿದ್ದಾರೆ. ನಾಟೌಟ್‌ ಆಗಿ ಸೆಂಚುರಿ ಹೊರೆಯನ್ನು ಜನರ ಮೇಲೆ ಹಾಕಿದ್ದಾರೆ. ಇಂಧನದ ಮೇಲೆ ಕೇಂದ್ರ ಸರ್ಕಾರ ₹ 32 ಮತ್ತು ರಾಜ್ಯ ಸರ್ಕಾರ ₹ 26 ತೆರಿಗೆ ವಿಧಿಸಿರುವುದರಿಂದಲೇ ಬೆಲೆ ಹೆಚ್ಚಾಗಿದೆ ಎಂದು ಆರೋಪಿಸಿದರು.

ADVERTISEMENT

ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗ ಲೀಟರ್‌ಗೆ ₹ 60ರಿಂದ ₹ 65ಗೆ ಡೀಸೆಲ್ ಮತ್ತು ಪೆಟ್ರೋಲ್ ಸಿಗುತ್ತಿತ್ತು. ಆಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಒಂದು ಬ್ಯಾರೆಲ್‍ಗೆ 140 ಡಾಲರ್ ಇತ್ತು. ಪ್ರಸ್ತುತ 40ರಿಂದ 50 ಡಾಲರ್ ಇದ್ದರೂ ಇಂಧನ ಬೆಲೆ ಹೆಚ್ಚಳವಾಗಿರುವುದು ದುರಂತ ಎಂದರು.

ಮುಖಂಡ ಕೃಷ್ಣಾರೆಡ್ಡಿ ಮಾತನಾಡಿ, ಕೋವಿಡ್ ನಿಯಂತ್ರಿಸುವ ನೆಪ ಹೇಳಿಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರ ಆಡಳಿತ ನಡೆಸುತ್ತಿವೆ. ಯಾವುದೇ ಅಭಿವೃದ್ಧಿ ಕಾರ್ಯ ಮಾಡುತ್ತಿಲ್ಲ ಎಂದು ಟೀಕಿಸಿದರು.

ಜಿಲ್ಲಾ ಸಹಕಾರ ಮಾರಾಟ ಒಕ್ಕೂಟದ ಅಧ್ಯಕ್ಷ ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.