ADVERTISEMENT

ಬುದ್ಧನ ತತ್ವದಿಂದ ನೆಮ್ಮದಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 21:00 IST
Last Updated 8 ಡಿಸೆಂಬರ್ 2019, 21:00 IST
ಆನೇಕಲ್ ತಾಲ್ಲೂಕಿನ ಮುತ್ತೂರು ಗ್ರಾಮದಲ್ಲಿ ವಿಶ್ವ ಬುದ್ಧ ದಮ್ಮ ಸಂಘದ ವತಿಯಿಂದ ಆಯೋಜಿಸಿದ್ದ ಧಮ್ಮ ಜಾಗೃತಿ ಅಭಿಯಾನದ ದೀಕ್ಷಾ ಸಮಾರಂಭವನ್ನು ಬೆಂಗಳೂರು ನಾಗಸೇನಾ ಬುದ್ಧ ವಿಹಾರದ ಭಿಕ್ಕು ಬುದ್ದಮ್ಮ ಚಾಲನೆ ನೀಡಿದರು
ಆನೇಕಲ್ ತಾಲ್ಲೂಕಿನ ಮುತ್ತೂರು ಗ್ರಾಮದಲ್ಲಿ ವಿಶ್ವ ಬುದ್ಧ ದಮ್ಮ ಸಂಘದ ವತಿಯಿಂದ ಆಯೋಜಿಸಿದ್ದ ಧಮ್ಮ ಜಾಗೃತಿ ಅಭಿಯಾನದ ದೀಕ್ಷಾ ಸಮಾರಂಭವನ್ನು ಬೆಂಗಳೂರು ನಾಗಸೇನಾ ಬುದ್ಧ ವಿಹಾರದ ಭಿಕ್ಕು ಬುದ್ದಮ್ಮ ಚಾಲನೆ ನೀಡಿದರು   

ಆನೇಕಲ್: ಬೌದ್ಧ ಧರ್ಮ ಪಂಚಶೀಲ ಮತ್ತು ಅಷ್ಠಾಂಗ ಮಾರ್ಗದ ಮೂಲಕ ಜನರಲ್ಲಿ ಮೌಲ್ಯಗಳನ್ನು ಭಿತ್ತಿ ಜನರು ನೆಮ್ಮದಿಯಿಂದ ಜೀವಿಸಲು ಮಾರ್ಗವನ್ನು ತೋರಿಸಿದೆ. ಬುದ್ಧನ ಆರಾಧನೆ ಮತ್ತು ತತ್ವಗಳನ್ನು ಅಳವಡಿಸಿಕೊಳ್ಳುವ ಮೂಲಕ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯ ಎಂದು ಬೆಂಗಳೂರು ನಾಗಸೇನಾ ಬುದ್ಧ ವಿಹಾರದ ಭಿಕ್ಕು ಬುದ್ದಮ್ಮ ಹೇಳಿದರು.

ಅವರು ತಾಲ್ಲೂಕಿನ ಮುತ್ತೂರು ಗ್ರಾಮದಲ್ಲಿ ವಿಶ್ವ ಬುದ್ಧ ದಮ್ಮ ಸಂಘದ ವತಿಯಿಂದ ಆಯೋಜಿಸಿದ್ದ ಧಮ್ಮ ಜಾಗೃತಿ ಅಭಿಯಾನದ ದೀಕ್ಷಾ ಸಮಾರಂಭದಲ್ಲಿ ಮಾತನಾಡಿದರು.

‘ಆಸೆಯೇ ದುಃಖಕ್ಕೆ ಕಾರಣ ಎಂಬ ಬುದ್ಧನ ಬೋಧನೆಯನ್ನು ನಾವು ಅಳವಡಿಸಿಕೊಂಡರೆ ಯಾವುದೇ ರೀತಿಯ ಸಮಸ್ಯೆಗಳಿಲ್ಲದೇ ಜೀವನವನ್ನು ಸಾಗಿಸಬಹುದು. ಅತಿ ಆಸೆಯಿಂದ ಜನರು ಬಳಲುತ್ತಿದ್ದಾರೆ. ಇವರಿಗೆ ಮುಕ್ತಿ ಮಾರ್ಗವನ್ನು ತೋರಿಸುವ ನಿಟ್ಟಿನಲ್ಲಿ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಚಿಂತನೆಗಳು ವಿಶ್ವ ಶಾಂತಿಗೆ ಪೂರಕವಾಗಿವೆ’ ಎಂದರು.

ADVERTISEMENT

ವಿಶ್ವ ಬುದ್ಧ ದಮ್ಮ ಸಂಘದ ಪ್ರಧಾನ ಸಂಚಾಲಕ ಡಾ.ಎಂ.ವೆಂಕಟಸ್ವಾಮಿ ಮಾತನಾಡಿ, ‘ವಿಶ್ವ ಬುದ್ಧ ದಮ್ಮ ಸಂಘವು 2020 ಅಕ್ಟೋಬರ್‌ 14ರಂದು ಬೆಂಗಳೂರಿನಲ್ಲಿ 10 ಲಕ್ಷ ಜನರಿಂದ ಮಹಾ ದಮ್ಮ ದೀಕ್ಷೆ ನಡೆಸಲಿದ್ದು ದಮ್ಮ ಜಾಗೃತಿಯ ಅಭಿಯಾನದ ಅಂಗವಾಗಿ ಹಳ್ಳಿಹಳ್ಳಿಗಳಲ್ಲಿ, ಪಟ್ಟಣಗಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಉಪಾಸಕ ಸಾಯಿಪ್ರಕಾಶ್‌ ಅವರ ಪರಿವರ್ತನೆಯ ಜಾಗದಲ್ಲಿ ಬುದ್ಧನ ಪ್ರತಿಮೆ ಅನಾವರಣ ಹಾಗೂ ದಮ್ಮ ದೀಕ್ಷಾ ಸಮಾರಂಭದ ಮೂಲಕ ಜಾಗೃತಿಗೆ ಚಾಲನೆ ನೀಡಲಾಗಿದೆ. ಬುದ್ಧ ವಿಹಾರವನ್ನು ನಿರ್ಮಿಸಿ ಪ್ರಾರ್ಥನಾ ಕೇಂದ್ರವನ್ನು ಪ್ರಾರಂಭ ಮಾಡಬೇಕೆಂಬ ಉದ್ದೇಶ ಹೊಂದಲಾಗಿದೆ. ಜಾತಿ ಉಪಜಾತಿಗಳ ಹೆಸರಿನಲ್ಲಿ ಬೌದ್ಧ ಜನಸಂಖ್ಯೆಯು ಕ್ಷೀಣಿಸುತ್ತಿದೆ. ಹಾಗಾಗಿ 2021ರ ಜನಗಣತಿ ಸಂದರ್ಭದಲ್ಲಿ ಬೌದ್ಧ ಧರ್ಮದ ಹೆಸರಿನಲ್ಲಿ ಸಾಮೂಹಿಕವಾಗಿ ಗುರುತಿಸಿಕೊಳ್ಳಲು ದಮ್ಮ ದೀಕ್ಷೆಗಳು ಹೆಚ್ಚಾಗಬೇಕಾಗಿದೆ’ ಎಂದರು.

ನಿವೃತ್ತ ಐಪಿಎಸ್‌ ಅಧಿಕಾರಿ ಡಾ.ಸುಭಾಷ್ ಭರಣಿ, ವಿಶ್ವ ಬುದ್ಧ ದಮ್ಮ ಸಂಘದ ಅಧ್ಯಕ್ಷ ಡಾ.ಎಚ್.ಆರ್.ಸುರೇಂದ್ರ, ಎರಿನ್‌ ಪ್ರತಿಷ್ಠಾನದ ಅಧ್ಯಕ್ಷ ಸಾಯಿಪ್ರಕಾಶ್‌, ವಕೀಲರ ಸಂಘದ ಅಧ್ಯಕ್ಷ ವೈ.ಪ್ರಕಾಶ್‌ ಪಟಾಪಟ್‌, ವಿಧಾತ್‌ ವಿದ್ಯಾ ಸಂಸ್ಥೆಯ ಸಂಸ್ಥಾಪಕ ತಾ.ನಂ.ಕುಮಾರಸ್ವಾಮಿ, ರಿಪಬ್ಲಿಕನ್‌ ಸೇನೆಯ ಅಧ್ಯಕ್ಷ ಜಿಗಣಿ ಶಂಕರ್, ಜೈಭೀಮ್‌ ದಳದ ವೈ.ಎಸ್‌.ದೇವೂರ್‌, ರಿಪಬ್ಲಿಕನ್‌ ಪಕ್ಷದ ರಾಜ್ಯ ಯುವ ಘಟಕದ ಕಾರ್ಯದರ್ಶಿ ಅಂಬರೀಷ್‌, ಬಹುಜನ ದಲಿತ ಸಂಘರ್ಷ ಸಮಿತಿಯ ಆರ್.ಎಂ.ಎನ್‌.ರಮೇಶ್‌, ದಲಿತ ಸೇವಾ ಸಂಘ ಸಮಿತಿಯ ಜಿ.ಚಂದ್ರಪ್ಪ, ದಲಿತ ಸಂರಕ್ಷಕ ಸಮಿತಿಯ ಲಯನ್ ಬಾಲಕೃಷ್ಣ, ಮುಖಂಡರಾದ ಎನ್‌.ಮೂರ್ತಿ, ಎಂ.ವೆಂಕಟೇಶ್, ವಿ.ಗೋಪಾಲ್‌, ಮೋಹನಾ ಭರಣಿ, ಕೆ.ನಾರಾಯಣಪ್ಪ ಹಾಜರಿದ್ದರು.

ಕಲಾವಿದೆ ಸಾಗರಿಕ ಭರತನಾಟ್ಯ ಪ್ರದರ್ಶನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.