ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಜಿಲ್ಲೆಯ ವಿದ್ಯಾವಂತರೇ ಹೆಚ್ಚಿನ ಸಂಖ್ಯೆಯಲ್ಲಿ ಸೈಬರ್ ವಂಚಕರ ಜಾಲಕ್ಕೆ ಬಲಿ ಬೀಳುತ್ತಿದ್ದಾರೆ.
ಬೆಂಗಳೂರು ನಗರವನ್ನು ಹೊರತು ಪಡಿಸಿದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಸೈಬರ್ ಅಪರಾಧ ಪ್ರಕರಣ ವರದಿಯಾಗುತ್ತಿವೆ.
ಪಾರ್ಟ್‌ಟೈಮ್ ಜಾಬ್, ಉದ್ಯೋಗಾವಕಾಶ, ತ್ವರಿತ ಗತಿಯಲ್ಲಿ ಹಣ ದ್ವಿಗುಣ ಆಮಿಷ, ಹೂಡಿಕೆ, ಸರ್ಕಾರಿ ಯೋಜನೆಗಳ ಲಾಭ, ಡಿಜಿಟಲ್ ಆರೆಸ್ಟ್ ನೆಪದಲ್ಲಿ ವಂಚಕರು ಲಕ್ಷಾಂತರ ರೂಪಾಯಿ ದೋಚುತ್ತಿದ್ದಾರೆ.
ಬೆಂಗಳೂರು ನಗರ ಮತ್ತು ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಅತಿ ಹೆಚ್ಚು ಸೈಬರ್ ಅಪರಾಧ ಪ್ರಕರಣ ದಾಖಲಾಗುತ್ತಿವೆ. ಪ್ರತಿ ತಿಂಗಳು ಸೈಬರ್ ವಂಚನೆಗೆ ಒಳಗಾದವರ ದೂರುಗಳ ಸಂಖ್ಯೆ ಮೂರಂಕಿ ಗಡಿ ದಾಟುತ್ತಿವೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತಿಂಗಳಿಗೆ ಸರಾಸರಿ 35 ಪ್ರಕರಣಗಳಂತೆ ಕಳೆದ 6 ತಿಂಗಳಲ್ಲಿ 215 ಸೈಬರ್ ಕ್ರೈಂ ಪ್ರಕರಣ ದಾಖಲಾಗಿವೆ. ಈ ಪ್ರಕರಣಗಳ ಇತ್ಯರ್ಥಕ್ಕೆ ಸಹಕರಿಸಬೇಕಾದ ಸೈಬರ್ ಕ್ರೈಂ ಪೋಲಿಸ್ ಠಾಣೆ ಸಹ ಬೆಂಗಳೂರು ನಗರದಲ್ಲಿದೆ.
ಇನ್‌ಸ್ಟಾಗ್ರಾಂ, ಫೇಸ್‌ಬುಕ್, ವಾಟ್ಸ್ಆ್ಯಪ್, ಟೆಲಿಗ್ರಾಂ ಸೇರಿದಂತೆ ಜಾಲತಾಣಗಳ ಮೂಲಕ ಸೈಬರ್ ವಂಚನೆ ಪ್ರಕರಣ ಹೆಚ್ಚುತ್ತಿವೆ. ಶಿಕ್ಷಕರು, ವೈದ್ಯರು, ಎಂಜಿನಿಯರ್, ಸರ್ಕಾರಿ ನೌಕರರು ಸೈಬರ್ ವಂಚನೆಗೆ ಒಳಗಾದವರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ.
ಆನ್‌ಲೈನ್ ಶಾಪಿಂಗ್, ಬ್ಯಾಂಕಿಂಗ್, ಹಣಕಾಸು ವಹಿವಾಟು, ಹೂಡಿಕೆಯಂತಹ ಆರ್ಥಿಕ ಚಟುವಟಿಕೆಗಳಿಗೆ ಮೊಬೈಲ್, ಆನ್‌ಲೈನ್ ಬಳಸುತ್ತಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಮತ್ತು ಸುಲಭವಾಗಿ ವಂಚಕರ ಬಲೆಗೆ ಬಲಿ ಬೀಳುತ್ತಿದ್ದಾರೆ.
ಹೀಗಾಗಿ, ಸೈಬರ್ ಕ್ರೈಂ ದೂರು ದಾಖಲಿಸಲು ವಂಚನೆಗೊಳಗಾದವರು ಸ್ಥಳೀಯ ಪೊಲೀಸ್ ಠಾಣೆ ಮೊರೆ ಹೋಗುತ್ತಾರೆ. ಬಹುತೇಕ ಠಾಣೆಗಳಲ್ಲಿ ಸೈಬರ್ ಕ್ರೈಂ ಪ್ರಕರಣ ದಾಖಲಿಸಿಕೊಳ್ಳದೆ ಬೆಂಗಳೂರಿನ ವಿಳಾಸ ಕೊಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಹುತೇಕ ದೂರು ದಾಖಲಾಗುತ್ತಿಲ್ಲ. ಹೀಗೆ, ದಾಖಲಾಗದ ಪ್ರಕರಣ ಪಟ್ಟಿಗೆ ಸೇರಿಕೊಂಡರೆ ಸೈಬರ್ ಅಪರಾಧ ಸಂಖ್ಯೆ ದುಪ್ಪಟ್ಟಾಗಲಿದೆ.
ವೈವಿಧ್ಯಮಯ ವಂಚನೆ
ಪ್ರಕರಣ ಬ್ಯಾಂಕ್ ಖಾತೆಗಳಿಂದ ಹಣಕಾಸು ವಂಚನೆ(ಓಟಿಪಿ ಶೇರಿಂಗ್) ಆನ್‌ಲೈನ್ ಲಿಂಕ್‌ಗಳ ಮೂಲಕ ಹಣ ಕಳೆದುಕೊಳ್ಳುವುದು ವಾಟ್ಸ್ ಆ್ಯಪ್ ಲಿಂಕ್ ಮೂಲಕ ವಂಚನೆ ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ, ಬ್ಲಾಕ್‌ಮೇಲ್ ಜಾಲತಾಣಗಳಲ್ಲಿ ಲೈಂಗಿಕ ಕಿರುಕುಳ ಡಿಜಿಟಲ್ ಆರೆಸ್ಟ್ ವಿಮಾನ ನಿಲ್ದಾಣ ಆನೇಕಲ್ ಕೈಗಾರಿಕಾ ಪ್ರದೇಶ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸರ ವ್ಯಾಪ್ತಿಗೆ ಒಳಪಡುವ ಹಿನ್ನೆಲೆಯಲ್ಲಿ ಸೈಬರ್ ಅಪರಾಧಗಳು ಹೆಚ್ಚಿವೆ. ಈ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಪ್ರತ್ಯೇಕ ಸೈಬರ್ ಕ್ರೈಂ ಠಾಣೆ ತೆರೆಯಲಾಗಿದೆ. ಜನರಲ್ಲಿ ಜಾಗೃತಿ ಮೂಡಿಸಲು ಆದ್ಯತೆ ನೀಡಲಾಗುತ್ತಿದೆ. ನಾಗರಾಜ ಹೆಚ್ಚುವರಿ ಎಸ್‌ಪಿ ಬೆಂಗಳೂರು ಗ್ರಾಮಾಂತರ
ವಿದ್ಯಾವಂತರಿಗೇ ಹೆಚ್ಚು ವಂಚನೆ!
ಸೈಬರ್ ವಂಚನೆ ಪ್ರಕರಣಗಳ ಪೈಕಿ ವಿದ್ಯಾವಂತರೇ ಹೆಚ್ಚು ವಂಚನೆಗೆ ಒಳಗಾಗಿರುವುದು ಸೈಬರ್ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳು ಹೇಳುತ್ತವೆ! ಆನ್‌ಲೈನ್‌ನಲ್ಲಿ ಓಟಿಪಿ ಹಂಚಿಕೊಳ್ಳುವುದು ಅನಾಮಿಕರೊಂದಿಗೆ ಬ್ಯಾಂಕ್ ಖಾತೆಯ ವಿವರ ಹಂಚಿಕೆ ಜಾಲತಾಣದಲ್ಲಿ ವೈಯಕ್ತಿಕ ವಿವರ ಒದಗಿಸುವ ಮೂಲಕ ಸೈಬರ್ ಕಳ್ಳರ ವಂಚನೆಯ ಜಾಲಕ್ಕೆ ಸಿಲುಕುತ್ತಿದ್ದಾರೆ. ಹೀಗೆ ಸೈಬರ್ ವಂಚನೆ ಜಾಲಕ್ಕೆ ಸಿಕ್ಕವರು ಕೇಂದ್ರ ಸರ್ಕಾರದ ಸಹಾಯವಾಣಿ 1930 ಸಂಖ್ಯೆಗೆ ಕರೆ ಮಾಡಿ ದೂರು ಸಲ್ಲಿಸಲು ಸಹ ಅವಕಾಶ ಕಲ್ಪಿಸಲಾಗಿದೆ.
ಪೊಲೀಸರಿಗೆ ಓವರ್ ಡ್ಯೂಟಿ!
ಬೆಂಗಳೂರು ಗ್ರಾಮಾಂತರ ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿ ದೊಡ್ಡಬಳ್ಳಾಪುರ ದೇವನಹಳ್ಳಿ(ನಗರ ಏರ್‌ಪೋರ್ಟ್ ಹೊರತುಪಡಿಸಿ) ನೆಲಮಂಗಲ ಹೊಸಕೋಟೆ ಆನೇಕಲ್ ತಾಲ್ಲೂಕು ಒಳಪಡುತ್ತವೆ. ಸದ್ಯ ಜಿಲ್ಲೆಯ ಸೈಬರ್ ಕ್ರೈಂ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಠಾಣೆ ತೆರೆಯಲಾಗಿದ್ದು ಬೆಂಗಳೂರಿನ ಮಿಲ್ಲರ್ಸ್ ರಸ್ತೆಯಲ್ಲಿದೆ. ಗ್ರಾಮಾಂತರ ವ್ಯಾಪ್ತಿಯ ದೂರು ಮಾತ್ರವಲ್ಲದೆ ಬೆಂಗಳೂರು ನಗರದ ಪ್ರಕರಣಗಳನ್ನೂ ಇದೇ ಸಿಬ್ಬಂದಿ ಪರಿಹರಿಸಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.