ADVERTISEMENT

ಅಗತ್ಯ ಸೇವೆ ಸಿಬ್ಬಂದಿ ಹಾಜರಿ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2020, 14:30 IST
Last Updated 29 ಮಾರ್ಚ್ 2020, 14:30 IST
ಆನೇಕಲ್‌ನ ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್ ಸಿ.ಮಹಾದೇವಯ್ಯ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು
ಆನೇಕಲ್‌ನ ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್ ಸಿ.ಮಹಾದೇವಯ್ಯ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು   

ಆನೇಕಲ್: ಅಗತ್ಯ ಸೇವೆಯ ಎಲ್ಲಾ ಸರ್ಕಾರಿ ಕಚೇರಿಗಳ ಸಿಬ್ಬಂದಿ ಕಡ್ಡಾಯವಾಗಿ ಕಚೇರಿಗಳಿಗೆ ಹಾಜರಾಗಬೇಕು. ಗೈರು ಹಾಜರಾಗುವವರ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ತಹಶೀಲ್ದಾರ್‌ ಸಿ.ಮಹಾದೇವಯ್ಯ ತಿಳಿಸಿದರು.

ಅವರು ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕೊರೊನಾ ವೈರಸ್‌ ಸೋಂಕು ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅತ್ಯವಶ್ಯಕ. ಸರ್ಕಾರ ಸೂಚಿಸಿರುವ ಸೂಚನೆ ಜಾರಿಗೆ ತರುವಲ್ಲಿ ಸರ್ಕಾರ ನೌಕರರು ಶ್ರಮಿಸಬೇಕಾಗಿದೆ. ಅಗತ್ಯ ಸೇವೆಗಳ ಸಿಬ್ಬಂದಿ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಿದರೆ ಮಾತ್ರ ಕೊರೊನಾ ಹರಡುವಿಕೆ ತಡೆಯಲು ಸಾಧ್ಯ. ಆದರೆ ಕೆಲವು ಸಿಬ್ಬಂದಿ ಕಚೇರಿಗೆ ಹಾಜರಾಗುತ್ತಿಲ್ಲ ಎಂಬ ದೂರುಗಳಿವೆ. ಸೋಮವಾರದ ನಂತರ ಹಾಜರಾಗದ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.

ADVERTISEMENT

ಕೊರೊನಾ ಹಿನ್ನೆಲೆಯಲ್ಲಿ ರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ. ಹಾಗಾಗಿ ಸರ್ಕಾರಿ ನೌಕರರು ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡು ಪರಿಸ್ಥಿತಿಯನ್ನು ನಿಭಾಯಿಸುವುದು ಜವಾಬ್ದಾರಿ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005ರ ಅನುಸಾರ ನಿರ್ಲಕ್ಷ್ಯ ತೋರಿದ, ಗೈರುಹಾಜರಾದ ಅಧಿಕಾರಿ ಅಥವಾ ಸಿಬ್ಬಂದಿಗೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ನಿಗದಿಯಾಗಿದೆ. ಹಾಗಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿ ಎಚ್ಚರ ವಹಿಸಿ ಕಾರ್ಯನಿರ್ವಹಿಸಬೇಕು ಎಂದರು.

ಗಡಿಭಾಗಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ 24 ಗಂಟೆಗಳು ಕಾರ್ಯನಿರ್ವಹಿಸಬೇಕಾಗಿದೆ. ಕಂದಾಯ, ಆರೋಗ್ಯ ಇಲಾಖೆ ಮತ್ತು ಪೊಲೀಸರು ನಿರ್ವಹಿಸುತ್ತಿದ್ದಾರೆ. ಇತರೆ ಇಲಾಖೆಗಳ ನೆರವನ್ನು ಮುಂದಿನ ದಿನಗಳಲ್ಲಿ ಪಡೆಯುವ ಚಿಂತನೆ ನಡೆಸಲಾಗಿದೆ. ಉಪವಿಭಾಗಾಧಿಕಾರಿಗಳು ಮತ್ತು ತಾವು ಶನಿವಾರ ಎಲ್ಲಾ ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಿ ಕಟ್ಟುನಿಟ್ಟಾಗಿ ಸೂಚನೆಗಳನ್ನು ಪಾಲಿಸುವಂತೆ ತಿಳಿಸಲಾಗಿದೆ ಎಂದರು.

ಆನೇಕಲ್‌ ಮಾರುಕಟ್ಟೆಯಲ್ಲಿ ಬೆಳಿಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಾರೆ ಇದರಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ತೊಂದರೆಯಾಗಿದೆ ಎಂಬ ದೂರುಗಳಿವೆ. ಹಾಗಾಗಿ ಮಾರುಕಟ್ಟೆಯನ್ನು ಎಎಸ್‌ಬಿ ಕಾಲೇಜು ಮೈದಾನ, ಚಿಕ್ಕಕೆರೆ ಮೈದಾನ ಮತ್ತು ಬಿಇಓ ಕಚೇರಿ ಮೈದಾನಗಳಲ್ಲಿ ಮಾರುಕಟ್ಟೆಗಳನ್ನು ತೆರೆಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ. ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ತರಕಾರಿ ಮತ್ತಿತರ ಅವಶ್ಯಕ ವಸ್ತುಗಳನ್ನು ಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳಬೇಕು. ಇದಲ್ಲದೇ ವಾರ್ಡ್‌ಗಳಿಗೆ 10 ವಾಹನಗಳನ್ನು ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲು ಬಿಡಲಾಗಿದೆ. ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ ಎಂದರು.

ತಾಲ್ಲೂಕು ವೈದ್ಯಾಧಿಕಾರಿ ಡಾ.ಜ್ಞಾನಪ್ರಕಾಶ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.