ADVERTISEMENT

ಅತ್ತಿಬೆಲೆ ಗಡಿಯಲ್ಲಿ ಜೋರಾದ ಪಟಾಕಿ ಸದ್ದು

ಗಡಿ ಭಾಗದಲ್ಲಿ ತಲೆಯೆತ್ತಿದ ನೂರಾರು ಅಂಗಡಿಗಳು

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2019, 11:40 IST
Last Updated 25 ಅಕ್ಟೋಬರ್ 2019, 11:40 IST
ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಗಡಿಯಲ್ಲಿ ದೀಪಾವಳಿ ಪ್ರಯುಕ್ತ ತಲೆ ಎತ್ತಿರುವ ಸಾಲುಸಾಲು ಪಟಾಕಿ ಅಂಗಡಿಗಳು
ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಗಡಿಯಲ್ಲಿ ದೀಪಾವಳಿ ಪ್ರಯುಕ್ತ ತಲೆ ಎತ್ತಿರುವ ಸಾಲುಸಾಲು ಪಟಾಕಿ ಅಂಗಡಿಗಳು   

ಆನೇಕಲ್: ತಾಲ್ಲೂಕಿನ ಗಡಿಭಾಗ ಅತ್ತಿಬೆಲೆಯು ದೀಪಾವಳಿ ಹಬ್ಬಕ್ಕೆ ಪಟಾಕಿಗಳ ಸಡಗರದೊಂದಿಗೆ ಸಜ್ಜಾಗಿದ್ದು ಪಟಾಕಿ ಎಲ್ಲೆಡೆ ಪಟಾಕಿಗಳ ಸದ್ದು ಜೋರಾಗಿದೆ. ಬೆಂಗಳೂರು–ಹೊಸೂರು ರಸ್ತೆಯ ಹೆಬ್ಬಗೋಡಿಯಿಂದ ಪ್ರಾರಂಭವಾಗಿ ಗಡಿಭಾಗ ಅತ್ತಿಬೆಲೆವರೆಗೂ ನೂರಾರು ಪಟಾಕಿ ಅಂಗಡಿಗಳು ತಲೆ ಎತ್ತಿದ್ದು ರಾಜ್ಯದ ವಿವಿಧೆಡೆಯಿಂದ ಗ್ರಾಹಕರನ್ನು ಕೈಬೀಸಿ ಕರೆಯುತ್ತಿವೆ.

ತಾಲ್ಲೂಕಿನ ಹೆಬ್ಬಗೋಡಿ, ಬೊಮ್ಮಸಂದ್ರ, ಚಂದಾಪುರ, ತಿರುಮಗೊಂಡನಹಳ್ಳಿ ಗೇಟ್, ನೆರಳೂರು, ಯಾರಂಡಹಳ್ಳಿ, ಅತ್ತಿಬೆಲೆಯವರೆಗೂ ಕರ್ನಾಟಕದಲ್ಲಿ ಪಟಾಕಿ ಅಂಗಡಿಗಳಿವೆ. ಅತ್ತಿಬೆಲೆ ಗಡಿ ದಾಟುತ್ತಿದ್ದಂತೆ ತಮಿಳುನಾಡಿನ ಹೊಸೂರು ಭಾಗದಲ್ಲೂ ಭರಪೂರ ಪಟಾಕಿ ಅಂಗಡಿಗಳಿದ್ದು ಜನರು ಪಟಾಕಿಗಳನ್ನು ಕೊಳ್ಳಲು ಮುಗಿಬೀಳುತ್ತಿದ್ದಾರೆ. ಕಳೆದ ಎರಡು ಮೂರು ದಿನಗಳಿಂದ ಮಳೆಯಿಂದಾಗಿ ಪಟಾಕಿ ವ್ಯಾಪಾರ ನಿಧಾನಗತಿಯಲ್ಲಿತ್ತು ಆದರೆ ಗುರುವಾರ ಮಳೆ ಬಿಡುವು ನೀಡಿದ್ದರಿಂದ ಪಟಾಕಿ ವ್ಯಾಪಾರ ಜೋರಾಗಿತ್ತು.

ಶೇ 90ರವರೆಗೂ ರಿಯಾಯಿತಿ ಈ ಅಂಗಡಿಗಳಲ್ಲಿ ದೊರೆಯುವುದು ವಿಶೇಷ. ತಮಿಳುನಾಡಿನ ಶಿವಕಾಶಿಯಲ್ಲಿ ಪಟಾಕಿಗಳು ತಯಾರಾಗುತ್ತವೆ. ಹಾಗಾಗಿ ಈ ಭಾಗದಲ್ಲಿ ಕಡಿಮೆ ಬೆಲೆಗೆ ಪಟಾಕಿಗಳು ದೊರೆಯುತ್ತವೆ ಎಂದು ರಾಜ್ಯದ ವಿವಿಧೆಡೆಯಿಂದ ಗ್ರಾಹಕರು ಪಟಾಕಿಗಳನ್ನು ಕೊಳ್ಳಲು ಅತ್ತಿಬೆಲೆ ಗಡಿಗೆ ಪ್ರತಿ ವರ್ಷ ಬರುತ್ತಾರೆ. ಅಂಗಡಿಗಳ ಮುಂದೆ ಬನ್ನಿ ಬನ್ನಿ, ಶೇ.90, 95ರಷ್ಟು ಡಿಸ್ಕೌಂಟ್‌ ಎಂದು ಪೀಪೀ ಊದಿ ಕೂಗುವ ಹುಡುಗರ ದಂಡು ಕಂಡುಬಂದಿತು.

ADVERTISEMENT

ಬೆಂಗಳೂರು, ತುಮಕೂರು, ದೊಡ್ಡಬಳ್ಳಾಪುರ, ಉಡುಪಿ, ಹಾಸನ, ಮೈಸೂರುಗಳಿಂದಲೂ ಗ್ರಾಹಕರು ಪಟಾಕಿ ಕೊಳ್ಳಲು ಅತ್ತಿಬೆಲೆಗೆ ಬಂದಿದುದ್ದು ಕಂಡುಬಂದಿತು. ಇಲ್ಲಿ ಸಗಟು ಖರೀದಿ ಮಾಡಿ ಆಯಾ ಊರುಗಳಲ್ಲಿ ವ್ಯಾಪಾರ ಮಾಡಲು ವ್ಯಾಪಾರಿಗಳು ಅತ್ತಿಬೆಲೆಗೆ ಬಂದಿದುದ್ದು ಕಂಡು ಬಂದಿತು. ₹ 10 ರಿಂದ ₹ 20ಸಾವಿರವರೆಗಿನ ಬೆಲೆಯ ಪಟಾಕಿಗಳು ಅಂಗಡಿಗಳಲ್ಲಿ ಮಾರಾಟಕ್ಕಿವೆ.

ಒಂದು ಅಂಗಡಿ ಸ್ಥಾಪನೆ ಮಾಡಬೇಕಾದರೆ ಪರವಾನಗಿ ಸೇರಿದಂತೆ 2-2.5ಲಕ್ಷ ಖರ್ಚಾಗುತ್ತದೆ. ಎಲ್ಲಾ ವ್ಯಾಪಾರ ವಾರದಲ್ಲಿ ಮುಗಿಯಬೇಕು. ಇಲ್ಲವಾದಲ್ಲಿ ಮಾರಾಟಕ್ಕೆ ಮತ್ತೊಂದು ವರ್ಷ ಕಾಯಬೇಕಾಗುತ್ತದೆ. ನಿಧಾನಗತಿಯಲ್ಲಿ ವ್ಯಾಪಾರ ನಡೆಯುತ್ತಿದ್ದು ಶುಕ್ರವಾರ, ಶನಿವಾರ ವಾರಾಂತ್ಯದಲ್ಲಿ ಹೆಚ್ಚಿನ ಗ್ರಾಹಕರ ನಿರೀಕ್ಷೆಯಲ್ಲಿರುವುದಾಗಿ ಅಂಗಡಿಯೊಂದರ ಮಾಲೀಕ ವಿಜಯ್‌ಕುಮಾರ್ ಹೇಳುತ್ತಾರೆ.

ಟ್ರಾಫಿಕ್‌ ಜಾಂ: ಅತ್ತಿಬೆಲೆ ಗಡಿಭಾಗದಲ್ಲಿ ಪಟಾಕಿ ಅಂಗಡಿಗಳ ಸ್ಥಾಪನೆಯಿಂದಾಗಿ ಬುಧವಾರದಿಂದಲೇ ಟ್ರಾಫಿಕ್‌ಜಾಂ ಕಂಡುಬಂದಿತು. ಶುಕ್ರವಾರ, ಶನಿವಾರ ಮತ್ತಷ್ಟು ಟ್ರಾಫಿಕ್‌ಜಾಂ ಉಂಟಾಗುವ ಸಂಭವವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.