ADVERTISEMENT

ಬನ್ನೇರುಘಟ್ಟ ಜೈವಿಕ ಉದ್ಯಾನ | ಮಾರಕ ವೈರಸ್‌: ಏಳು ಚಿರತೆ ಮರಿ ಸಾವು

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2023, 0:30 IST
Last Updated 18 ಸೆಪ್ಟೆಂಬರ್ 2023, 0:30 IST
<div class="paragraphs"><p>ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಮಾರಕ ವೈರಸ್‌ನಿಂದ&nbsp;ರಕ್ತ ಭೇದಿಯಾಗಿ ಮೃತಪಟ್ಟ&nbsp;ಚಿರತೆ&nbsp;</p></div>

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಮಾರಕ ವೈರಸ್‌ನಿಂದ ರಕ್ತ ಭೇದಿಯಾಗಿ ಮೃತಪಟ್ಟ ಚಿರತೆ 

   

ಆನೇಕಲ್: ಸಾಮಾನ್ಯವಾಗಿ ಬೆಕ್ಕುಗಳಲ್ಲಿ ಕಂಡುಬರುವ ಮಾರಕ ಫೆಲಿನ್‌ ಪ್ಯಾನ್ಲೂಕೋಪೇನಿಯಾ ವೈರಸ್‌ ತಗುಲಿ ಬನ್ನೇರುಘಟ್ಟ ಜೈವಿಕ ಉದ್ಯಾನದ 3ರಿಂದ 10 ತಿಂಗಳ ವಯೋಮಾನದ ಏಳು ಚಿರತೆ ಮರಿಗಳು ಮೃತಪಟ್ಟಿವೆ.  

ಆಗಸ್ಟ್‌ 22ರಂದು ಉದ್ಯಾನದ ಚಿರತೆ ಮರಿಗಳಲ್ಲಿ ಮೊದಲ ಬಾರಿಗೆ ಸೋಂಕು ಕಾಣಿಸಿಕೊಂಡಿತ್ತು. ಸೆಪ್ಟೆಂಬರ್ 5ರ ವೇಳೆಗೆ ಏಳೂ ಮರಿಗಳು ಸಾವಿಗೀಡಾಗಿವೆ.

ADVERTISEMENT

ಬನ್ನೇರುಘಟ್ಟ ಉದ್ಯಾನದಲ್ಲಿ ಇತ್ತೀಚಿಗಷ್ಟೇ ಚಿರತೆ ಸಫಾರಿ ಆರಂಭಿಸಿ ಒಂಬತ್ತು ಚಿರತೆ ಮರಿಗಳನ್ನು ಸಫಾರಿಯಲ್ಲಿ ಬಿಡಲಾಗಿತ್ತು. ಆ ಪೈಕಿ ಸೋಂಕಿನಿಂದ ಮೂರು ಚಿರತೆ ಮರಿಗಳು ಮೃತಪಟ್ಟಿವೆ.

ಬಿಳಿಗಿರಿರಂಗನ ಬೆಟ್ಟ, ಮೈಸೂರು ಮೃಗಾಲಯ ಮತ್ತು ಮದ್ದೂರು ಬಳಿ ಗಾಯಗೊಂಡಿದ್ದ ಚಿರತೆ ಮರಿಗಳನ್ನು ರಕ್ಷಿಸಿ ಬನ್ನೇರುಘಟ್ಟ ಜೈವಿಕ ಉದ್ಯಾನದ ಪುನರ್ವಸತಿ ಕೇಂದ್ರಕ್ಕೆ ತರಲಾಗಿತ್ತು. ಅಲ್ಲಿ ಆರೈಕೆ ಮಾಡಿದ ನಂತರ ಸಫಾರಿಗೆ ಬಿಡಲಾಗಿತ್ತು. ಇನ್ನೂ ಪುನರ್ವಸತಿ ಕೇಂದ್ರದ ಆರೈಕೆಯಲ್ಲಿದ್ದ ನಾಲ್ಕು ಚಿರತೆ ಮರಿಗಳು ಮೃತಪಟ್ಟಿವೆ. ಈ ಕೇಂದ್ರದಲ್ಲಿ ಒಟ್ಟು 80 ಚಿರತೆಗಳಿವೆ.

ಮೃತ ಚಿರತೆ ಮರಿಗಳ ರಕ್ತವನ್ನು ಜೈವಿಕ ಉದ್ಯಾನದ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿದಾಗ ಚಿರತೆಗಳಿಗೆ ಫೆಲಿನ್‌ ಪ್ಯಾನ್ಲೂಕೋಪೇನಿಯಾ ವೈರಸ್‌ ಸೋಂಕು ತಗುಲಿರುವುದು ಖಚಿತವಾಗಿದೆ. ಕೂಡಲೇ ಉದ್ಯಾನದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಬೇರೆ ಪ್ರಾಣಿಗಳಿಗೆ ಸೋಂಕು ಹರಡದಂತೆ ಕ್ರಮವಹಿಸಲಾಗಿದೆ ಎಂದು ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್‌ ತಿಳಿಸಿದ್ದಾರೆ.

ಈ ವೈರಸ್‌ ತಗುಲಿದರೆ ವಾಂತಿ, ಭೇದಿಯಾಗಿ ಬಿಳಿ ರಕ್ತಕಣ ಕಡಿಮೆಯಾಗುತ್ತವೆ. ಈ ಲಕ್ಷಣ ಕಾಣಿಸಿಕೊಂಡು ಚಿರತೆ ಮರಿಗಳನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡಲಾಗಿದೆ. ಪ್ರತಿದಿನ ಎರಡು ಬಾರಿ ಗ್ಲೂಕೋಸ್‌ ನೀಡುವ ಮೂಲಕ ಅವಶ್ಯಕ ಆಂಟಿ ವೈರಲ್‌ ಔಷಧಿ ನೀಡಲಾಗುತ್ತಿದೆ. ಎಲ್ಲಾ ಚಿರತೆಗಳಿಗೂ ಬೂಸ್ಟರ್‌ ಡೋಸ್‌ ಹಾಕಲಾಗಿದೆ ಎಂದು ತಿಳಿಸಿದರು.

ಉದ್ಯಾನದಲ್ಲಿ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಎಲ್ಲೆಡೆ ಬ್ಲಿಚೀಂಗ್‌ ಪೌಡರ್‌ ಸಿಂಪಡಿಸಲಾಗಿದೆ. ಎಲ್ಲಾ ಕೇಜ್‌ಗಳಲ್ಲಿ ವೈರಸ್‌  ನಾಶವಾಗಲು ಬರ್ನಿಂಗ್‌ ಮಾಡಲಾಗಿದೆ. ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಉದ್ಯಾನದ ವೈದ್ಯರಾದ ಡಾ.ಉಮಾಶಂಕರ್‌, ಡಾ.ವಿಜಯಕುಮಾರ್, ಡಾ.ಮಂಜುನಾಥ್‌ ಅವರ ನೇತೃತ್ವದಲ್ಲಿ ತಜ್ಞರಾದ ಡಾ.ಅನ್ಸರ್‌ ಕಮರನ್‌, ಡಾ.ಉಪೇಂದ್ರ, ಡಾ.ವೀರೇಗೌಡ ಅವರನ್ನು ಸಂಪರ್ಕಿಸಿ, ಅವರ ಸಲಹೆಯಂತೆ ಚಿಕಿತ್ಸೆ ನೀಡಲಾಗಿದೆ. ಹುಲಿ ಮತ್ತು ಸಿಂಹಗಳಿಗೂ ಬೂಸ್ಟರ್‌ ಡೋಸ್‌ ಹಾಕಲು ಕ್ರಮ ಕೈಗೊಳ್ಳಲಾಗಿದೆ ಎಂದು ಸೂರ್ಯಸೇನ್‌ ವಿವರಿಸಿದರು.

ಎಲ್ಲಾ ಪ್ರಯತ್ನಗಳ ಫಲವಾಗಿ ಸೋಂಕು ನಿಯಂತ್ರಣಕ್ಕೆ ಬಂದಿದೆ. ಬನ್ನೇರುಘಟ್ಟ ಪ್ರಾಣಿ ಪುನರ್ವಸತಿ ಕೇಂದ್ರದಲ್ಲಿ 80 ಚಿರತೆಗಳಿವೆ. ಈ ಪೈಕಿ ಸೋಂಕು ತಗುಲಿದ ಚಿರತೆಗಳು ಮತ್ತು ಆ ಚಿರತೆಗಳನ್ನು ನೋಡಿಕೊಳ್ಳುವ ಪ್ರಾಣಿ ಪಾಲಕರನ್ನು ಬೇರೆ ಪ್ರಾಣಿಗಳು ಇರುವೆಡೆ ಹೋಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಮಾರಕ ವೈರಸ್‌ನಿಂದ ರಕ್ತ ಭೇದಿಯಾಗಿ ಮೃತಪಟ್ಟ ಚಿರತೆ 

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಮಾರಕ ವೈರಸ್‌ನಿಂದಾಗಿ ಏಳು ಚಿರತೆ ಮರಿಗಳು ಮೃತಪಟ್ಟ ಹಿನ್ನೆಲೆಯಲ್ಲಿ ಉದ್ಯಾನದಲ್ಲಿ ಔಷಧಿ  ಸಿಂಪಡಣೆ ಮಾಡಲಾಗಿದೆ.

ಬೆಕ್ಕುಗಳಿಂದ ಹರಡುವ ವೈರಸ್‌

ಬೆಕ್ಕುಗಳಿಂದ ಈ ವೈರಸ್‌ ಹರಡುತ್ತದೆ. ಕಾಡು ಬೆಕ್ಕು ಮತ್ತು ಸಾಕು ಬೆಕ್ಕುಗಳಿಂದ ಸೋಂಕು ಹರಡುವ ಸಾಧ್ಯತೆಯಿದೆ. ಸೋಂಕು ತಗುಲಿದ ಪ್ರಾಣಿಗಳು ಆಹಾರ ಜೀರ್ಣವಾಗದೆ ರಕ್ತ ಭೇದಿಯಾಗುತ್ತದೆ. ಬಿಳಿ ರಕ್ತಕಣಗಳು ಕಡಿಮೆಯಾಗಿ ನಿಶ್ಯಕ್ತಿಯಿಂದ ಮೃತಪಡುತ್ತವೆ.  *** ಸೋಂಕು ನಿಯಂತ್ರಣ  ಆಗಸ್ಟ್‌ 22ರಂದು ಚಿರತೆ ಮರಿಗಳಲ್ಲಿ ಸೋಂಕು ಕಂಡು ಬಂದಿತು. ಸೆಪ್ಟೆಂಬರ್ 5ರ ವೇಳೆಗೆ 7 ಚಿರತೆ ಮರಿಗಳು ಮೃತಪಟ್ಟವು. ಕಾಯಿಲೆಯ ಬಗ್ಗೆ ತಕ್ಷಣ ಮಾಹಿತಿ ದೊರೆತಿದ್ದರಿಂದ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಯಿತು. ಬನ್ನೇರುಘಟ್ಟ ಆರೋಗ್ಯ ಸಲಹಾ ಸಮಿತಿಯ ಸೂಚನೆಯಂತೆ ಎಲ್ಲಾ ಕ್ರಮ ಕೈಗೊಂಡಿದ್ದರಿಂದ ಸೋಂಕು ನಿಯಂತ್ರಣಕ್ಕೆ ಬಂದಿದೆ. ಸೋಂಕು ತಗುಲಿದ್ದ ಒಟ್ಟು 12 ವನ್ಯಜೀವಿಗಳ ಪೈಕಿ ಚಿಕಿತ್ಸೆ ನಂತರ ನಾಲ್ಕು ಚಿರತೆ ಮರಿ ಮತ್ತು ಒಂದು ಸಿಂಹದ ಮರಿ ಚೇತರಿಸಿಕೊಂಡಿವೆ. ಎಲ್ಲ ಪ್ರಾಣಿಗಳಿಗೂ ಬೂಸ್ಟರ್‌ ಡೋಸ್‌ ನೀಡಲಾಗಿದ್ದು ಹೊಸ ಪ್ರಕರಣ ವರದಿ ಆಗಿಲ್ಲ  ಎಂದು ಸೂರ್ಯಸೇನ್‌ ತಿಳಿಸಿದ್ದಾರೆ.

ನಿಪಾ ವೈರಸ್‌: ಕಟ್ಟೆಚ್ಚರ

ಆನೇಕಲ್: ಕೇರಳದಲ್ಲಿ ನಿಪಾ ಸೋಂಕು ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಉದ್ಯಾನದಲ್ಲಿ ದಿನಕ್ಕೆ ಎರಡು ಬಾರಿ ಔಷಧಿ ಸಿಂಪಡಿಸಲಾಗುತ್ತಿದೆ. ಪಾರ್ಕ್‌ ಒಳಬರುವ ಬಾವುಲಿಗಳ ಬಗ್ಗೆ ನಿಗಾ ಇಡಲಾಗಿದೆ. ಉದ್ಯಾನಕ್ಕೆ ಬರುವ ಪ್ರವೇಶದ್ವಾರ ಮತ್ತು ನಿರ್ಗಮನ ದ್ವಾರದಲ್ಲಿ ಸೋಂಕು ನಿವಾರಕ ದ್ರಾವಣ  ವ್ಯವಸ್ಥೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಪ್ರವಾಸಿಗರಿಗೆ ಥರ್ಮಲ್‌ ಸ್ಕ್ಯಾನಿಂಗ್‌ ಮಾಡಲು ಸಿದ್ದತೆ ಮಾಡಲಾಗುತ್ತಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.