ADVERTISEMENT

ದೌರ್ಜನ್ಯ ಖಂಡಿಸಿ ದಲಿತ ಸಂಘಟನೆಗಳ ಪ್ರತಿಭಟನೆ

ಅಸ್ಪೃಶ್ಯತೆ, ಧರ್ಮ, ಜಾತಿ ಹೆಸರಿನಲ್ಲಿ ನಿರಂತರ ಹಲ್ಲೆ ಆರೋಪ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2019, 14:44 IST
Last Updated 14 ಆಗಸ್ಟ್ 2019, 14:44 IST
ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು
ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು   

ದೇವನಹಳ್ಳಿ: ದಲಿತರ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ ಖಂಡಿಸಿ ಪ್ರಗತಿಪರ ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಇಲ್ಲಿನ ಮಿನಿ ವಿಧಾನಸೌಧ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಭೀಮ್ ಆರ್ಮಿ ರಾಷ್ಟ್ರೀಯ ಅಧ್ಯಕ್ಷ ಚಂದ್ರಶೇಖರ್ ಆಜಾದ್ ರಾವಣ್, ಅಖಂಡ ಭಾರತ ದೇಶದಲ್ಲಿ ದಲಿತರೇ ಬಹುಸಂಖ್ಯಾತರಿದ್ದಾರೆ. ಐದಾರು ವರ್ಷಗಳಿಂದ ಉತ್ತರ ಭಾರತ ಸೇರಿದಂತೆ ರಾಜ್ಯದಲ್ಲೂ ದಲಿತರ ಬೆತ್ತಲೆ ಮೆರವಣಿಗೆ, ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸುವುದು, ದಲಿತರ ಯುವತಿಯರನ್ನು ಅಪಮಾನಿಸಿ ವಿಡಿಯೊ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದು ನಡೆಯುತ್ತಿದೆ ಎಂದು ಟೀಕಿಸಿದರು.

ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ರಚಿಸಿರುವ ಸಂವಿಧಾನದಲ್ಲಿನ ಕಾನೂನು ಗಾಳಿಗೆ ತೂರಿ ಮನುವಾದಿಗಳ ಕಾನೂನು ಏರಿಕೆಯಾಗುತ್ತಿದೆ ಎಂಬ ಅನುಮಾನ ಮೂಡುತ್ತಿದೆ ಎಂದು ಆರೋಪಿಸಿದರು.

ADVERTISEMENT

ದೇಶದಲ್ಲಿ ಪ್ರತಿಯೊಬ್ಬರೂ ಸಮಾನತೆಯಿಂದ ಬದುಕಬೇಕು. ಸಂವಿಧಾನದ ಆಶಯದಂತೆ ಮೂಲ ಸೌಲಭ್ಯ ಪಡೆಯುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ದಬ್ಬಾಳಿಕೆ, ದೌರ್ಜನ್ಯ, ಬೆದರಿಕೆಯಿಂದ ದಲಿತರ ಹಕ್ಕು ಕಸಿಯಲು ಸಾಧ್ಯವಿಲ್ಲ. 20ನೇ ಶತಮಾನಕ್ಕೆ ಕಾಲಿಟ್ಟರೂ ಅಸ್ಪೃಶ್ಯತೆ, ಧರ್ಮ, ಜಾತಿ ಹೆಸರಿನಲ್ಲಿ ದೌರ್ಜನ್ಯ ನಡೆಯುತ್ತಿದೆ. ಮುಂದುವರೆದರೆ ಮುಂದಿನ ದಿನಗಳಲ್ಲಿ ಜೈಲ್ ಭರೋ ಚಳವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಅಖಿಲ ಭಾರತ ಜೈಭೀಮ್ ರಾಜ್ಯ ಘಟಕದ ಅಧ್ಯಕ್ಷ ಬಿ.ಆರ್.ಮುನಿರಾಜು ಮಾತನಾಡಿ, ತಾಲ್ಲೂಕಿನ ಚೀಮಾಚನಹಳ್ಳಿ ಗ್ರಾಮದ ದಲಿತರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಮತ್ತು ಕಂದಾಯ ಅಧಿಕಾರಿಗಳು ಸಮಸ್ಯೆ ಬಗೆಹರಿಸಿದ್ದರೆ ಘಟನೆಗೆ ಅವಕಾಶ ಇರುತ್ತಿರಲಿಲ್ಲ. ಏಳು ಆರೋಪಿಗಳಲ್ಲಿ ಇನ್ನೂ ನಾಲ್ವರನ್ನು ಬಂಧಿಸಿಲ್ಲವೆಂದರೆ ಪೊಲೀಸರ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ ಎಂದು ದೂರಿದರು.

ಸಮತ ಸೈನಿಕ ದಳ ರಾಜ್ಯ ಘಟಕ ಅಧ್ಯಕ್ಷ ಚನ್ನಕೃಷ್ಣಪ್ಪ ಮತ್ತು ಪ್ರಜಾ ವಿಮೋಚನಾ ಚಳವಳಿ (ಸ್ವಾಭಿಮಾನ) ರಾಜ್ಯ ಘಟಕ ಅಧ್ಯಕ್ಷ ಮುನಿಆಂಜಿನಪ್ಪ ಮಾತನಾಡಿ, ಆರೋಪಿಗಳು ಮಾನವಿಯತೆ ಇಲ್ಲದೆ ಹಲ್ಲೆ ನಡೆಸಿದ್ದಾರೆ. ಪರಿಶಿಷ್ಟ ಜಾತಿ ಎಂಬ ಏಕೈಕ ಕಾರಣ, ಘಟನೆ ಕಡಿವಾಣಕ್ಕೆ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ದೌರ್ಜನ್ಯ, ಗಂಭೀರ ಹಲ್ಲೆ, ಹತ್ಯೆಯಂತಹ ಅಮಾನವೀಯ ಘಟನೆಗಳಿಗೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಕಾರಣವಾಗಿದೆ. ಸವರ್ಣೀಯರು ದಲಿತರನ್ನು ನಿಕೃಷ್ಟವಾಗಿ ಕಾಣಿತ್ತಿದ್ದಾರೆ. ಅನೇಕ ಕಡೆ ದಲಿತರ ಕುಟುಂಬಗಳ ಮೇಲೆ ಬಹಿಷ್ಕಾರದಂತಹ ಬರೆಗಳನ್ನು ಎಳೆಯಲಾಗುತ್ತಿದೆ. ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದರು.

ಮಾನವ ಹಕ್ಕುಗಳ ವೇದಿಕೆ ರಾಜ್ಯ ಘಟಕ ಅಧ್ಯಕ್ಷ ಕೆ.ಆರ್.ಮುನಿರಾಜು, ವಕೀಲ ಸಿದ್ದಾರ್ಥ, ಬಿ.ಎಸ್.ಪಿ. ರಾಜ್ಯ ಘಟಕ ಕಾರ್ಯದರ್ಶಿ ನಂದಗುಂದ ವೆಂಕಟೇಶ್, ಮುಖಂಡರಾದ ಕಾರಹಳ್ಳಿ ಕೆಂಪಣ್ಣ, ನಾರಾಯಣಸ್ವಾಮಿ, ಮ್ಯಾಥ್ಯು ಮುನಿಯಪ್ಪ, ಪುರಸಭೆ ಸದಸ್ಯ ಬಾಲರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.