ಆನೇಕಲ್: ಹೆಬ್ಬಗೋಡಿ ಪೊಲೀಸರು ಮತ್ತು ನ್ಯಾಯಾಲಯ ನಿಯೋಜಿಸಿದ್ದ ಅಧಿಕಾರಿಗಳ ತಂಡ ಸೋಮವಾರ ಹೆಬ್ಬಗೋಡಿ ಸಮೀಪದಲ್ಲಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಟಿ.ದಯಾನಂದ ರೆಡ್ಡಿ ಅವರ ಒಡೆತನದ ಲ್ಯಾಂಡ್ ಮಾರ್ಕ್ ಕಟ್ಟಡದಲ್ಲಿ ಸ್ಥಳ ಮಹಜರು ನಡೆಸಿತು.
ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ಭಾರತ್ ಇನ್ಫ್ರಾಎಕ್ಸ್‌ಪೋರ್ಟ್ ಮತ್ತು ಇಂಪೋರ್ಟ್ ಕಂಪನಿಗೆ ₹110 ಕೋಟಿ ಸಾಲ ಮಂಜೂರು ಮಾಡಿತ್ತು. ಸಕಾಲಕ್ಕೆ ಸಾಲ ಮರು ಪಾವತಿಸದ ಹಿನ್ನೆಲೆಯಲ್ಲಿ ಕಂಪನಿಯನ್ನು ಎಸ್‌ಬಿಐ ತನ್ನ ವಶಕ್ಕೆ ಪಡೆದುಕೊಂಡಿತ್ತು. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಸ್ಥಳ ಮಹಜರು ನಡೆಸಲು ನ್ಯಾಯಾಲಯದ ನಿರ್ದೇಶನ ನೀಡಿತ್ತು.
ಕಂಪನಿಯನ್ನು ಬ್ಯಾಂಕ್ ವಶಕ್ಕೆ ಪಡೆದ ನಂತರ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಿರಲಿಲ್ಲ. ಹಾಗಾಗಿ ಕಂಪನಿಯಲ್ಲಿದ್ದ ಕೋಟ್ಯಾಂತರ ಮೌಲ್ಯ ಬೆಲೆಬಾಳುವ ವಸ್ತುಗಳು ಹಾಗೂ ಮಹತ್ವದ ದಾಖಲೆ ಕಳುವಾಗಿವೆ ಎಂದು ಸ್ಥಳ ಮಹಜರು ನಂತರ ದಯಾನಂದ ರೆಡ್ಡಿ ಆರೋಪ ಮಾಡಿದರು.
ಸಾಲ ಮರುಪಾವತಿಸಲು ವಿಫಲರಾದ ಸಾಲಗಾರರ ವಸತಿ ಅಥವಾ ವಾಣಿಜ್ಯ ಆಸ್ತಿಗಳನ್ನು ಹರಾಜು ಹಾಕಲು ಅವಕಾಶ ನೀಡುವ ಸರ್ಫೆಸಿ ಕಾಯ್ದೆಯನ್ನು ಎಸ್‌ಬಿಐ ಅಧಿಕಾರಿಗಳು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.