ADVERTISEMENT

ಜಮೀನು ವಿವಾದ: ಕುಟುಂಬಗಳ ನಡುವೆ ಘರ್ಷಣೆ, ಇಬ್ಬರಿಗೆ ಗಾಯ

ದೂರು– ಪ್ರತಿದೂರು ದಾಖಲು

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 5:41 IST
Last Updated 28 ನವೆಂಬರ್ 2021, 5:41 IST
ದೇವನಹಳ್ಳಿ ತಾಲ್ಲೂಕಿನ ಬೈಚಾಪುರ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆ
ದೇವನಹಳ್ಳಿ ತಾಲ್ಲೂಕಿನ ಬೈಚಾಪುರ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆ   

ದೇವನಹಳ್ಳಿ: ಜಮೀನಿಗೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ನಡೆದ ಗಲಾಟೆಯಲ್ಲಿ ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ತಾಲ್ಲೂಕಿನ ಬೈಚಾಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ಹಾಗೂ ‍ಪ್ರತಿದೂರು ದಾಖಲಾಗಿದೆ.

ಘರ್ಷಣೆಯಲ್ಲಿ ಗಾಯಗೊಂಡಿರುವ ಮುನಿಕೃಷ್ಣಪ್ಪ ಮತ್ತು ಶಶಿಧರ್ ಎಂಬುವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌

ತಾಲ್ಲೂಕಿನ ಅಣ್ಣೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈಚಾಪುರ ಗ್ರಾಮದ ಸ.ನಂ. 17ರ 3 ಎಕರೆ 34 ಗುಂಟೆ ಪೈಕಿ 1 ಎಕರೆ 15 ಗುಂಟೆ ವಿಸ್ತೀರ್ಣದ ಜಮೀನು ಲಕ್ಷ್ಮಮ್ಮ ಎಂಬುವರ ಹೆಸರಿಗೆ ಖಾತೆಯಾಗಿದೆ. ಈ ಜಮೀನಿನ ಸಂಬಂಧ ಘರ್ಷಣೆ ನಡೆದಿದೆ.

ADVERTISEMENT

‘ಜಮೀನಿನಲ್ಲಿ ಜೋಳ ಬೆಳೆದಿದ್ದೇವೆ. ಮಳೆಯಿಂದ ಬೆಳೆ ಹಾಳಾಗಿದ್ದು, ದನ, ಕರುಗಳಿಗೆ ಕಟಾವು ಮಾಡಿಕೊಂಡು ಹೋಗುವಂತೆ ರೈತರಿಗೆ ಉಚಿತವಾಗಿ ಕೊಟ್ಟಿದ್ದೇವೆ. ಶುಕ್ರವಾರ ದನ, ಕರುಗಳಿಗೆ ಜೋಳ ಕಟಾವು ಮಾಡುವಾಗ ಮುನಿಕೃಷ್ಣಪ್ಪ ಹಾಗೂ ಅವರ ಸಹಚರರು ಏಕಾಏಕಿ ದೊಣ್ಣೆಗಳನ್ನು ಹಿಡಿದು ಕಟಾವು ಮಾಡುತ್ತಿದ್ದವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಲು ಮುಂದಾಗಿದ್ದರು. ಅವರನ್ನು ತಡೆಯಲು ಹೋದಾಗ ನಮ್ಮ ಕುಟುಂಬದವರ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ಶಶಿಧರ್ ಎಂಬುವರು ಪೊಲೀಸರಿಗೆ ದೂರು ನೀಡಿದ್ದಾರೆ.

ಗ್ರಾಮದ ಮತ್ತೊಂದು ಗುಂಪಿನ ಬಿ.ಎಂ. ಮುನಿಕೃಷ್ಣಪ್ಪ ಎಂಬುವರು ಕೂಡ ಪ್ರತಿದೂರು ನೀಡಿದ್ದಾರೆ.

ಬೈಚಾಪುರದ ಸ.ನಂ. 17ರಲ್ಲಿ 4 ಎಕರೆ ಪೈಕಿ 0.39 ಗುಂಟೆ ಜಮೀನು ನಮ್ಮ ಹೆಸರಿಗೆ ದಾಖಲಾತಿಯಾಗಿದೆ. ಈ ವಿಚಾರವಾಗಿ ಶುಕ್ರವಾರ ಗಲಾಟೆಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ನಾನು ಮನೆಗೆ ಹೋಗುವಾಗ ದಾರಿಗೆ ಕಲ್ಲು ಹಾಕಿ ಅಡ್ಡಗಟ್ಟಿ ನನ್ನ ಹಾಗೂ ನಮ್ಮ ಕುಟುಂಬದವರ ಮೇಲೆ ಮಾರಣಾಂತಿಕ ಹಲ್ಲೆ
ನಡೆಸಿದ್ದಾರೆ. ಕೊಲೆ ಬೆದರಿಕೆಹಾಕಿದ್ದಾರೆ. ನಮ್ಮ ಜಮೀನಿನಲ್ಲಿ ಜೋಳದ ಕಡ್ಡಿಗಳು ಕಟಾವು ಮಾಡಲು 200ಕ್ಕೂ ಹೆಚ್ಚು ಮಂದಿಯನ್ನು ಕರೆಯಿಸಿ ನನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ’ ಎಂದು ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.