
ದೇವನಹಳ್ಳಿ: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ನಾಗರಿಕ ಸೌಲಭ್ಯಗಳಿಗಾಗಿ ಮೀಸಲಿಟ್ಟಿರುವ (ಸಿ.ಎ) ಭೂಮಿಯನ್ನು ಕಾಂಗ್ರೆಸ್ ಭವನಕ್ಕೆ ಭೋಗ್ಯದ ಆಧಾರದಲ್ಲಿ ಮಂಜೂರು ಮಾಡಲು ಪುರಸಭೆ ಮುಂದಾಗಿದೆ.
ಇದು ವಿವಾದಕ್ಕೆ ಕಾರಣವಾಗಿದೆ. ಈ ನಿರ್ಧಾರಕ್ಕೆ ವಿರೋಧ ಪಕ್ಷಗಳಷ್ಟೇ ಅಲ್ಲ ನಾಗರಿಕ ವಲಯದಲ್ಲೂ ಆಕ್ಷೇಪ ವ್ಯಕ್ತಪಡಿಸಿದೆ.
ಪಟ್ಟಣದ ವಾರ್ಡ್ ನಂ.10ರಲ್ಲಿರುವ ಸುಮಾರು ₹17.31 ಕೋಟಿ ಬೆಲೆ ಬಾಳುವ 6,841 ಚ.ಮೀ ವಿಸ್ತೀರ್ಣದ ಸಿ.ಎ ನಿವೇಶನವನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಮಂಜೂರು ಮಾಡಲು ಪುರಸಭೆ ವರದಿ ಸಿದ್ಧಪಡಿಸಿದೆ.
ಸಿ.ಎ ನಿವೇಶನ ಮಂಜೂರಿಗಾಗಿ ದೇವನಹಳ್ಳಿ ಪುರಸಭೆಯು ಜಿಲ್ಲಾಧಿಕಾರಿಗೆ ಕಳಿಸಿದ ವರದಿ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.
ನಗರ ಯೋಜನಾ ನಿಯಮಗಳ ಪ್ರಕಾರ ಸಿ.ಎ ನಿವೇಶನಗಳು ಸಾರ್ವಜನಿಕ ಆಸ್ಪತ್ರೆ, ಶಾಲೆ, ಸಮುದಾಯ ಭವನ, ಉದ್ಯಾನವನಗಳಂತಹ ತಟಸ್ಥ ಹಾಗೂ ಎಲ್ಲರಿಗೂ ಲಭ್ಯವಿರುವ ನಾಗರಿಕ ಸೌಲಭ್ಯಗಳಿಗೆ ಮಾತ್ರ ಮೀಸಲಿರಬೇಕು. ಆದರೆ ಇಲ್ಲಿ ಅದನ್ನು ‘ಕೌಶಲ ಅಭಿವೃದ್ಧಿ’ ಎಂಬ ಹೆಸರಿನಲ್ಲಿ ರಾಜಕೀಯ ಪಕ್ಷದ ಟ್ರಸ್ಟ್‌ಗೆ ನೀಡಲು ಮುಂದಾಗಿರುವುದು ನಿಯಮ ಉಲ್ಲಂಘನೆ ಅಲ್ಲವೇ ಎಂಬ ಸಹಜ ಪ್ರಶ್ನೆ ಎದ್ದಿದೆ.
ಆಕ್ಷೇಪಣೆ ಬಂದಿಲ್ಲ: ಪುರಸಭೆ ಸಾರ್ವಜನಿಕ ಪ್ರಕಟಣೆ ಹೊರಡಿಸಿ ಯಾವುದೇ ಆಕ್ಷೇಪಣೆ ಬಂದಿಲ್ಲ ಎಂದು ಹೇಳುತ್ತಿದೆ.
ಆದರೆ, ಈ ಪ್ರಕಟಣೆ ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಪ್ರಕಟವಾಗದೇ ಪ್ರಚಲಿತದಲ್ಲಿ ಇಲ್ಲದ ಸ್ಥಳೀಯ ಪತ್ರಿಕೆ ಹಾಗೂ ಕಚೇರಿ ಸೂಚನಾ ಫಲಕಕ್ಕೆ ಮಾತ್ರ ಸೀಮಿತವಾಗಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಇಂತಹ ಮಹತ್ವದ ಹಾಗೂ ಬಹುಕೋಟಿ ಮೌಲ್ಯದ ಸಾರ್ವಜನಿಕ ಆಸ್ತಿ ವಹಿವಾಟಿಗೆ ಸಮಗ್ರ ಹಾಗೂ ಪಾರದರ್ಶಕ ಸಾರ್ವಜನಿಕ ಮಾಹಿತಿ ನೀಡಬೇಕಾದ ಜವಾಬ್ದಾರಿಯನ್ನು ಪುರಸಭೆ ಉದ್ದೇಶಪೂರ್ವಕವಾಗಿ ತಪ್ಪಿಸಿಕೊಂಡಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನವಾಗಿದೆ ಎನ್ನಲಾಗುತ್ತಿದೆ. ಆದರೆ, ಪರ್ಯಾಯ ಸಂಸ್ಥೆಗಳು, ಸಾರ್ವಜನಿಕ ಟ್ರಸ್ಟ್ ಅಥವಾ ತಟಸ್ಥ ಸಂಘಟನೆಗಳನ್ನು ಸಭೆಗೆ ಆಹ್ವಾನಿಸದೆ ನೇರವಾಗಿ ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಒಲವು ತೋರಲಾಗಿದೆ ಎಂಬ ಆರೋಪ ಕೇಳಿ ಬರುತ್ತಿವೆ.
ಸರ್ಕಾರದ ಆದೇಶದಂತೆ ಮುಂದಿನ ಕ್ರಮ
ಸಾಮಾಜಿಕ ಕಾರ್ಯಗಳಿಗಾಗಿ ಕಾಂಗ್ರೆಸ್ ಭವನ ಟ್ರಸ್ಟ್ ಅರ್ಜಿ ಸಲ್ಲಿಸಿದ್ದು ನವಂಬರ್‌ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ರಿಯಾಯಿತಿ ದರದಲ್ಲಿ ಸಿ.ಎ ನಿವೇಶನ ನೀಡಲು ಅನುಮೋದನೆ ನೀಡಲಾಗಿದೆ. ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದ ಆದೇಶದಂತೆ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ದೇವನಹಳ್ಳಿ ಪುರಸಭೆ ಮುಖ್ಯಾಧಿಕಾರಿ ಶಿವಮೂರ್ತಿ ಹೇಳಿದರು.
ಪಾರದರ್ಶಕತೆ ಕೊರತೆ ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ಕಡ್ಡಾಯವಾಗಿ ಪುರಸಭೆ ವರದಿಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಆದರೆ ಪುರಸಭೆ ವೆಬ್‌ಸೈಟ್‌ನಲ್ಲಿ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಪ್ರಕಟಿಸಿಲ್ಲ. ಬಯಪ್ಪ ಕಚೇರಿ ವೆಬ್‌ಸೈಟ್‌ನಲ್ಲೂ ಮಾಹಿತಿ ಪ್ರಕಟಿಸಿಲ್ಲ. ದೇವನಹಳ್ಳಿ ಪುರಸಭೆ ಭೂ ಮಾಫಿಯಾ ಹಿಡಿತದಲ್ಲಿ ಕೆಲಸ ಮಾಡುತ್ತಿದೆ. ಇಲ್ಲಿ ಸ್ಥಳೀಯ ನಾಯಕರ ಹಿತಾಸಕ್ತಿ ಹೆಚ್ಚಾಗಿ ಕೆಲಸ ಮಾಡುತ್ತಿದೆ.ಅನಿಲ್ ಯಾದವ್ ಅಧ್ಯಕ್ಷ ಬಿಜೆಪಿ ನಗರ ಮಂಡಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.