ADVERTISEMENT

ಎಲ್ಲ ಸಮಸ್ಯೆಗೂ ಸಂವಿಧಾನದಲ್ಲಿ ಉತ್ತರ: ಎನ್. ಲೋಕನಾಥ್‍

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 4:56 IST
Last Updated 27 ನವೆಂಬರ್ 2025, 4:56 IST
ಹೊಸಕೋಟೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಂವಿಧಾನದ ಪ್ರತಿಜ್ಞಾವಿಧಿ ಬೋಧಿಸಲಾಯಿತು 
ಹೊಸಕೋಟೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಂವಿಧಾನದ ಪ್ರತಿಜ್ಞಾವಿಧಿ ಬೋಧಿಸಲಾಯಿತು    

ಹೊಸಕೋಟೆ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಸಂವಿಧಾನ ಸಮರ್ಪಣಾ ದಿನ ಕಾರ್ಯಕ್ರಮವನ್ನು  ಬುಧವಾರ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೆಂಗಳೂರು ಉತ್ತರ ವಿವಿ ಮೌಲ್ಯಮಾಪನ ಕುಲಸಚಿವ ಎನ್. ಲೋಕನಾಥ್‍, ‘ಭಾರತದ ಸಂವಿಧಾನ ದೇಶದ ಎಲ್ಲ  ಜನರಿಗೆ ಸಮಾನತೆ, ಸ್ವಾಭಿಮಾನದ ಬದುಕು ಕಟ್ಟಿಕೊಡುವ ಮಹತ್ತರ ಉದ್ದೇಶ ಹೊಂದಿದೆ. ಅಂತಹ ಸಂವಿಧಾನವನ್ನು ಓದಿ ಅರ್ಥೈಸಿಕೊಂಡು ಅದರಂತೆ ನಡೆದುಕೊಂಡಲ್ಲಿ ನಮ್ಮ ಬದುಕು ಸುಖ, ಶಾಂತಿ, ನೆಮ್ಮದಿಯಿಂದ ಕೂಡಿರುತ್ತದೆ’ ಎಂದು ಪ್ರತಿಪಾದಿಸಿದರು. 

ದೇಶದ ಪ್ರತಿಯೊಂದು ಸಮಸ್ಯೆಗೂ ನಮ್ಮ ಸಂವಿಧಾನದಲ್ಲಿ ಪರಿಹಾರವಿದೆ. ಅಂತಹ ಸಂವಿಧಾನವನ್ನು ವಿದ್ಯಾರ್ಥಿಗಳು ತಪ್ಪದೇ ಓದಬೇಕು. ಆ ಮೂಲಕ ಸಮಾಜಕ್ಕೆ ನಾವು ಉತ್ತಮವಾದುದ್ದನ್ನು ನೀಡಬೇಕು. ಸಂವಿಧಾನ ಅರ್ಥೈಸಿಕೊಂಡರೆ ನಮಗೆ ಭಯ ಇರುವುದಿಲ್ಲ. ಎಂತಹದ್ದೇ ಸಮಸ್ಯೆಯನ್ನು ನಾವು ಸಮಾಧಾನದಿಂದ ಎದುರಿಸಲು ಸಾಧ್ಯವಾಗುತ್ತದೆ. ತುಳಿತಕ್ಕೊಳಪಟ್ಟ ಮತ್ತು ಅವಕಾಶ ವಂಚಿತರನ್ನು ಮೇಲೆತ್ತುವ ಕೆಲಸವನ್ನು ಸಂವಿಧಾನ ಮಾಡುತ್ತಿದೆ ಎಂದರು. 

ADVERTISEMENT

ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಉಪನ್ಯಾಸಕ ಕರಿಯಣ್ಣ ನಿಷಾಧ ಮಾತನಾಡಿ, ದೇಶದಲ್ಲಿ ಸಂವಿಧಾನ ಓದಿಕೊಂಡವರ ಸಂಖ್ಯೆ ಕೇವಲ ಶೇ 15ರಷ್ಟಿದೆ. ಈ ಶೇ 15ರಷ್ಟು ಮಂದಿ ಸಂವಿಧಾನವನ್ನು ಸಮಾಜದಲ್ಲಿ ಸರಿಯಾದ ರೀತಿಯಲ್ಲಿ ಅನುಷ್ಠಾನಕ್ಕೆ ತರಲು ಬಯಸುವುದಿಲ್ಲ ಎಂಬುದು ವಿಷಾದನೀಯ ಸಂಗತಿ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಈರಣ್ಣ, ಐಕ್ಯೂಎಸಿ ಸಂಚಾಲಕ ಡಾ.ವಿಶ್ವೇಶ್ವರಯ್ಯ, ಡಾ.ಅಮೃತಮ್ಮ, ಡಾ.ಎಸ್. ಸವಿತಾ, ಡಾ.ಗಾಯಿತ್ರಿ, ಡಾ.ಶರಣಬಸಪ್ಪ, ಡಾ.ಗೌಸಿಯಾ ನುಸ್ರತ್, ನಿಸಾರ್, ಡಾ. ಕವಾಲಯ್ಯ, ಶ್ರೀನಿವಾಸಾಚಾರ್, ಶ್ರೀನಿವಾಸಪ್ಪ, ಸೌಭಾಗ್ಯ, ಡಾ.ಲತಾ, ಡಾ.ಎಂ.ವಿ.ದೇವಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ದೇಶದ ಸಂವಿಧಾನ ಶ್ರೇಷ್ಠತೆ ಸಾಬೀತುಪಡಿಸುವ ಅಗತ್ಯವಿಲ್ಲ. ಇತ್ತೀಚೆಗೆ ಸಂವಿಧಾನ ಬದಲಿಸುವ ಮಾತುಗಳು ಕೇಳಿಬರುತ್ತಿರುವುದು ಆತಂಕದ ವಿಚಾರ
ಪ್ರೊ.ರಾಮಲಿಂಗಪ್ಪ ಟಿ.ಬೇಗೂರು ಪ್ರಾಂಶುಪಾಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಸಕೋಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.