ADVERTISEMENT

ಗ್ರಾಮಮಟ್ಟದಿಂದ ಪಕ್ಷ ಬಲಪಡಿಸಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 12:17 IST
Last Updated 28 ನವೆಂಬರ್ 2019, 12:17 IST
ಚನ್ನರಾಯಪಟ್ಟಣ ಹೋಬಳಿ ದಿನ್ನೂರಿನಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ನಾಯಕ ಮುನಿನರಸಿಂಹಯ್ಯ ಮಾತನಾಡಿದರು
ಚನ್ನರಾಯಪಟ್ಟಣ ಹೋಬಳಿ ದಿನ್ನೂರಿನಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ನಾಯಕ ಮುನಿನರಸಿಂಹಯ್ಯ ಮಾತನಾಡಿದರು   

ವಿಜಯಪುರ: ಪಕ್ಷದಿಂದ ನಾವು, ನಮ್ಮಿಂದ ಪಕ್ಷ ಅಲ್ಲ. ಕಾಂಗ್ರೆಸ್ ಪಕ್ಷ ಕುಟುಂಬವಿದ್ದಂತೆ, ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಇರುವುದು ಸಹಜ.ಅದನ್ನು ನಾವೆಲ್ಲರೂ ಸೇರಿ ಬಗೆಹರಿಸಿಕೊಂಡು ಪಕ್ಷವನ್ನು ಹಳ್ಳಿ ಮಟ್ಟದಿಂದ ಬಲಪಡಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕ ಮುನಿನರಸಿಂಹಯ್ಯ ಹೇಳಿದರು.

ಚನ್ನರಾಯಪಟ್ಟಣ ಹೋಬಳಿ ದಿನ್ನೂರು ತಾಲ್ಲೂಕು ಪಂಚಾಯಿತಿ ಸದಸ್ಯ ವೆಂಕಟೇಶ್ ಅವರ ಮನೆಯ ಆವರಣದಲ್ಲಿ ಆಯೋಜಿಸಿದ್ದ ವಿಜಯಪುರ ಬ್ಲಾಕ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಕ್ಷೇತ್ರದಲ್ಲಿ ಅನೇಕ ಹೋರಾಟಗಳನ್ನು ಮಾಡಿಕೊಂಡು, ಜನಸಾಮಾನ್ಯ ಕಷ್ಟಸುಖಗಳಲ್ಲಿ ಭಾಗಿಯಾಗಿ ಧ್ವನಿಯಿಲ್ಲದವರ ಧ್ವನಿಯಾಗಿ ಕೆಲಸ ಮಾಡಿಕೊಂಡು ಪ್ರತಿಯೊಬ್ಬ ಕಾರ್ಯಕರ್ತರು ಪಕ್ಷವನ್ನು ಕಟ್ಟಿದ್ದೇವೆ. ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳುವ ಮೂಲಕ ಕಾರ್ಯಕರ್ತರು ಮುನ್ನಡೆಸಿಕೊಂಡು ಹೋಗಬೇಕು. ನನ್ನ ಅವಧಿಯಲ್ಲಿ ಬಡವರಿಗೆ ಮಂಜೂರು ಮಾಡಿಕೊಟ್ಟಿದ್ದ ಭೂಮಿಗಳು ಇಂದು ಕೋಟ್ಯಂತರ ರೂಪಾಯಿ ಪರಿಹಾರ ನೀಡಿ ಸರ್ಕಾರ ಭೂ ಸ್ವಾಧೀನ ಮಾಡಿಕೊಂಡಿದೆ. ನಾವು ಮಾಡಿದ ಕೆಲಸಗಳು ಶಾಶ್ವತವಾಗಿರುತ್ತವೆ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡ ತಪ್ಪಿಗೆ ನಮ್ಮ ಪಕ್ಷದ ಅಭ್ಯರ್ಥಿಯನ್ನು ಕಳೆದುಕೊಂಡಿದ್ದೇವೆ. ಹೊಂದಾಣಿಕೆಯ ಕೊರತೆಯಿಂದ ವಿಧಾನಸಭೆಯಲ್ಲಿ ಸೋತಿದ್ದೇವೆ. ಮುಂಬರುವ ಸ್ಥಳೀಯ ಚುನಾವಣೆಗಳು ಸೇರಿದಂತೆ ಯಾವುದೇ ಚುನಾವಣೆಗಳಲ್ಲಿ ನಮ್ಮ ಪಕ್ಷಕ್ಕೆ ಹಿನ್ನಡೆಯಾಗದಂತೆ ನಾವು ನೋಡಿಕೊಳ್ಳಬೇಕಾಗಿದೆ’ ಎಂದರು.

ADVERTISEMENT

ಜಿಲ್ಲಾ ಪಂಚಾಯಿತಿ ಸದಸ್ಯ ಲಕ್ಷ್ಮೀನಾರಾಯಣಪ್ಪ ಮಾತನಾಡಿ, ‘ತಿಂಗಳಿಗೊಮ್ಮೆ ಕಾರ್ಯಕರ್ತರ ಸಭೆ ಕರೆದು ಕುಂದುಕೊರತೆಗಳನ್ನು ಆಲಿಸಿ, ಪರಿಹರಿಸುವ ಕೆಲಸ ಮಾಡುವ ಮೂಲಕ ಪಕ್ಷವನ್ನು ಗಟ್ಟಿಗೊಳಿಸುವ ಕೆಲಸ ಮಾಡಲಾಗುತ್ತದೆ. ಇಂತಹ ಸಭೆಗಳಲ್ಲಿ ವೈಯಕ್ತಿಕ ವಿಚಾರಗಳನ್ನು ಬಿಟ್ಟು ಪಕ್ಷದ ಏಳಿಗೆಗಾಗಿ ಸಲಹೆಗಳನ್ನು ಕೊಡಿ. ಮುಂಬರುವ ಗ್ರಾಮ ಪಂಚಾಯಿತಿ, ಎ.ಪಿ.ಎಂ.ಸಿ. ಸೇರಿದಂತೆ ಸೊಸೈಟಿಗಳ ಚುನಾವಣೆಗಳಿಗೆ ಸಜ್ಜಾಗಬೇಕು. ಜನರೊಂದಿಗೆ ಉತ್ತಮ ಸಂಪರ್ಕ ಹೊಂದಿರುವವರನ್ನು ಗುರುತಿಸಿ ಅವರಿಗೆ ಅವಕಾಶ ಕಲ್ಪಿಸಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಅನಂತಕುಮಾರಿ ಚಿನ್ನಪ್ಪ ಮಾತನಾಡಿ, ‘ಜನರಿಂದ ನಾವು ಆಯ್ಕೆಯಾಗಿ ಬಂದ ನಂತರ ನಮಗೆ ಸಿಗುವ ಅನುದಾನಗಳಲ್ಲಿ ಪಕ್ಷಬೇಧ ಮರೆತು ಅಭಿವೃದ್ಧಿ ಕಾರ್ಯಗಳು ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲೂ ಮಾಡುತ್ತೇವೆ. ಇದರೊಂದಿಗೆ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಪಕ್ಷವನ್ನು ಭದ್ರಪಡಿಸಿಕೊಳ್ಳಬೇಕಾಗಿದೆ’ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರಪ್ಪ ಮಾತನಾಡಿ, ‘ದೇಶದಲ್ಲಿ ಉತ್ತಮ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷವನ್ನು ಗಟ್ಟಿಗೊಳಿಸಿದರೆ, ಪಕ್ಷ ನಮ್ಮನ್ನು ಗುರುತಿಸುತ್ತದೆ. ಹಿಂದಿನ ಕಹಿ ಘಟನೆಗಳನ್ನು ಮರೆತು ಮುಂದೆ ಇರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುವಂತಹ ಕಾರ್ಯವನ್ನು ಎಲ್ಲರೂ ಮಾಡಬೇಕಾಗಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಲಕ್ಷ್ಮೀನಾರಾಯಣಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಚೈತ್ರಾವೀರೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ಮಂಜುನಾಥ್, ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಮಂಜುಳಮ್ಮ, ಕೆಪಿಸಿಸಿ ಮಹಿಳಾ ಪ್ರಧಾನ ಕಾರ್ಯದರ್ಶಿ ಅಕ್ಕಯಮ್ಮ ಮುನಿಯಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ವೆಂಕಟೇಶ್, ಮುನೇಗೌಡ, ಮಂಜುನಾಥ್, ಮುಖಂಡರಾದ ಲಕ್ಷ್ಮಣಗೌಡ, ಮುದುಗುರ್ಕಿ ನಾರಾಯಣಸ್ವಾಮಿ, ವಿ.ಎಂ.ನಾಗರಾಜ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುನಿರಾಜು, ಶ್ರೀನಿವಾಸಗೌಡ, ಬುಳ್ಳಹಳ್ಳಿ ರಾಜಪ್ಪ, ಹಾರೋಹಳ್ಳಿ ಚಂದ್ರಪ್ಪ, ತಿಮ್ಮಹಳ್ಳಿ ಹರೀಶ್, ಸಜ್ಜದ್, ಮಹಬೂಬ್‌ಪಾಷ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.