ADVERTISEMENT

ಕೆರೆಯಲ್ಲಿ ಆಳ ಗುಂಡಿ, ಮಣ್ಣು ರವಾನೆ ದೂರು

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2019, 13:16 IST
Last Updated 12 ಆಗಸ್ಟ್ 2019, 13:16 IST
ಕೆರೆಯಲ್ಲಿ ಮಣ್ಣು ತೆಗೆಯುತ್ತಿರುವುದು
ಕೆರೆಯಲ್ಲಿ ಮಣ್ಣು ತೆಗೆಯುತ್ತಿರುವುದು   

ದೇವನಹಳ್ಳಿ: ತಾಲ್ಲೂಕಿನ ವಿಶ್ವನಾಥಪುರ ಕೆರೆಯಲ್ಲಿ ಖಾಸಗಿಯಾಗಿ ಆಳವಾದ ಗುಂಡಿಗಳನ್ನು ಜೆಸಿಬಿ ಯಂತ್ರದ ಮೂಲಕ ತೋಡಿ ಮಣ್ಣು ರವಾನಿಸಲಾಗುತ್ತಿದೆ ಎಂದು ಸ್ಥಳೀಯ ಗ್ರಾಮದ ಯುವಕ ಮಧು ಆರೋಪಿಸಿದರು.

ಕೆರೆಯಲ್ಲಿನ ಮಣ್ಣು ಹೊರ ತೆಗೆಯಲು ಸ್ಥಳೀಯ ಕಂದಾಯ ಅಧಿಕಾರಿಗಳ ಅನುಮತಿ ಪಡೆಯಬೇಕು. ನಂತರ ಕೆರೆಯಲ್ಲಿ ಮೂರು ಅಡಿಗಳವರೆಗೆ ತೆಗೆಯಲು ಮಾತ್ರ ಕಾನೂನಿನಲ್ಲಿ ಅವಕಾಶವಿದೆ ಹಾಗಿದ್ದರೂ ಎಂಟರಿಂದ ಹತ್ತು ಅಡಿಗಳವರೆಗೆ ಕೆರೆಯಂಗಳದಲ್ಲಿ ಎಲ್ಲಂದರಲ್ಲಿ ಗುಂಡಿ ತೋಡಿ ಖಾಸಗಿ ಗುತ್ತಿಗೆದಾರರು ರಸ್ತೆ ಅಭಿವೃದ್ಧಿಗೆ ಮಣ್ಣುಸಾಗಾಣಿಗೆ ಮಾಡುತ್ತಿದ್ದಾರೆ ಎಂದು ದೂರಲಾಗಿದೆ.

‘ಇದನ್ನು ಪ್ರಶ್ನಿಸಿದರೆ ಇಲ್ಲೆ ಮಣ್ಣು ಬೇಕು, ಇಷ್ಟೆ ಆಳ ತೆಗೆಯಬೇಕು ಎಂದು ಹೇಳಲು ನೀವು ಯಾರು’ ಎಂದು ಮರು ಪ್ರಶ್ನಿಸುತ್ತಾರೆ ಎಂದು ದೂರಿದರು.

ADVERTISEMENT

ಗ್ರಾಮ ಪಂಚಾಯಿತಿ ಕೇಂದ್ರಸ್ಥಾನ ಹೊಂದಿರುವ ಗ್ರಾಮಕ್ಕೆ ಹೊಂದಿಕೊಂಡು ಕೆರೆ ಇದೆ. ಕೆರೆಯಲ್ಲಿ ಅಪಾರವಾದ ಅಲ್ಲಲ್ಲಿ ಆಳವಾದ ಗುಂಡಿ ಬಿದ್ದರೆ ಮಳೆಗಾಲದಲ್ಲಿ ನೀರು ತುಂಬುವ ಗುಂಡಿಗಳಲ್ಲಿ ಆಕಸ್ಮಿಕವಾಗಿ ಮಕ್ಕಳು ಇಳಿದು ಅನಾಹುತವಾದರೆ ಯಾರು ಜವಾಬ್ದಾರರು ಎಂದು ಆರೋಪಿಸಿದರು.

ಯಾವ ಕ್ಷಣದಲ್ಲಿ ಮಳೆ ಬಂದು ಅನಾಹುತವಾಗುತ್ತದೆ ಎಂದು ಹೇಳಲಿಕ್ಕೆ ಬರುವುದಿಲ್ಲ. ಉತ್ತರ ಕರ್ನಾಟಕದ ನೆರೆ ಹಾವಳಿಯಂತೆ ಆದರೆ ಇಡಿ ಗ್ರಾಮ ಅಪೋಶನವಾಗಲಿದೆ. ಇಂತಹ ಸಂದಿಗ್ದ ಸ್ಥಿತಿಯಲ್ಲಿ ಗ್ರಾಮದ ಬುಡದಲ್ಲಿರುವ ಕೆರೆಯಲ್ಲಿ ಮಣ್ಣು ಸಾಗಾಣಿಕೆ ಮಾಡುತ್ತಿದ್ದಾರೆ. ಭವಿಷ್ಯದಲ್ಲಿ ಇದು ಅಪಾಯಕಾರಿ ಬೆಳವಣಿಗೆಯಾಗಿದ್ದು, ಸ್ಥಳೀಯ ಕಂದಾಯ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಎಚ್ಚೆತ್ತು ಕಡಿವಾಣ ಹಾಕಬೇಕು ಎಂದು ಅವರು ಒತ್ತಾಯಿಸಿದರು.

‘ಕೆರೆ ಅಭಿವೃದ್ಧಿ ಬಗ್ಗೆ ನಮ್ಮ ತಕರಾರು ಇಲ್ಲ. ಆಳವಾದ ಗುಂಡಿ ತೋಡುತ್ತಿರುವುದು ಆತಂಕವಾಗುತ್ತಿದೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.