ADVERTISEMENT

ಕೊರೊನಾ ವಾರಿಯರ್ಸ್‌ ಸೇವೆ ಅನನ್ಯ: ರವಿ.ಡಿ.ಚೆನ್ನಣ್ಣನವರ್ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 3 ಮೇ 2020, 13:15 IST
Last Updated 3 ಮೇ 2020, 13:15 IST
ಎನಬಲರ್ಸ್ ಯುನೈಟೆಡ್ ಟ್ರಸ್ಟ್ ಪದಾಧಿಕಾರಿಗಳನ್ನು ಎಸ್‌ಪಿ ರವಿ.ಡಿ.ಚೆನ್ನಣ್ಣನವರ್ ಮತ್ತು ಶಾಸಕ ಎಂ.ಕೃಷ್ಣಪ್ಪ ಸನ್ಮಾನಿಸಿದರು
ಎನಬಲರ್ಸ್ ಯುನೈಟೆಡ್ ಟ್ರಸ್ಟ್ ಪದಾಧಿಕಾರಿಗಳನ್ನು ಎಸ್‌ಪಿ ರವಿ.ಡಿ.ಚೆನ್ನಣ್ಣನವರ್ ಮತ್ತು ಶಾಸಕ ಎಂ.ಕೃಷ್ಣಪ್ಪ ಸನ್ಮಾನಿಸಿದರು   

ಆನೇಕಲ್:ಹಗಲಿರುಳು ಶ್ರಮಿಸುತ್ತಿರುವ ಕೊರೊನಾ ವಾರಿಯರ್ಸ್‌ರನ್ನು ಗೌರವಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚೆನ್ನಣ್ಣನವರ್‌ ತಿಳಿಸಿದರು.

ಅವರು ತಾಲ್ಲೂಕಿನ ಜಿಗಣಿಯಲ್ಲಿ ಕೊರೊನಾ ವೈರಸ್‌ ಹರಡುವಿಕೆಯನ್ನು ತಡೆಯಲು ಶ್ರಮಿಸಿದ ಪೊಲೀಸರು, ವೈದ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ನರ್ಸ್‌ಗಳಿಗೆ ಸಾರ್ವಜನಿಕರಿಂದ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

‘ಸಾಂಕ್ರಾಮಿಕ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಸತತವಾಗಿ ನಡೆಯಬೇಕು. ಲಾಕ್‌ಡೌನ್‌ ಎರಡು ಹಂತಗಳನ್ನು ದಾಟಿದ್ದೇವೆಂಬ ತೃಪ್ತಿ ಸಾಲದು. ಉದಾಸೀನ ಮಾಡದೇ ಮುಂದಿನ ದಿನಗಳಲ್ಲಿಯೂ ಸರ್ಕಾರ ರೂಪಿಸಿರುವ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಸ್ವಚ್ಛತೆ, ಅಂತರ ಕಾಯ್ದುಕೊಳ್ಳುವುದು, ಆರೋಗ್ಯದ ಸೂತ್ರಗಳನ್ನು ಪಾಲಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

ಶಾಸಕ ಎಂ.ಕೃಷ್ಣಪ್ಪ ಮಾತನಾಡಿ, ‘ತಮ್ಮ ಕುಟುಂಬವನ್ನು ಮರೆತು ಜನರ ಸೇವೆಗಾಗಿ ಶ್ರಮಿಸುತ್ತಿರುವ ಸೇವಾ ಕಾರ್ಯದಲ್ಲಿ ಭಾಗಿಯಾಗಿರುವ ಎಲ್ಲರಿಗೆ ಗೌರವ ಸಲ್ಲಿಸಲು ಸಾರ್ವಜನಿಕರು ಹಮ್ಮಿಕೊಂಡಿರುವ ಕಾರ್ಯಕ್ರಮ ಅರ್ಥಪೂರ್ಣವಾಗಿದೆ’ ಎಂದರು.

ಜಿಗಣಿ ಪೊಲೀಸ್‌ ವೃತ್ತ ನಿರೀಕ್ಷಕ ಕೆ.ವಿಶ್ವನಾಥ್‌ ಮಾತನಾಡಿ,ಎನೆಬಲರ್ಸ್‌ ಯುನೈಟೆಡ್‌ ಟ್ರಸ್ಟ್‌ನ ಪದಾಧಿಕಾರಿಗಳು ಪ್ರತಿದಿನ 4 ಸಾವಿರ ಜನರಿಗೆ ಊಟ ನೀಡಿದ್ದಾರೆ. 6 ಸಾವಿರ ಕುಟುಂಬಗಳಿಗೆ ಆಹಾರದ ಕುಟುಂಬ ನೀಡಿದ್ದಾರೆ ಎಂದರು.

ಜಿಗಣಿ ಪುರಸಭಾ ಮುಖ್ಯಾಧಿಕಾರಿ ಅಮರನಾಥ್‌, ಜಿಗಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಲತಾ, ಆನೇಕಲ್‌ನ ವೈದ್ಯ ಡಾ.ನವೀನ್‌, ಸಿಪಿಐ ಕೃಷ್ಣ, ಎನಬಲರ್ಸ್‌ ಯುನೈಟೆಡ್‌ ಟ್ರಸ್ಟ್‌ನ ವಿವೇಕ್‌, ಚೇತನ್, ಅಪೂರ್ವ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.