ADVERTISEMENT

ಕೆರೆ ಪ್ರದೇಶಕ್ಕೆ ಡಿ.ಸಿ ಭೇಟಿ

ನಾಗರಕೆರೆ, ಚಿಕ್ಕತುಮಕೂರು ಕೆರೆ ಕಲುಷಿತ: ಜನರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2022, 5:55 IST
Last Updated 29 ನವೆಂಬರ್ 2022, 5:55 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಕ್ಕತುಮಕೂರು ಕೆರೆ ನೀರು ಕಲುಷಿತಗೊಂಡಿರುವ ಬಗ್ಗೆ ಮಜರಾಹೊಸಹಳ್ಳಿ ಗ್ರಾ.ಪಂ. ಅಧ್ಯಕ್ಷ ಆನಂದ್‌ ಮತ್ತು ಸದಸ್ಯ ಸಂದೇಶ್‌ ಅವರು, ಜಿಲ್ಲಾಧಿಕಾರಿ ಆರ್‌. ಲತಾ ಅವರಿಗೆ ಮನವಿ ಸಲ್ಲಿಸಿದರು
ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಕ್ಕತುಮಕೂರು ಕೆರೆ ನೀರು ಕಲುಷಿತಗೊಂಡಿರುವ ಬಗ್ಗೆ ಮಜರಾಹೊಸಹಳ್ಳಿ ಗ್ರಾ.ಪಂ. ಅಧ್ಯಕ್ಷ ಆನಂದ್‌ ಮತ್ತು ಸದಸ್ಯ ಸಂದೇಶ್‌ ಅವರು, ಜಿಲ್ಲಾಧಿಕಾರಿ ಆರ್‌. ಲತಾ ಅವರಿಗೆ ಮನವಿ ಸಲ್ಲಿಸಿದರು   

ದೊಡ್ಡಬಳ್ಳಾಪುರ:ಚೆನ್ನೈನ ರಾಷ್ಟ್ರೀಯ ಹಸಿರು ನ್ಯಾಯಪೀಠದ ಆದೇಶದಂತೆ ಸೋಮವಾರ ಜಿಲ್ಲಾಧಿಕಾರಿ ಆರ್‌. ಲತಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ನಾಗರಕೆರೆ ಹಾಗೂ ಚಿಕ್ಕತುಮಕೂರು ಕೆರೆಗೆ ಭೇಟಿ ನೀಡಿ ವಾಸ್ತವ ಸ್ಥಿತಿಗತಿ ಕುರಿತು ಮಾಹಿತಿ ಪಡೆದರು.

ಸ್ಥಳದಲ್ಲೇ ಹಾಜರಿದ್ದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ, ಸರಿಯಾಗಿ ಕಾರ್ಯ ನಿರ್ವಹಿಸಿದ್ದರೆ ಇಷ್ಟೆಲ್ಲಾ ಅವಾಂತರ ಸೃಷ್ಟಿಯಾಗುತ್ತಿರಲಿಲ್ಲ ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸಬೇಕಿರುವ ಮಂಡಳಿಯ ಕಚೇರಿ ಬೆಂಗಳೂರು ನಗರದಲ್ಲಿ ಇರುವುದೇ ಅವೈಜ್ಞಾನಿಕವಾಗಿದೆ. ತಕ್ಷಣದಿಂದಲೇ ಕಚೇರಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ಸ್ಥಳಾಂತರಿಸಿ ಜಿಲ್ಲೆಯ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಸೂಚಿಸಿದರು.

ADVERTISEMENT

ನಾಗರಕೆರೆ ನೀರು ಒಳಚರಂಡಿ ನೀರಿನಿಂದ ಕಲುಷಿತವಾಗುತ್ತಿದೆ. ಕಟ್ಟಡ ತ್ಯಾಜ್ಯ ಸೇರಿದಂತೆ ಇತರೆ ತ್ಯಾಜ್ಯಗಳನ್ನು ಕೆರೆಗೆ ಹಾಕಲಾಗುತ್ತಿದೆ. ಚಿಕ್ಕತುಮಕೂರು ಕೆರೆಯಲ್ಲಿ ನಗರಸಭೆ ಒಳಚರಂಡಿ ನೀರು ಸೂಕ್ತ ರೀತಿಯಲ್ಲಿ ಶುದ್ಧೀಕರಣ ಮಾಡದೆ ಹೊರಗೆ ಬಿಡಲಾಗುತ್ತಿದೆ. ಇದರ ವಿರುದ್ಧ ಒಂದು ವರ್ಷದ ಹಿಂದೆ ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ರಾಷ್ಟ್ರೀಯ ಹಸಿರು ನ್ಯಾಯ ಪೀಠ ನ. 1ರಂದು ಕೆರೆಯ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ವಾಸ್ತವ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಆದೇಶಿಸಿದೆ.

ವಿಜ್ಞಾನ ಉಪನ್ಯಾಸಕ ಗಿರೀಶ್‌ ಮಾತನಾಡಿ, ಜಿಲ್ಲಾಧಿಕಾರಿ ಭೇಟಿ ನೀಡುವ ಮಾಹಿತಿ ತಿಳಿದ ನಗರಸಭೆ ಅಧಿಕಾರಿಗಳು ತರಾತುರಿಯಲ್ಲಿ ಬೆಳಿಗ್ಗೆ ಕೆರೆ ಅಂಚಿನಲ್ಲಿ ಸ್ವಚ್ಛತೆಗೆ ಮುಂದಾಗಿದ್ದಾರೆ ಎಂದು ದೂರಿದರು.

ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡ್‌ಗಳಿವೆ. 25 ವಾರ್ಡ್‌ಗಳಲ್ಲಿ ಮಾತ್ರ ಒಳಚರಂಡಿ ವ್ಯವಸ್ಥೆ ಮಾಡಲಾಗಿದೆ. ಇದರಲ್ಲೂ ಎಲ್ಲಾ ಮನೆಗಳಿಗೆ ಒಳಚರಂಡಿ ಸಂಪರ್ಕ ಕಲ್ಪಿಸುವಂತೆ ಕಡ್ಡಾಯ ಮಾಡಿಲ್ಲ. ಇದರಿಂದ ಕೆರೆಯಲ್ಲಿನ ನೀರು ಕಲುಷಿತವಾಗಲು ಕಾರಣವಾಗಿದೆ ಎಂದರು.

ಮನವಿ ಸಲ್ಲಿಕೆ: ಜಿಲ್ಲಾಧಿಕಾರಿ ಅವರಿಗೆ ಸ್ಥಳೀಯ ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದ್‌, ಸದಸ್ಯ ಸಂದೇಶ್‌ ಮನವಿ ಸಲ್ಲಿಸಿದರು.

ಚಿಕ್ಕತುಮಕೂರು ಕೆರೆಗೆ ನಗರಸಭೆಯ ಒಳಚರಂಡಿ ನೀರನ್ನು ಯಾವುದೇ ರೀತಿಯ ಶುದ್ಧೀಕರಣ ಮಾಡದೆ ಬಿಡಲಾಗುತ್ತಿದೆ. ಜೊತೆಗೆ, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಹಾಗೂ ಕೈಗಾರಿಕಾ ಪ್ರದೇಶದಲ್ಲಿನ ಗಾರ್ಮೆಂಟ್ಸ್‌, ಔಷಧಿ ತಯಾರಿಕಾ ಕಾರ್ಖಾನೆಯವರು ನೀರನ್ನು ಶುದ್ಧೀಕರಣ ಮಾಡದೆ ಕೆರೆಗೆ ಬಿಡುತ್ತಿದ್ದಾರೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಕೆರೆಯಲ್ಲಿನ ನೀರು ಕಲುಷಿತವಾಗಲು ಕಾರಣವಾಗಿದೆ ಎಂದು ದೂರಿದರು.

ಯುವ ಸಂಚಲನ ಅಧ್ಯಕ್ಷ ಚಿದಾನಂದ್‌ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ‘2016ರಲ್ಲಿಯೇ ಒಳಚರಂಡಿ ನೀರು ಕೆರೆಗೆ ಸೇರದಂತೆ ಹಾಗೂ ಇತರೆ ಪರಿಹಾರ ಕುರಿತ ಸಮಗ್ರ ವರದಿಯನ್ನು ನಗರಸಭೆಗೆ ಸಲ್ಲಿಸಲಾಗಿದೆ. ಆದರೂ, ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ’ ಎಂದು ಆರೋಪಿಸಿದರು.

ತಹಶೀಲ್ದಾರ್‌ ಮೋಹನಕುಮಾರಿ, ನಗರಸಭೆ ಪೌರಾಯುಕ್ತ ಶಿವಶಂಕರ್‌, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮುನಿರಾಜು, ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀನಾಥ್‌ಗೌಡ, ಮುಖಂಡರಾದ ಟಿ.ಜಿ. ಮಂಜುನಾಥ್‌, ಮಾರಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.