ADVERTISEMENT

ಶಾಸಕ ಶರತ್‌ ಬಚ್ಚೇಗೌಡ ವಿರುದ್ಧ ಕಾಂಗ್ರೆಸ್‌ ಮುಖಂಡರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2023, 5:25 IST
Last Updated 10 ಫೆಬ್ರುವರಿ 2023, 5:25 IST
ಹೊಸಕೋಟೆಯ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬ್ಲಾಕ್‌ ಕಾಂಗ್ರೆಸ್‌ನ ಉಚ್ಚಾಟಿತ ಅಧ್ಯಕ್ಷ ಎನ್‌.ಟಿ. ಹೇಮಂತ್‌ ಕುಮಾರ್‌ ಮಾತನಾಡಿದರು
ಹೊಸಕೋಟೆಯ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬ್ಲಾಕ್‌ ಕಾಂಗ್ರೆಸ್‌ನ ಉಚ್ಚಾಟಿತ ಅಧ್ಯಕ್ಷ ಎನ್‌.ಟಿ. ಹೇಮಂತ್‌ ಕುಮಾರ್‌ ಮಾತನಾಡಿದರು   

ಹೊಸಕೋಟೆ: ಸಾಮೂಹಿಕ ನಾಯಕತ್ವದ ಆಧಾರದಲ್ಲಿ ಕಾಂಗ್ರೆಸ್‌ ಬಲಿಷ್ಠವಾಗಿತ್ತು. ಆದರೆ, ಶಾಸಕ ಶರತ್‌ ಬಚ್ಚೇಗೌಡ ಅವರ ಹಸ್ತಕ್ಷೇಪದಿಂದ ಒಗ್ಗಟ್ಟು ದೂರವಾಗಿದೆ. ಮೂಲ ಕಾಂಗ್ರೆಸ್ಸಿಗರನ್ನು ಪಕ್ಷದಿಂದ ಉಚ್ಚಾಟಿಸಿ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ ಎಂದು ಬ್ಲಾಕ್‌ ಕಾಂಗ್ರೆಸ್‌ನ ಉಚ್ಚಾಟಿತ ಅಧ್ಯಕ್ಷ ಎನ್‌.ಟಿ. ಹೇಮಂತ್‌ ಕುಮಾರ್‌ ಆರೋಪಿಸಿದರು.

ಪಟ್ಟಣದ ಕಾಂಗ್ರೆಸ್‌ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ‘ಪಕ್ಷೇತರ ಅಭ್ಯರ್ಥಿ ಯಾಗಿ ಶಾಸಕರಾದ ಶರತ್‌ಗೆ ಕ್ಷೇತ್ರದಲ್ಲಿ ಎಂ.ಟಿ.ಬಿ. ನಾಗರಾಜ್‌ ವಿರುದ್ಧ ಹಿಡಿತ ಸಾಧಿಸಲು ಸಾಧ್ಯವಾಗಲಿಲ್ಲ. ಹಾಗಾಗಿ, ಕಾಂಗ್ರೆಸ್‌ ಬಾಹ್ಯ ಬೆಂಬಲಕ್ಕಾಗಿ ಪಕ್ಷಕ್ಕೆ ಬಂದಿದ್ದಾರೆ’ ಎಂದು ಟೀಕಿಸಿದರು.

‘ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣಿಸಿದ್ದಾರೆ. ಪಕ್ಷದಲ್ಲಿ ನೀಡಬೇಕಿರುವ ಕನಿಷ್ಠ ಸ್ಥಾನಮಾನ ನೀಡದೆ ಹತ್ತಾರು ವರ್ಷದಿಂದ ಕಾಂಗ್ರೆಸ್‌ ಕಟ್ಟಾಳುಗಳಿಗೆ ಅಪಮಾನವಾಗುವಂತೆ ನಡೆದುಕೊಳ್ಳುತ್ತಿದ್ದಾರೆ. ಅವರ ಬೆಂಬಲಿಗರು ಪಕ್ಷದ ಶಿಸ್ತು ಮರೆತು ವ್ಯಕ್ತಿ ಪೂಜೆಯಲ್ಲಿ ತೊಡಗಿದ್ದಾರೆ. ಮೂಲ ಕಾಂಗ್ರೆಸ್ಸಿಗರನ್ನು ಮಣಿಸಲು ರಾಜಕೀಯ ಷಡ್ಯಂತ್ರ ರೂಪಿಸಿದ್ದಾರೆ’ ಎಂದು ದೂರಿದರು.

ADVERTISEMENT

ಪಕ್ಷದಲ್ಲಿನ ಭಿನ್ನಮತ ಕುರಿತು ಸಿದ್ದರಾಮಯ್ಯ, ವೀರಪ್ಪ ಮೊಯಿಲಿ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ನೆಲಮಂಗಲದ ಸಿ.ಎಸ್‌. ಗೌಡ ಅವರು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಪಕ್ಷಕ್ಕಾಗಿ ದುಡಿದವರನ್ನು ಉಚ್ಚಾಟಿಸಿದ್ದಾರೆ ಎಂದರು.

‘ಮೂಲ ಕಾಂಗ್ರೆಸ್ಸಿಗರನ್ನು ರಾಜಕೀಯವಾಗಿ ಕಡೆಗಣಿಸಲು ಮಾಡಲಾದ ಯತ್ನಗಳಿಂದ ಬೇಸತ್ತು ಫೆ. 13ರಂದು ಸಚಿವ ಎಂ.ಟಿ.ಬಿ. ನಾಗರಾಜ್‌ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದೇನೆ. ಪಕ್ಷಕ್ಕಿಂತ ಕ್ಷೇತ್ರದ ಜನರ ಅಭ್ಯುದಯವೇ ಮೂಲ ಕಾಂಗ್ರೆಸ್ಸಿಗರಿಗೆ ಮುಖ್ಯವಾಗಿದೆ’ ಎಂದು ತಿಳಿಸಿದರು.

ಮುಖಂಡ ವೆಂಕಟೇಶ್‌ ಮಾತನಾಡಿ, ‘ವ್ಯವಸ್ಥಿತವಾಗಿ ಕಾಂಗ್ರೆಸ್‌ ಪಕ್ಷವನ್ನು ಮೂಲೆಗುಂಪು ಮಾಡಲು ಶರತ್‌ ಬಚ್ಚೇಗೌಡ ತಂತ್ರ ರೂಪಿಸಿದ್ದಾರೆ. ಸರ್ವಾಧಿಕಾರಿ ಮನಸ್ಥಿತಿಯಿಂದ ಪಕ್ಷದ ಸದಸ್ಯತ್ವವನ್ನೇ ಪಡೆಯದವರಿಗೆ ಪ್ರಮುಖ ಸ್ಥಾನಮಾನ ದೊರೆಯುವಂತೆ ಮಾಡಿದ್ದಾರೆ. ಅವರ ವಿರುದ್ಧ ಪಕ್ಷದ ವೇದಿಕೆಯಲ್ಲಿ ಮಾತನಾಡಿದವರ ರಾಜಕೀಯ ಜೀವವವನ್ನು ಅಂತ್ಯಗೊಳಿಸುವ ಸಾಧ್ಯತೆಯಿದೆ. ಹಾಗಾಗಿ, ಪಕ್ಷ ಬಿಡುವ ನಿರ್ಧಾರ ಮಾಡಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

ಮುಖಂಡರಾದ ವೆಂಕಟೇಶ್, ಜಿ.ಕೆ.ಬಿ. ಕಾಂತರಾಜ್, ಗೋಪಿ, ಇಟ್ಟಸಂದ್ರ ಗಣೇಶ್‌ ಗೌಡ, ವಾಗಟ ರವಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.