ADVERTISEMENT

ಮೇವಿನ ಜೋಳಕ್ಕೆ ಸೈನಿಕ ಹುಳು ಬಾಧೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2019, 20:40 IST
Last Updated 1 ಜೂನ್ 2019, 20:40 IST
ಜೋಳದ ಸುಳಿಯನ್ನು ಸೈನಿಕ ಹುಳು ತಿಂದಿರುವುದು
ಜೋಳದ ಸುಳಿಯನ್ನು ಸೈನಿಕ ಹುಳು ತಿಂದಿರುವುದು   

ದಾಬಸ್ ಪೇಟೆ: ಸೋಂಪುರ ಹೋಬಳಿಯಲ್ಲಿ ಮೇವಿನ ಜೋಳ ಬೆಳೆದಿರುವ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಒಂದು ಕಡೆ ಮಳೆಯಿಲ್ಲದೆ ಮೇವಿನ ಜೋಳದ ಗಿಡಗಳು ಒಣಗುತ್ತಿವೆ. ಇನ್ನೊಂದೆಡೆ, ಸೈನಿಕ ಹುಳಗಳು ಮೇವಿನ ಜೋಳದ ಗಿಡಗಳ ಸುಳಿಯನ್ನೇ ತಿನ್ನುತ್ತಿವೆ.

ಕಳೆದ ವರ್ಷ ಕೆಲವೆಡೆ ಮುಸುಕಿನ ಜೋಳಕ್ಕೆ ಸೈನಿಕ ಹುಳುವಿನ ಬಾಧೆ ಕಾಡಿತ್ತು. ಆದರೆ, ಈ ಬಾರಿ ನೆಲಮಂಗಲ ತಾಲ್ಲೂಕಿನ ಉದ್ದಕ್ಕೂ ವ್ಯಾಪಿಸಿಕೊಂಡಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಪೂರ್ವಮುಂಗಾರು ಮಳೆ ಪ್ರತಿವರ್ಷಕ್ಕಿಂತ ಸರಾಸರಿ ಕಡಿಮೆ ಪ್ರಮಾಣದಲ್ಲಿ ಬಿದ್ದಿದೆ. ಹಲವು ರೈತರು ಒಂದೆರಡು ಮಳೆಗೆ ಭೂಮಿ ಹಸನು ಮಾಡಿಕೊಂಡು ಜಾನುವಾರುಗಳ ಮೇವಿಗಾಗಿ ಮುಸುಕಿನ ಜೋಳ ಬಿತ್ತನೆ ಮಾಡಿದ್ದರು.

‘ಕಳೆದ ವರ್ಷ ರಾಗಿ ಬೆಳೆ ಚೆನ್ನಾಗಿ ಆಗಿರಲಿಲ್ಲ. ಇದರಿಂದಾಗಿ, ಮೇವಿನ ಕೊರತೆ ಕಾಣಿಸಿಕೊಂಡಿತ್ತು. ಈ ಸಲ ಮೇವಿಗಾಗಿ ರೈತರು ಜೋಳ ಬಿತ್ತನೆ ಮಾಡಿದ್ದರು. ಅದಕ್ಕೂ ಹುಳು ಬಿದ್ದಿದ್ದು, ಮೇವಿನ ಕೊರತೆ ಉಂಟಾಗಲಿದೆ’ ಎಂದು ರೈತ ಯೋಗೇಶ್‌ ಹೇಳಿದರು.

ADVERTISEMENT

‘ಕ್ವಿಂಟಲ್‌ ಜೋಳಕ್ಕೆ ₹1,200 ಕೊಟ್ಟು ಬಿತ್ತನೆ ಮಾಡಿದ್ದೆವು. ಮಳೆಯಿಲ್ಲದೆ ಜೋಳದ ಬೆಳವಣಿಗೆ ಕುಂಠಿತವಾಗಿತ್ತು. ಈಗ ಹುಳುಗಳು ಸುಳಿಯನ್ನೇ ತಿಂದು ಹಾಕುತ್ತಿವೆ. ಏನು ಮಾಡಬೇಕು ಎಂದು ತೋಚುತ್ತಿಲ್ಲ’ ಎಂದರು.

‘ಜೋಳಕ್ಕೆ ಯಾವುದೇ ಔಷಧ ಸಿಂಪಡಿಸಬಾರದು. ಆದರೂ ಹುಳು ಹೆಚ್ಚಾಗಿದ್ದರೆ, ಎಕೋಲೆಕ್ಸ್ ಔಷಧಿಯನ್ನು ಒಂದು ಲೀಟರ್‌ಗೆ 2 ಎಂಎಲ್‌ನಷ್ಟು ಹಾಕಿ ಆದಷ್ಟು ಸುಳಿಗೆ ಬೀಳುವಂತೆ ಸ್ಪ್ರೇ ಮಾಡಬೇಕು. ಆಗ ನಿಯಂತ್ರಿಸಬಹುದು’ ಎಂದು ಸೋಂಪುರ ಕೃಷಿ ಅಧಿಕಾರಿ ಆನಂದ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.